Advertisement

ಹೋಟೆಲ್‌ಗ‌ಳಲ್ಲಿ ಸೇವಾ ತೆರಿಗೆ ವಿಧಿಸಿದರೆ ಕ್ರಮ

03:50 AM Apr 15, 2017 | Team Udayavani |

ನವದೆಹಲಿ: ಆಹಾರ ಮತ್ತು ಪಾನೀಯಗಳ ಬಿಲ್‌ ಮೇಲೆ ಸೇವಾ ತೆರಿಗೆ ವಿಧಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

Advertisement

“ಸೇವಾ ತೆರಿಗೆ ಅಸ್ತಿತ್ವದಲ್ಲೇ ಇಲ್ಲ. ಆದರೂ ಅಕ್ರಮವಾಗಿ ಸೇವಾ ತೆರಿಗೆ ವಿಧಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸಲಹೆ ನೀಡಲು ನಿರ್ಧರಿಸಿದ್ದು, ಈ ಕುರಿತ ಪ್ರಸ್ತಾವವನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗಿದೆ. ಪ್ರಧಾನಿ ಕಾರ್ಯಾಲಯದ ಅನುಮತಿ ದೊರೆತ ಕೂಡಲೆ ಸಲಹೆಯನ್ನು ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಈ ಕುರಿತು ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಪಾಸ್ವಾನ್‌ ಮಾಹಿತಿ ನೀಡಿದ್ದಾರೆ.

ಗ್ರಾಹಕರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸ್ವಯಂಪ್ರೇರಿತ ಗ್ರಾಹಕ ಸಂಸ್ಥೆಗಳಿಗೆ ಕೇಂದ್ರದ ಈ ಕ್ರಮದಿಂದ ಅನುಕೂಲವಾಗಲಿದೆ ಎಂದಿರುವ ಸಚಿವಾಲಯದ ಅಧಿಕಾರಿ, ಸೇವಾ ತೆರಿಗೆ ಪಾವತಿಸುವಂತೆ ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ. ಗ್ರಾಹಕರೇ ಬಯಸಿದರೆ ವೇಯರ್‌ಗೆ ಟಿಪ್ಸ್‌ ನೀಡಬಹುದು ಎಂದಿದ್ದಾರೆ. ಹೋಟೆಲ್‌ಗ‌ಳಲ್ಲಿ ಸೇವಾ ತೆರಿಗೆ ವಿಧಿಸುವುದು ಕಡ್ಡಾಯವಲ್ಲ ಎಂದು ಜನವರಿಯಲ್ಲಷ್ಟೇ ಹೇಳಿದ್ದ ಗ್ರಾಹಕರ ವ್ಯವಹಾರಗಳ ಇಲಾಖೆ, “ಗ್ರಾಹಕರು ನಿರಾಕರಿಸಿದರೆ ಬಿಲ್‌ನಿಂದ ಸೇವಾ ತೆರಿಗೆ ತೆಗೆಯಬೇಕು,’ ಎಂದು ತಿಳಿಸಿತ್ತು.

ಹೆಚ್ಚಿದ ಡಿಜಿಟಲ್‌ ಪಾವತಿ: ದೇಶದ ನಾಗರಿಕರು ಮಾರ್ಚ್‌ ತಿಂಗಳೊಂದರಲ್ಲೇ ಸುಮಾರು 64 ಲಕ್ಷ ಬಾರಿ ಡಿಜಿಟಲ್‌ ಪಾವತಿ ಮಾಡುವ ಮೂಲಕ, ನವೆಂಬರ್‌ನಲ್ಲಾದ ನೋಟು ಅಮಾನ್ಯ ಕ್ರಮದ ನಂತರ ಡಿಜಿಟಲ್‌ ಪಾವತಿ ಪ್ರಮಾಣ 23 ಪಟ್ಟು ವೃದ್ಧಿಯಾಗಿದೆ. ಮಾರ್ಚ್‌ ತಿಂಗಳೊಂದರಲ್ಲೇ 63.80 ಲಕ್ಷ ಬಾರಿ ಡಿಜಿಟಲ್‌ ವಹಿವಾಟು ನಡೆಸುವ ಮೂಲಕ, 2,425 ಕೋಟಿ ಮೌಲ್ಯದ ಹಣ ಪಾವತಿಯಾಗಿದೆ. ನವೆಂಬರ್‌ ಅಂತ್ಯದವರೆಗೆ 2.80 ಲಕ್ಷ ಬಾರಿ (101 ಕೋಟಿ) ನಡೆದ ನಗದು ರಹಿತ ವಹಿವಾಟುಗಳಿಗೆ ಹೋಲಿಸಿದಾಗ ಮಾರ್ಚ್‌ ತಿಂಗಳು ಡಿಜಿಟಲ್‌ ವಹಿವಾಟಿನಲ್ಲಿ 23 ಪಟ್ಟು ಹೆಚ್ಚಳ ಕಂಡುಬಂದಿರುವುದಾಗಿ ನೀತಿ ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next