Advertisement

ಸರ್ವಿಸ್‌ ರಸ್ತೆ ದುರವಸ್ಥೆ: ದುರಸ್ತಿ ಗಡುವಿಗೆ ಇಂದೇ ಕೊನೆ

06:01 PM Feb 08, 2022 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಟಾಟೋಪಕ್ಕೆ ಸಣ್ಣ ಅಂಕುಶ ಹಾಕುವ ಅವಧಿ ಸಮೀಪಿಸಿದೆ. ಸರ್ವಿಸ್‌ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿ ದುರಸ್ತಿಗೊಳಿಸಬೇಕು ಎಂದು ನೀಡಿದ ಎಚ್ಚರಿಕೆಗೆ ಇಂದೇ ಕೊನೆ ದಿನ. ಇದರ ಜತೆಗೆ ಸಂಬಂಧಪಟ್ಟವರನ್ನು ಕರೆದ ಸಹಾಯಕ ಕಮಿಷನರ್‌ ಕೇಸು ಹಾಕುವ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ರಸ್ತೆ ದುರವಸ್ಥೆಗೆ ಹಿಡಿದ ಗ್ರಹಣಕ್ಕೆ ಮುಕ್ತಿ¤ ದೊರೆಯುವ ಕಾಲ ಸನ್ನಿಹಿತವಾದಂತೆ ಕಂಡುಬರುತ್ತಿದ್ದು ಸಂಸ್ಥೆ ನೆತ್ತಿ ಮೇಲೆ ತೂಗುಗತ್ತಿ ನೇತಾಡುತ್ತಿದೆ.

Advertisement

ಹೊಂಡ ಗುಂಡಿ
ವಿನಾಯಕ ಬಳಿಯಿಂದ ಕೆಎಸ್‌ಆರ್‌ಟಿಸಿವರೆಗೆ ಎರಡೂ ಬದಿಯ ಸರ್ವಿಸ್‌ ರಸ್ತೆಗಳಲ್ಲಿ ಹೊಂಡಗಳಿವೆ. ಪ್ರಯಾಣ ಕಷ್ಟವಾಗಿದೆ. ಈ ಮೊದಲು ಇದೇ ಹೆದ್ದಾರಿಯೂ ಆಗಿತ್ತು. ಆದರೆ ಫ್ಲೈಓವರ್‌ ಆಗಲಿದೆ ಎಂಬ ಕಾರಣ ನೀಡಿ ಆಗಲೂ ಸರಿಯಾಗಿ ನಿರ್ವಹಿಸಲಿಲ್ಲ. ಈಗ ಹೇಗೂ ಹೆದ್ದಾರಿ ಪ್ರತ್ಯೇಕ ಇದೆಯಲ್ಲ ಎಂದು ಸರ್ವಿಸ್‌ ರಸ್ತೆಯ ಗೋಜಿಗೆ ಯಾರೂ ಹೋಗುತ್ತಿಲ್ಲ. ಅಸಲಿಗೆ ಹೆದ್ದಾರಿ ಕಾಮಗಾರಿ ಮುಗಿದ ಕೂಡಲೇ ಸರ್ವಿಸ್‌ ರಸ್ತೆಯನ್ನು ಸಮರ್ಪಕಗೊಳಿಸಿ ನೀಡಬೇಕಾದ್ದು ಗುತ್ತಿಗೆ ವಹಿಸಿಕೊಂಡ ನವಯುಗ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಆದರೆ ಸಂಸ್ಥೆ ಇದರಿಂದ ನುಣುಚಿಕೊಂಡಿದೆ. ವಿಳಂಬ ಧೋರಣೆ ಅನುಸರಿಸುತ್ತಿದೆ.

ಕೇಸು
ಸಹಾಯಕ ಕಮಿಷನರ್‌ ಅವರು ನವಯುಗ ಸಂಸ್ಥೆ ಮೇಲೆ ಕೇಸು ಹಾಕುವುದಾಗಿ ಹೇಳಿದ್ದಾರೆ. ಹೆದ್ದಾರಿ ಪ್ರಾಧಿಕಾರದವರು ದಂಡ ವಿಧಿಸಿದ್ದು ಸಂಸ್ಥೆ ಪಾವತಿಸಿದೆ ಎನ್ನುತ್ತಾರೆ. ಪುರಸಭೆ ಡಿಸಿಗೆ ದೂರು ನೀಡಿದೆ. ಯಾವುದೂ ಈವರೆಗೆ ಪ್ರಯೋಜನ ನೀಡಿದಂತಿಲ್ಲ. ಹೇಳಿಕೆ ಪ್ರಕಟವಾದ ಬೆನ್ನಲ್ಲಿ ಒಂದು ಡಬ್ಬಿ ಡಾಮರು ಮುಗಿಸಿದ್ದೇ ಸಾಧನೆ. ಸಾರ್ವಜನಿಕರು ಪ್ರತಿಭಟನೆ ನಡೆಸುವುದಾಗಿ ನೀಡಿದ ಹೇಳಿಕೆಗೆ ಇಷ್ಟು ಮಾತ್ರ ಸ್ಪಂದನ ಎಂದಾದರೆ ಪ್ರತಿಭಟನೆ ನಡೆಸದೇ ಬಿಡುವುದಿಲ್ಲ ಎಂದು ಸಾರ್ವಜನಿಕರು ಮುಂದಾಗಿದ್ದಾರೆ. ವಿವಿಧ ವಾಹನಗಳ ಚಾಲಕರು, ರಿಕ್ಷಾ ಚಾಲಕರು ಕೈ ಜೋಡಿಸಲಿದ್ದಾರೆ. ಪ್ರತಿಭಟನೆ ಪಕ್ಷಾತೀತವಾಗಿ ನಡೆಯಲಿದೆ ಎನ್ನಲಾಗಿದ್ದು ಕಾಂಗ್ರೆಸ್‌ ಇದೊಂದು ಪ್ರಹಸನ ಎಂದು ಟೀಕೆ ಮಾಡಿದೆ.

ಬಾಕಿ ಕೆಲಸ
ಹೆದ್ದಾರಿಯಲ್ಲಿ ಮಿನುಗದ ಬೀದಿದೀಪ, ಹೆದ್ದಾರಿಯಿಂದ ನಗರಕ್ಕೆ ನೀಡದ ಪ್ರವೇಶ ಅವಕಾಶ, ಫ್ಲೈಓವರ್‌ ಅಡಿಭಾಗದಲ್ಲಿ ನಡೆಯದ ತ್ಯಾಜ್ಯ ರಾಶಿ ತೆರವು, ಸರ್ವಿಸ್‌ ರಸ್ತೆಯಲ್ಲಿ ಮುಚ್ಚದ ಹೊಂಡಗಳು, ಶಾಸಿŒ ಸರ್ಕಲ್‌ನಲ್ಲಿ ನಿರ್ಮಾಣವಾಗದ ಸರ್ಕಲ್‌, ಕುಂದಾಪುರದ ಪ್ರವೇಶ ಎಲ್ಲಿ ಎಂದೇ ತಿಳಿಯದೆ ಪ್ರವೇಶ ಫ‌ಲಕ ಹಾಕದೇ ಗೊಂದಲ, ಪ್ರವೇಶ ದ್ವಾರದ ನಿರ್ಮಾಣವೂ ನಡೆದಿಲ್ಲ, ಸರ್ಕಲ್‌ ರಚನೆ ಇಲ್ಲ, ಸರ್ಕಲ್‌ನಲ್ಲಿ ಹಾಕಿದ ಹೈ ಮಾಸ್ಟ್‌ ದೀಪ ಬೆಳಗುತ್ತಿಲ್ಲ. ಹೀಗೆ ಸಾಲು ಸಾಲು ಕೆಲಸಗಳನ್ನು ಸಂಸ್ಥೆ ಬಾಕಿ ಇರಿಸಿಕೊಂಡಿದೆ. ಹಾಗಂತ ಟೋಲ್‌ ವಸೂಲಿ ಸರಾಗವಾಗಿ ನಡೆಯುತ್ತಿದೆ. ಇದಕ್ಕೆ ಯಾವ ಅಡೆತಡೆಯೂ ಇಲ್ಲ. ವಿಳಂಬವೂ ಇಲ್ಲ. ಮಾತಾಡಿದರೆ ಟೋಲ್‌ ಸಿಬಂದಿಯ ದಬ್ಟಾಳಿಕೆ ಎದುರಿಸಬೇಕಾಗುತ್ತದೆ. ಮಾನವಂತರಿಗೆ ಕಷ್ಟದ ವಾತಾವರಣ.

ಬಾಳೆಗಿಡ ನೆಡುವುದು ಖಚಿತ
ನವಯುಗ ಸಂಸ್ಥೆ ಡಾಮರು ಹಾಕಿದಂತೆ ಕಣ್ಣೊರೆಸುವ ತಂತ್ರ ನಡೆಸಿದೆ. ಇಂತಹ ಕಪಟ ನಾಟಕಗಳಿಗೆ ನಾವು ಕಿಮ್ಮತ್ತು ಕೊಡುವುದಿಲ್ಲ. ಪಕ್ಷದ ಪರವಾಗಿ ನಡೆಸುತ್ತಿರುವ ಕಾರ್ಯಕ್ರಮ ಇದಲ್ಲ. ಜವಾಬ್ದಾರಿಯುತ ನಾಗರಿಕನಾಗಿ ಸಮಾಜದಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಪ್ರಶ್ನಿಸುವ ಹಕ್ಕು ನನಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿದ ಮೇಲೂ ಸಂಸ್ಥೆಯೊಂದು ನಿರ್ಲಕ್ಷ್ಯ ಮಾಡುತ್ತಿದೆ ಎಂದ ಮೇಲೆ ಪ್ರತಿಭಟನೆ ಸರಿಯಾದ ಮಾರ್ಗ. ರಸ್ತೆ ಹೊಂಡದಲ್ಲಿ ಫೆ.9ರಂದು 50 ಬಾಳೆಗಿಡ ನೆಡುವುದು ಖಚಿತ. ಟೀಕೆ ಮಾಡುವವರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಬಹುದು.
-ಶಂಕರ ಅಂಕದಕಟ್ಟೆ,
ಅಧ್ಯಕ್ಷ, ಬಿಜೆಪಿ ಕುಂದಾಪುರ ವಿ.ಸಭಾ ಕ್ಷೇತ್ರ

Advertisement

ಕೇಸು ಮರು ತೆರೆಯಲಾಗುವುದು
ಗುತ್ತಿಗೆದಾರ ಸಂಸ್ಥೆಯವರು ಯಾವುದೇ ಮಾತನ್ನು ಪಾಲಿಸುತ್ತಿಲ್ಲ. ಅನೇಕ ಬಾರಿ ಎಚ್ಚರಿಕೆ ನೀಡಲಾಗಿದೆ. ಕಳೆದ ವಾರ ಸಭೆ ನಡೆಸಿ ಈ ಹಿಂದೆ ಹಾಕಲಾಗಿದ್ದ ಸೆ.133 ಕೇಸನ್ನು ಮರು ತೆರೆಯುವುದಾಗಿ ಹೇಳಿದ್ದೇನೆ. ಸಾರ್ವಜನಿಕರಿಗೆ ತೊಂದರೆ ಮಾಡುವ ಸಂಸ್ಥೆ ವಿರುದ್ಧ ಕೇಸು ನಡೆಸುವುದು ಶತಸ್ಸಿದ್ಧ. -ಕೆ.ರಾಜು, ಸಹಾಯಕ ಕಮಿಷನರ್‌, ಕುಂದಾಪುರ ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next