ಕಾರ್ಕಳ: ಕಾರ್ಕಳ- ಬಜಗೋಳಿ ರಾಷ್ಟ್ರೀಯ ಹೆದ್ದಾರಿಯ ಕುಂಟಿಬೈಲ್ ತಿರುವಿನಲ್ಲಿ ಅಪಾಯಕಾರಿ ಹೊಂಡ ಸೃಷ್ಟಿಗೊಂಡು ವಾಹನ ಸವಾರರು ಇಲ್ಲಿ ಅಪಾಯಕ್ಕೆ ಒಳಗಾಗುತ್ತಿದ್ದರು. ಇದನ್ನು ಮನಗಂಡ ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಸಿಲ್ವ ಕಾಂಕ್ರೀಟ್ ಹಾಕಿಸಿ ಗುಂಡಿಗೆ ಮುಕ್ತಿ ನೀಡುವ ಕಾರ್ಯ ನಡೆಸಿದ್ದಾರೆ.
ಇಲ್ಲಿ ರಸ್ತೆಯ ಹೊಂಡ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳು ಸರಣಿ ಅಪಘಾತಗಳಿಗೆ ಒಳಗಾಗುತ್ತಿದ್ದವು. ರಸ್ತೆ ನಡುವಿನ ಈ ಅಪಾಯಕಾರಿ ಹೊಂಡದಿಂದಾಗಿ ಪ್ರತಿನಿತ್ಯ ವಾಹನಗಳು ಇಲ್ಲಿ ಸರಣಿ ರೀತಿಯಲ್ಲಿ ಅಪಘಾತಕ್ಕೆ ಒಳಗಾಗುತ್ತಿತ್ತು. ಇಲ್ಲಿ ಹೊಂಡಕ್ಕೆ ಇತ್ತೀಚೆಗೆ ಮಣ್ಣು ತುಂಬಿಸಿ ತೇಪೆ ಹಾಕಿ ತಾತ್ಕಾಲಿಕ ದುರಸ್ತಿಪಡಿಸಲಾಗಿತ್ತು. ಅದಾದ ಬಳಿಕ ಮಳೆಯ ಕಾರಣದಿಂದ ಮಣ್ಣು ಕಿತ್ತು ಹೋಗಿತ್ತು. ಹೊಂಡ ಬೃಹತ್ ಗಾತ್ರಕ್ಕೆ ವಿಸ್ತರಿಸಿಕೊಂಡಿತ್ತು.
ವಾಹನ ಸವಾರರು ಹೊಂಡ ತಪ್ಪಿಸುವ ಭರದಲ್ಲಿ ಅಪಘಾತದ ತೊಂದರೆ ಅನುಭವಿಸುತ್ತಿದ್ದರು. ಇತ್ತೀಚೆಗಷ್ಟೆ ಅಪಾಯಕಾರಿ ಹೊಂಡ ತಪ್ಪಿಸಲು ಹೋದ ಕಾರಿಗೆ ಇನ್ನೊಂದು ಕಾರು ಢಿಕ್ಕಿ ಹೊಡೆದು ಎರಡೂ ಕಾರುಗಳು ಜಖಂಗೊಂಡ ಘಟನೆ ನಡೆದಿತ್ತು.
ಅದಕ್ಕಿಂತಲೂ ಹಿಂದೆ ಇದೇ ತಿರುವಿನಲ್ಲಿ ಇಂತಹದ್ದೇ ಘಟನೆಗಳು ನಡೆದಿದ್ದವು. ಪ್ರಯಾಣಿಕರು ಗಾಯಗೊಂಡಿದ್ದರು. ರಸ್ತೆಯ ಗುಂಡಿಯ ಅರಿವೇ ಇಲ್ಲದೆ ಅದೆಷ್ಟೋ ವಾಹನಗಳು ಇಲ್ಲಿ ಅಪಘಾತಕ್ಕೆ ಒಳಗಾದ ಘಟನೆ ಸಂಭವಿಸಿತ್ತು. ಇಲ್ಲಿನ ಗಂಭೀರತೆ ಅರಿತ ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್ ಸ್ವತಃ ಖರ್ಚು ಭರಿಸಿ ಅಪಘಾತ ಸ್ಥಳದಲ್ಲಿ ಕಾಂಕ್ರೀಟ್ ಹಾಕಿಸಿ ಅಪಘಾತ ತಡೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಹೆದ್ದಾರಿ ಇಲಾಖೆ ತುರ್ತು ಕ್ರಮ ಕೈಗೊಳ್ಳದೆ ಇರುವುದರಿಂದ ಬೇಸತ್ತು ಅವರು ಈ ಸಾಮಾಜಿಕ ಕಾರ್ಯ ನಡೆಸಿದ್ದಾರೆ. ಇದೀಗ ಸುಗಮ ಸಂಚಾರಕ್ಕೆ ಅನುವಾಗಿದೆ. ಮುಂದಕ್ಕೆ ಜೀವಹಾನಿ ಸಂಭವಿಸುವುದನ್ನು ತಡೆಯಲು ಎಚ್ಚರಿಕೆ ವಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈ ರಸ್ತೆಯಲ್ಲಿ ದುರಸ್ತಿಗೆ ಕ್ರಮ ವಹಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.