ಬಂಟ್ವಾಳ: ವಿಟ್ಲ ಪೊಲೀಸ್ ಠಾಣೆಯ ಸಿಬಂದಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯೊಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸ ಲಾಗಿದ್ದು, ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ಠಾಣೆಯ ಹೊರಭಾಗದಲ್ಲೇ ಸಾಮಾಜಿಕ ಅಂತರದ ಮೂಲಕ ಸೇವೆ ನೀಡಲಾಗುತ್ತಿದೆ.
ಪೊಲೀಸ್ ಇಲಾಖೆಯು ಪ್ರಾರಂಭ ದಿಂದಲೂ ಎಚ್ಚರಿಕೆ ವಹಿಸಿದ್ದರೂ, ಸಾರ್ವಜನಿಕರ ಸಂಪರ್ಕ ದಿಂದ ಇಲಾಖೆಗೆ ಕೋವಿಡ್-19 ಆತಂಕದ ಎದುರಾಗಿದ್ದು, ಹೀಗಾಗಿ ಕಟ್ಟುನಿಟ್ಟಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಸೇವೆಯನ್ನು ನೀಡಲಾಗುತ್ತಿದೆ.
ಸಾರ್ವಜನಿಕರು ತಮ್ಮ ಯಾವುದೇ ದೂರುಗಳಿದ್ದರೂ, ಠಾಣೆಯ ಮುಂಭಾಗದಲ್ಲಿ ಹಾಕಿರುವ ಟೇಬಲ್‌ನಲ್ಲಿ ಮಾಹಿತಿಯನ್ನು ನೀಡಬೇಕಾಗುತ್ತದೆ. ಅಗತ್ಯವಿದ್ದರೆ ಮಾತ್ರ ಅವರಿಗೆ ಪ್ರವೇಶ ನೀಡಲಾಗುತ್ತದೆ. ಉಳಿದಂತೆ ಅವರು ಹೊರ ಭಾಗದಿಂದಲೇ ತಮ್ಮ ಕೆಲಸಗಳನ್ನು ಮಾಡಿಸಿಕೊಂಡು ತೆರಳಬೇಕಿದೆ.
ಪ್ರಾರಂಭದಿಂದಲೇ ಠಾಣೆಯ ಪ್ರವೇಶದ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದೆವು. ಆದರೂ ಪ್ರಸ್ತುತ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದೆ. ಪ್ರಸ್ತುತ ಕಟ್ಟುನಿಟ್ಟಾಗಿ ಠಾಣೆಯ ಹೊರ ಭಾಗದಲ್ಲೇ ಸೇವೆಯನ್ನು ನೀಡುತ್ತೇವೆ ಎಂದು ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿ’ಸೋಜಾ ತಿಳಿಸಿದ್ದಾರೆ.