ಕೊಪ್ಪಳ: ಜಾನ್ ಹೆನ್ರಿ ಡ್ನೂನಾಂಟ್ ಅವರು ಸ್ಥಾಪಿಸಿರುವ ರೆಡ್‌ಕ್ರಾಸ್ ಸಂಸ್ಥೆ ಇಂದು ವಿಶ್ವವ್ಯಾಪಿಯಾಗಿದ್ದು, ಜಗತ್ತಿನಲ್ಲಿ ಎಲ್ಲಿಯೇ ಯುದ್ಧ ನಡೆದಾಗಲೂ ಸಂಕಷ್ಟಕ್ಕೆ ಸಿಲುಕುವ ಸೈನಿಕರ ಸಹಾಯಕ್ಕೆ ನಿಲ್ಲುತ್ತದೆ ಮತ್ತು ಪ್ರಕೃತಿ ವಿಕೋಪದ ವೇಳೆ ಅದು ಸೇವೆಯಲ್ಲಿ ಸದಾ ಮುಂದಿರುತ್ತದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನ ಗೌಡ ಹಲಿಗೇರಿ ಹೇಳಿದರು.
ನಗರದ ಶ್ರೀ ಶಿರಪಯ್ಯಸ್ವಾಮಿ ಕಲ್ಯಾಣಮಂಟಪದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ನಡೆದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಾದ್ಯಂತ ರೆಡ್‌ಕ್ರಾಸ್ ಸಂಸ್ಥೆ ತನ್ನ ಶಾಖೆಯನ್ನು ಹೊಂದಿದ್ದು, ನಿರಂತರವಾಗಿ ಸೇವೆ ಮಾಡಲಾಗುತ್ತದೆ. ಭಾರತದಲ್ಲೂ 1920ರಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಪ್ರಾರಂಭವಾಗಿದ್ದು, ರಾಜ್ಯದಲ್ಲಿ 1921ರಲ್ಲಿ ರೆಡ್‌ಕ್ರಾಸ್ ಸಂಸ್ಥೆ ಪ್ರಾರಂಭವಾಗಿದೆ. ಭಾರತದಲ್ಲಿ ಪ್ರಾರಂಭವಾಗಿ ಈಗ ನೂರು ವರ್ಷಗಳಾಗಿದ್ದು, ಅತ್ಯುತ್ತಮ ಗುಣಮಟ್ಟದ ಸೇವೆ ಮುಂದುವರಿದಿದೆ. ಕೊಪ್ಪಳ ಜಿಲ್ಲೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಳೆದ 20 ವರ್ಷಗಳಿಂದ ಸೇವೆ ಮಾಡುತ್ತಿದ್ದರೂ 8 ವರ್ಷಗಳಿಂದ ಅದ್ಭುತ ಸೇವೆಯನ್ನು ಮಾಡುತ್ತಿದೆ. ಈಗಾಗಲೇ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಿರುವುದು ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ಕೊಪ್ಪಳದ ರೆಡ್‌ಕ್ರಾಸ್ ಶಾಖೆ ಹಮ್ಮಿಕೊಂಡಿದ್ದು, ಉತ್ತಮ ಬೆಳವಣಿಗೆಯಾಗಿದೆ ಎಂದರು.
ಹೈಜೆನಿಕ್ ಕಿಟ್ ವಿತರಣೆಯನ್ನು ಮಾಡಿದ ಸರ್ಕಾರಿ ನೌಕರರ ಸಂಘದ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಆರ್. ಜುಮ್ಮಣ್ಣ ಮಾತನಾಡಿ, ನಾನು ಸಹ ಪ್ರಾರಂಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎನ್ನುವ ಹೆಮ್ಮೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊಪ್ಪಳದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಮೂಲಾಗ್ರ ಸಾಧನೆ ಮಾಡುತ್ತಿದ್ದು, ಈಗಾಗಲೇ ಮೂರು ಬಾರಿ ರಾಜ್ಯಪಾಲರಿಂದ ಅತ್ಯುತ್ತಮ ಸೇವಾ ಪ್ರಶಸ್ತಿ ಪಡೆದಿರುವುದೇ ಸಾಕ್ಷಿ ಎಂದರು.
ಸದಾ ಸಮಾಜಮುಖೀಯಾಗಿಯೇ ಸೇವೆ ಮಾಡುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಕೊಡುಗು ಸಂತ್ರಸ್ತರಿಗೆ ನೆರವು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ನೆರವು, ಇಡೀ ಉತ್ತರ ಕರ್ನಾಟಕದಲ್ಲೇ ಕೊಪ್ಪಳ ಜಿಲ್ಲೆಯಿಂದಲೇ ಅತ್ಯಧಿಕ ನೆರವು ನೀಡಲಾಗಿದೆ ಎನ್ನುವುದು ಅದ್ಭುತ ಸಾಧನೆಯಾಗಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ನಿರ್ದೇಶಕ, ಕೊಪ್ಪಳ ಜಿಲ್ಲಾ ಶಾಖೆಯ ಪ್ರಧಾನಕಾರ್ಯದರ್ಶಿ ಡಾ| ಶ್ರೀನಿವಾಸ ಹ್ಯಾಟಿ ಪ್ರಾಸ್ತಾವಿಕ ಮಾತನಾಡಿ, ಸರ್ ಹೆನ್ರಿ ಡ್ನೂನಾಂಟ್ ಅವರ ಜೀವನ ಸಾಧನೆಯನ್ನು ಮೆಲಕು ಹಾಕಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು. ಉಪ ಸಭಾಪತಿ ಡಾ| ಗವಿ ಪಾಟೀಲ್, ಖಜಾಂಚಿ ಸು ಧೀರ್ ಅವರಾದಿ, ಡಾ| ಮಂಜುನಾಥ ಸಜ್ಜನ, ರಾಜೇಶ ಯಾವಗಲ್ ಇದ್ದರು. ಡಾ| ಶಿವನಗೌಡ ನಾಯಕ್ ಅವರು ಕಾರ್ಯಕ್ರಮ ನಿರೂಪಿಸಿದರು.