Advertisement

ಸರ್ಕಾರಿ ವೈದ್ಯರಂತೆ ಸೇವೆ ಸಲ್ಲಿಸಿ: ಸವದಿ

01:04 PM Aug 12, 2020 | Suhan S |

ಬನಹಟ್ಟಿ: ತೇರದಾಳ ಕ್ಷೇತ್ರದ ಎಲ್ಲ ಔಷಧಿ ವ್ಯಾಪಾರಿಗಳು ರೋಗಿಗಳಿಗೆ ಸಂಬಂಧಿಸಿದ ಎಲ್ಲವನ್ನೂ ಒದಗಿಸಬೇಕು. ಖಾಸಗಿ ವೈದ್ಯರು ಸರ್ಕಾರಿ ವೈದ್ಯರಂತೆ ಸೇವೆ ಸಲ್ಲಿಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ರಬಕವಿ-ಬನಹಟ್ಟಿ ತಾಪಂ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಜಮಖಂಡಿ ಹಾಗೂ ಮುಧೋಳ ತಾಲೂಕಿನಿಂದ ಕ್ರೋಢಿಕರಿಸಿದ ಮಾಹಿತಿ ಬಹುತೇಕ ಇಲಾಖೆಗಳಿಂದ ದೊರಕಿಲ್ಲ. ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಮುಂದಿನ ಸಭೆಯಲ್ಲಿ ಯಾವ ಸಮಸ್ಯೆ ಅಡ್ಡಿಯಾಗದಂತೆ ಪ್ರತ್ಯೇಕ ಮಾಹಿತಿ ತರಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ತಾರತಮ್ಯ ಮಾಡಿದರೆ ಸಭೆಗೆ ಬರಬೇಡಿ. ಮುಂದಿನ ಸಭೆಯಲ್ಲಿ ಹೀಗೆ ಆದರೆ ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ತಾಲೂಕುಮಟ್ಟದ ಇನ್ನೂ ಅನೇಕ ಕಚೇರಿಗಳು ಬರಬೇಕಿದೆ. ಇದಕ್ಕೆ ಸಂಬಂಧ ಸರ್ಕಾರಿ ಮಟ್ಟದಲ್ಲಿ ಒತ್ತಾಯಿಸಲಾಗುತ್ತಿದೆ. ಅಲ್ಲದೇ ನೂತನ ತಾಲೂಕಿಗೆ ಬರಬೇಕಾದ ಅನುದಾನವನ್ನು ನೇರವಾಗಿ ಹೊಸ ತಾಲೂಕಿಗೆ ನೀಡುವಂತೆ ಸರಕಾರವನ್ನು ಒತ್ತಾಯಿಸುತ್ತೇನೆ. ಇಲ್ಲವಾದಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದರು.

ವೈದ್ಯಾಧಿಕಾರಿ ಜಿ.ಎಚ್‌. ಗಲಗಲಿ ಮಾತನಾಡಿ, ಕೋವಿಡ್ ಹಾವಳಿ ಮಧ್ಯ ಎಲ್ಲ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಹೊರ ರೋಗಿಗಳ ಸಂಖ್ಯೆ ಗಣನೀಯ ಕಡಿಮೆಯಾಗಿದೆ. ಐಎಲ್‌ಐ ಹಾಗೂ ಸಾರಿ ಪ್ರಕರಣಕ್ಕೆ ಸಂಬಂಧಿ ಸಿದ ಅಸ್ತಮಾ, ರಕ್ತದೊತ್ತಡ, ಮಧುಮೇಹ ರೋಗಿಗಳೇ ಹೆಚ್ಚಾಗಿ ಆಸ್ಪತ್ರೆಗೆ ಪ್ರವೇಶವಾಗುತ್ತಿರುವ ಹಿನ್ನೆಲೆ ಅಂಥವರಿಗೆ ಜ್ವರದ ವಿಶೇಷತೆಗೆ ಅನುಗುಣವಾಗಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನಾಲ್ಕು ಕಡೆ ಸ್ಯಾಂಪಲ್‌ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಳ್ಳುತ್ತಿದ್ದು, ಚೇತರಿಕೆ ಪ್ರಕರಣಗಳ ಹೆಚ್ಚುತ್ತಿವೆ. ಕಾರಣ ತಾಲೂಕಿನ ಎರಡು ಕಡೆ ಕೋವಿಡ್‌ ಕೇಂದ್ರಗಳನ್ನು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮಾತ್ರ ಆರೈಕೆ ಮಾಡಲಾಗುತ್ತಿದೆ ಎಂದರು.

Advertisement

ತಾಪಂ ಉಪಾಧ್ಯಕ್ಷೆ ಸುನಂದಾ ಮುಗಳಖೋಡ, ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ಜಿಪಂ ಸದಸ್ಯರಾದ ಪರಶುರಾಮ ಬಸವ್ವಗೋಳ, ಪುಂಡಲೀಕ ಪಾಲಭಾಂವಿ ಉಪಸ್ಥಿತರಿದ್ದರು. ತಾಪಂ ಸದಸ್ಯ ಗುರು ಮರಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next