Advertisement
ಸುಮಾರು ಹದಿನಾಲ್ಕು ವರ್ಷ ಅಮೆರಿಕದಲ್ಲಿ ಇದ್ದು, ಬೆಂಗಳೂರಿಗೆ ಬಂದ ಮೇಲೆ ಸಾಫ್ಟ್ವೇರ್ ಎಂಜಿನಿಯರ್ ವೆಂಕಟೇಶಮೂರ್ತಿಅವರ ಮನಸ್ಸು ಬರಿದಾಗಿತ್ತು. ಏಕೆಂದರೆ, ಅಮೆರಿಕದಲ್ಲಿ ಇದ್ದಾಗ ಅವರು ಸೇವೆ ಮಾಡುತ್ತಿದ್ದರು. ಇಲ್ಲಿ ಆ ರೀತಿಯ ವ್ಯವಸ್ಥೆ ಇರಲಿಲ್ಲ. ಅಲ್ಲಿ “ಸೇವೆ’ ಎಂದರೆ ಏನು? ಬಿಡುವಿನ ವೇಳೆ ತಾವೇ ಆಸ್ಪತ್ರೆಗೆ ಹೋಗಿ ರೋಗಿಗಳಿಗೆ ಶುಶ್ರೂಷೆ ಮಾಡೋದು. ಶಾಲೆಗೆ ಹೋಗಿ ತಮಗೆ ಗೊತ್ತಿರುವ ವಿಷಯದ ಬಗ್ಗೆ ಪಾಠ ಮಾಡಿ ಬರೋದು. ಅಮೆರಿಕಾದಲ್ಲಿ ಪ್ರತಿಯೊಂದು ಕಡೆ ಸ್ವಯಂ ಸೇವಕರ ಮ್ಯಾನೇಜರ್ ಅಂತಲೇ ಇರುತ್ತಾರೆ.
Related Articles
Advertisement
ಡಾಕ್ಟರ್ ಫಾರ್ ಸೇವ: ರಾಜ್ಯದಾದ್ಯಂತ ವಿವಿಧೆಡೆ ಬೆಳಗ್ಗೆ , ಸಂಜೆ ಕ್ಲಿನಿಕ್ ನಡೆಸುವ ವೈದ್ಯರು ಮಧ್ಯಾಹ್ನದ ಹೊತ್ತು ಏನು ಮಾಡುತ್ತಾರೆ? ಅವರಿಗೂ ಸೇವೆ ಮಾಡುವ ಹಂಬಲ ಇರುವುದಿಲ್ಲವೇ? ಹೀಗೆ ಲೆಕ್ಕ ಹಾಕಿ, ವೈದ್ಯ ಸ್ವಯಂ ಸೇವಕರನ್ನು ಹುಡುಕಿ, ಮಧ್ಯಾಹ್ನದ ಹೊತ್ತು, ಸರ್ಕಾರಿ ಶಾಲಾ ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸುವ ಸೇವೆಗೂ ಮುಂದಾದರು. ಹೀಗೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋದ ಯೂತ್ ಫಾರ್ ಸೇವಾದ ಮೇಲೆ ಐಟಿ ಕಂಪೆನಿಗಳ ಕಣ್ಣು ಬಿದ್ದವು. ಈ ಹಿಂದೆ ಮೂರ್ತಿ ಕೊಟ್ಟ ಪ್ರಸೆಂಟೇಷನ್‌ಗಳು ಈಗ ಫಲ ಕೊಡಲು ಶುರುಮಾಡಿದವು.
ಅಲ್ಲಿನ ಉದ್ಯೋಗಿಗಳು ವೀಕೆಂಡ್‌ಗಳನ್ನೇಕೆ ಸೇವೆ ಮಾಡಲು ಮೀಸಲು ಇಡಬಾರದು ಅಂತ ತೀರ್ಮಾನಿಸಿ, ಯೂತ್ ಫಾರ್ ಸೇವಾಗೆ ಸೇರಲು ಮುಂದೆ ಬಂದರು. ವಾರಕ್ಕೆ ಒಂದು ಅಥವಾ ಎರಡು ದಿನ ಅವರೂ ಸೇವೆಯಲ್ಲಿ ತೊಡಗಿಕೊಂಡರು. ಹೀಗಾಗಿ, ಹಿಂದುಳಿದ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಒಂದೊಂದು ಕಂಪನಿ ಉದ್ಯೋಗಿಗಳ ಹೆಗಲ ಮೇಲೆ ಇಡುವ ಕೆಲಸವನ್ನು ಯೂತ್ ಫಾರ್ ಸೇವಾ ಮಾಡುತ್ತಿದೆ. ಶಾಲೆಗೆ ಸೇವಾಕರ್ತರನ್ನು ಕಳುಹಿಸುವ ಮೊದಲು, ಅದರ ಸ್ಥಿತಿಗತಿ, ಅಗತ್ಯಗಳನ್ನು ಪಟ್ಟಿ ಮಾಡುತ್ತದೆ. ಆನಂತರ, ಐಟಿ ಉದ್ಯೋಗಿಗಳನ್ನು, ಅವರ ಶ್ರಮವನ್ನು ಅತ್ತಕಡೆ ತಿರುಗಿಸುತ್ತದೆ.
ಈ ಕಾರ್ಯಕ್ರಮದಡಿ, ಕಂಪನಿ ಉದ್ಯೋಗಿಗಳೇ ಕೈಯಿಂದ ಹಣ ಹಾಕಿ ಕಂಪ್ಯೂಟರ್, ಸ್ಮಾರ್ಟ್‌ಬೋರ್ಡ್‌ಗಳನ್ನು ಕೊಡಿಸಿದ್ದೂ ಉಂಟು. ಶಾಲೆ ನೋಡಲಿಕ್ಕೆ ಚೆನ್ನಾಗಿಲ್ಲದೇ ಇದ್ದರೆ, ಒಂದು ಥೀಮ್ ಆಧಾರದ ಮೇಲೆ ಶಾಲೆಗಳ ಬಣ್ಣ ಬಳಿದುಕೊಟ್ಟಿದ್ದೂ ಉಂಟು. ಇದರಲ್ಲಿ ಕೆಲವು ಐಟಿ ಕಂಪೆನಿಗಳ ಉದ್ಯೋಗಿಗಳು ಸ್ವಲ್ಪ ಮುಂದಡಿ ಇಟ್ಟು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಗೇ ಪಾಠ ಮಾಡುವ ಶೈಲಿಯ ಬಗ್ಗೆ ತರಬೇತಿ ಕೊಟ್ಟರು, ಸ್ಮಾರ್ಟ್ ಬೋರ್ಡ್, ಕಂಪ್ಯೂಟರ್ ಬಳಕೆಯ ಬಗ್ಗೆ ತಿಳಿಹೇಳುವುದು, ಮಕ್ಕಳಿಗೆ ಕ್ವಿಜ್, ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವುದು ಹೀಗೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ಬ್ಯುಸಿಯಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಎಲ್ಲದಕ್ಕೂ ಪ್ರೋಗ್ರಾಂ ಪ್ಲಾನಿಂಗ್ ಮಾಡೋದು ಯೂತ್ ಫಾರ್ ಸೇವ.
ಏನೇನು ಹೇಳಿ ಕೊಡ್ತಾರೆ?: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಅನ್ನೋದು ಭೂತ ಇದ್ದಂತೆ. ಹೀಗಾಗಿ, ಅವರಿಗೆಲ್ಲಾ ಸ್ಫೋಕನ್ ಇಂಗ್ಲೀಷ್ ಹೇಳಿಕೊಡುತ್ತಾರೆ. ಅದೇ ರೀತಿ 8ನೇ ಕ್ಲಾಸ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಮೆರಿಟ್ ಸ್ಕಾಲರ್‌ಶಿಪ್ ಸಿಗುತ್ತದೆ. ಇದಕ್ಕೆ ಪರೀಕ್ಷೆ ಬರೆಯಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಇದು ಕಷ್ಟ. ಹಾಗಾಗಿ, ಯೂತ್ ಫಾರ್ ಸೇವಾಕರ್ತರು ಇದಕ್ಕೆ ತರಬೇತಿ ಕೊಡುವ ಸಾಹಸಕ್ಕೂ ಕೈ ಹಾಕಿದ್ದಾರೆ. ಇದರಿಂದ, ಮೂರು ವರ್ಷಗಳ ಕಾಲ, ವರ್ಷಕ್ಕೆ 12 ಸಾವಿರದಂತೆ ಸ್ಕಾಲರ್‌ಶಿಪ್ ಸಿಗುತ್ತದೆ.
ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಶಿರಸಿ, ಗದಗ್, ಬೆಳಗಾವಿ ಮುಂತಾದ ಕಡೆ ಶಿಕ್ಷಕರಿಗೆ ತರಬೇತಿ, ಸ್ಮಾರ್ಟ್ ಟೀಚಿಂಗ್ ಮಾಡುವ ಬಗೆ ಹಾಗೂ ಪಠ್ಯ ಪುಸ್ತಕಗಳನ್ನು ಡಿಜಿಟಲ್ ಕೂಡ ಮಾಡಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ 25 ಶಾಲೆಗೆ ಶೌಚಾಲಯ ನಿರ್ಮಿಸಿ ಕೊಟ್ಟ ಹೆಗ್ಗಳಿಕೆ ಕೂಡ ಯೂತ್ ಫಾರ್ ಸೇವಾಗೆ ಸಲ್ಲುತ್ತದೆ. ಇಡೀ ರಾಜ್ಯದಲ್ಲಿ 2,000 ಜನ ರೆಗ್ಯುಲರ್ ಸೇವಾಕರ್ತರು ಇದ್ದಾರೆ. ಇತರೆ 12 ರಾಜ್ಯಗಳ 38 ಊರುಗಳಲ್ಲಿಯೂ ಕೂಡ ಇಂಥದೇ ಸೇವಾ ಕಾರ್ಯಗಳು ನಡೆಯುತ್ತಿವೆ. ಪ್ರತಿದಿನ 400 ಮಂದಿ ಯುವಕರು ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆ ಅಂತ ನೋಂದಣಿ ಮಾಡಿಸುತ್ತಿದ್ದಾರಂತೆ.
ವಿದ್ಯಾಚೇತನ: ಆರ್ಥಿಕವಾಗಿ ಹಿಂದುಳಿದ, ಕಡುಬಡತನದಲ್ಲಿರುವ ವಿದ್ಯಾರ್ಥಿಗಳ ಶಾಲೆಯ ಫೀ ಭರಿಸುವ ಕೆಲಸಕ್ಕೂ ಯೂತ್ ಫಾರ್ ಸೇವಾ ಸೇತುವೆಯಾಗಿ ನಿಂತಿದೆ. ಇದರ ಆದಾಯಕ್ಕಾಗಿ ಐಟಿ ಕಂಪೆನಿಗಳನ್ನು ಬಳಸಿಕೊಳ್ಳುತ್ತಿದೆ. ಕಂಪನಿಗಳ ಸಿಎಸ್‌ಆರ್ ಹಣವನ್ನು ಗುಡ್ಡೆ ಹಾಕಿ, ಯಾರ್ಯಾರಿಗೆ ಅಗತ್ಯ ಇದೆಯೋ ಅವರ ಪಟ್ಟಿ ತಯಾರಿಸಿ ಮಕ್ಕಳ ಓದಿನ ಆರ್ಥಿಕ ಜವಾಬ್ದಾರಿಯನ್ನು ಆಯಾ ಕಂಪನಿಯ ಹೆಗಲ ಮೇಲೆ ಇಡುತ್ತದೆ.
ಹೆಚ್ಚು ಕಮ್ಮಿ ವರ್ಷಕ್ಕೆ ಎರಡು ಸಾವಿರ ಬಡ ಮಕ್ಕಳನ್ನು ಫೀಸನ್ನು ಕಂಪನಿಗಳು ಭರಿಸುವುದಕ್ಕೆ ಯೂತ್ ಫಾರ್ ಸೇವ ನೆರವಾಗುತ್ತಿದೆ. ಯೂತ್ ಫಾರ್ ಸೇವಾದಲ್ಲಿ ಸಾವಿರಾರು ಸೇವಾಕರ್ತರು ಇದ್ದಾರೆ ಅನ್ನೋದೇನೋ ಸರಿ. ಅವರನ್ನು ನೋಡಿಕೊಳ್ಳುವ, ಕಾರ್ಯಕ್ರಮ ಆಯೋಜಿಸಲು ಬೇಕಾದ ಖರ್ಚುವೆಚ್ಚಗಳನ್ನು ಭರಿಸುವವರು ಯಾರು? ಇದರ ಹಣದ ಮೂಲ ಎಲ್ಲಿಂದ? ಇಂಥ ಅನುಮಾನ ಸಹಜ. ಇದಕ್ಕೆ ಯೂತ್ ಫಾರ್ ಸೇವಾದ ಸ್ಥಾಪಕ ವೆಂಕಟೇಶ್‌ಮೂರ್ತಿ ಉತ್ತರಿಸುವುದು ಹೀಗೆ; ” ನಾವು ಕೇವಲ ಸೇತುವೆ. ನಮ್ಮನ್ನು ಬಳಸಿಕೊಂಡು ಸೇವೆ ಮಾಡಬಹುದು.
ನಾವು ಯಾರಿಗೂ ಹಣ ಕೊಡುವುದಿಲ್ಲ. ಕಂಪನಿಗಳು ಯಾರಿಗಾದರೂ ಸಹಾಯ ಮಾಡಿ ಅಂತ ಕೊಡುವ ಮೊತ್ತಕ್ಕೆ ಪಾರದರ್ಶಕವಾಗಿ ಲೆಕ್ಕ ಕೊಡುತ್ತೇವೆ. ನಮ್ಮ ಲೆಕ್ಕ, ಕೆಲಸ ಸರಿಯಾಗಿದೆಯೋ ಇಲ್ಲವೋ ಅಂತ ನೋಡಲಿ ಎಂದೇ ಪ್ರಾಯೋಜನೆ ಮಾಡುವ ಕಂಪನಿಯ ಅಧಿಕಾರಿಗಳನ್ನು ಸೇವೆ ಮಾಡಲು ಕರೆಯುತ್ತೇವೆ. ಹಣ ಕೊಟ್ಟ ಕಂಪನಿಯ ಆಡಿಟರ್‌ಗಳ ಕಣ್ಗಾವಲಿನಲ್ಲೇ, ನಮ್ಮ ಆಡಿಟರ್‌ಗಳ ಸಮ್ಮುಖದಲ್ಲಿ ಖರ್ಚುಗಳು ಪರಿಶೀಲನೆಯಾಗುತ್ತದೆ. ಉಳಿದ ಹಣವನ್ನು ಹಿಂತಿರುಗಿಸುತ್ತೇವೆ. ಹೀಗಾಗಿ, ಎಲ್ಲೂ ಯಾರ ಹಣವೂ, ಪೋಲಾಗುವುದಿಲ್ಲ’ ಅಂತ ವಿವರಿಸುತ್ತಾರೆ ವೆಂಕಟೇಶ್.
* ಕೆ.ಜಿ