Advertisement

ಸರ್ವರ್‌ ಸಮಸ್ಯೆ: ಸಾರ್ವಜನಿಕರು, ರೈತರ ಪರದಾಟ : ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅವಾಂತರ

12:19 PM Sep 03, 2020 | sudhir |

ಮದ್ದೂರು: ಪಟ್ಟಣದ ತಾಲೂಕು ಕಚೇರಿ ಬದಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಕಳೆದ ಮೂರು ದಿನಗಳಿಂದಲೂ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಹ ಸ್ಥಿತಿ
ನಿರ್ಮಾಣಗೊಂಡಿದೆ.

Advertisement

ಕಳೆದ ಮೂರು ದಿನಗಳಿಂದಲೂ ಸರ್ವರ್‌ ಸಮಸ್ಯೆಯಿಂದಾಗಿ ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೇ ಸಾರ್ವ ಜನಿಕರು ಸೇರಿದಂತೆ ರೈತರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದ್ವಾನಗಳಿಗೆ ಕಾರಣ: ಕಳೆದ ಮೂರು ವರ್ಷಗಳ ಹಿಂದೆ ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧದ ಹೆಚ್ಚುವರಿ ಕಟ್ಟಡ ಕಾಮಗಾರಿ ಮುಗಿದ ಬಳಿಕ ನೂತನವಾಗಿ ಸ್ಥಳಾಂತರಗೊಂಡ ಉಪನೋಂದಣಿ ಕಚೇರಿ ಹಲವಾರು ಅದ್ವಾನಗಳಿಗೆ ಕಾರಣವಾಗಿದೆ. ಅಸಮರ್ಪಕ ವಿದ್ಯುತ್‌ನಿಂದಾಗಿ ಪ್ರತಿನಿತ್ಯ ಕಚೇರಿಗೆ ಆಗಮಿಸುವ ಮಧ್ಯವರ್ತಿಗಳು,
ದಲ್ಲಾಳಿಗಳು, ರೈತರು, ಸಾರ್ವಜನಿಕರು ಅಲೆದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಕಚೇರಿಗೆ ಆಗಮಿಸಿ ವಾಪಸ್‌: ಕಳೆದ ಮೂರು ದಿನಗಳಿಂದ ಸರ್ವರ್‌ ಸಮಸ್ಯೆಯಿಂದಾಗಿ ದೂರದ ಗ್ರಾಮಗಳಿಂದ ಆಗಮಿಸುವ ರೈತರು ಹಾಗೂ ನಿವೇಶನ, ಜಮೀನು, ಮನೆ, ಬೋಗ್ಯ, ಕ್ರಯ ಇನ್ನಿತರೆ ಕಾರ್ಯಗಳಿಗೆ ಹಾಗೂ ಮಾರಾಟ ಮಾಡುವ, ಕೊಳ್ಳುವ
ವ್ಯಕ್ತಿಗಳು ಪ್ರತಿನಿತ್ಯ ಕಚೇರಿಗೆ ಬಂದು ವಾಪಸ್‌  ತೆರಳುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.

ದುರ್ವಾಸನೆ: ತಾಪಂ ಅನುದಾನದಲ್ಲಿ ನಿರ್ಮಿಸಿರುವ ಮಳಿಗೆಗಳ ಬದಿಯಲ್ಲೇ ಬಯಲು ಶೌಚಾಲಯ ಪ್ರದೇಶವಾಗಿ ಮಾರ್ಪಟ್ಟಿದ್ದು, ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು, ಮಹಿಳೆಯರು ಮೂಗು ಮುಚ್ಚಿಕೊಂಡೇ ಸಂಚರಿಸುವ ದುಸ್ಥಿತಿ ಬಂದೊದಗಿದ್ದು, ದುರ್ವಾಸನೆ ಬೀರುತ್ತಿದ್ದರೂ ಯಾವೊಬ್ಬ ಅಧಿಕಾರಿಯು ಇತ್ತ ಗಮನಹರಿಸದೆ ಮೌನಕ್ಕೆ ಶರಣಾಗಿದ್ದಾರೆ.
ನಿರ್ಲಕ್ಷ್ಯ ಧೋರಣೆ: ಹಣದ ಅವಶ್ಯಕತೆಗಾಗಿ ಮಾರಾಟ ಮಾಡುವ, ಕೊಳ್ಳುವ ವ್ಯಕ್ತಿಗಳು ದೂರದ ಕೊಪ್ಪ, ಭಾರತೀನಗರ, ಕೌಡ್ಲೆ, ಕೂಳಗೆರೆ ಇನ್ನಿತರೆ ಗ್ರಾಮಗಳಿಂದ ಆಗಮಿಸುವವರು ಬರಿಗೈಯಿಂದ ವಾಪಸ್ಸಾಗುವಂತಾಗಿದ್ದು, ಅಧಿಕಾರಿಗಳ ವಿರುದ್ಧ
ಕಿಡಿಕಾರುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯಧೋರಣೆ ಅನುಸರಿಸಿದ್ದಾರೆ.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಕೈಕೊಡುವ ಸರ್ವರ್‌ ಸಮಸ್ಯೆಯನ್ನು ಬಗೆಹರಿಸುವ ಜತೆಗೆ ನಿರಂತರವಾಗಿ ಕೆಲಸ ಕಾರ್ಯಗಳಾಗಲು ಕ್ರಮ ಕೈಗೊಳ್ಳಬೇಕಿದೆ. ಶೌಚಾಲಯ, ಕುಡಿಯುವ ನೀರಿನ
ಸಮಸ್ಯೆಯನ್ನು ತ್ವರಿತಗತಿಯಲ್ಲಿ ನಿವಾರಿಸಿ ಸಾರ್ವಜನಿಕರ ಹಿತ ಕಾಯಬೇಕಾಗಿದೆ.

Advertisement

– ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next