Advertisement

ರಾಜ್ಯಾದ್ಯಂತ ಮಂಗಳವಾರವೂ ಶೂನ್ಯನೋಂದಣಿ!

12:10 AM Feb 19, 2020 | Team Udayavani |

ಉಡುಪಿ: ರಾಜ್ಯದ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಮಂಗಳವಾರವೂ ನೋಂದಣಿಗೆ ಸರ್ವರ್‌ ಕೈ ಕೊಟ್ಟಿದ್ದು, ದಾಖಲೆಗಳ ನೋಂದಣಿಗಾಗಿ ಕಚೇರಿಗೆ ಬಂದ ಜನ ದಿನವಿಡೀ ಕಾಯುವ ಸ್ಥಿತಿ ನಿರ್ಮಾಣವಾಯಿತು. ಶನಿವಾರವೇ ಸರ್ವರ್‌ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿತ್ತು. ಸೋಮವಾರ ಬೆಳಗ್ಗಿನಿಂದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತವಾಗಿತ್ತು. ಮಂಗಳವಾರ ಅಪರಾಹ್ನ 3.15ಕ್ಕೆ ಮತ್ತೆ ನಿಧಾನವಾಗಿ ಸರ್ವರ್‌ ಕಾರ್ಯಾರಂಭಿಸಿತು. ಆದರೂ ಇಸಿ ಮತ್ತು ಸ್ಕೇನ್‌ ಡಾಟಾಗಳು ಸ್ಟೇಟ್‌ ಡಾಟಾಕ್ಕೆ ರವಾನೆ ಆಗುತ್ತಿರಲಿಲ್ಲ.

Advertisement

ಮಂಗಳವಾರವೂ ಶೂನ್ಯ!
ಉಡುಪಿ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾನ್ಯವಾಗಿ ದಿನವೊಂದಕ್ಕೆ 250 ವಿವಿಧ ಸೇವೆಗಳ ನೋಂದಣಿಯಾಗುತ್ತಿತ್ತು. ಸೊಮವಾರ ಮತ್ತು ಮಂಗಳವಾರ ಸಂಜೆ ತನಕ ಒಂದೇ ಒಂದು ನೋಂದಣಿ ಆಗಿರಲಿಲ್ಲ. ಉಪನೋಂದಣಿ ಕಚೇರಿಯಲ್ಲಿ ನೂರಾರು ಮಂದಿ ದೂರದ ಊರುಗಳಿಂದ ಬಂದವರು ಸಂಜೆ ತನಕವೂ ತಮ್ಮ ಕೆಲಸ ಆಗಲಿಲ್ಲ ಎಂದು ಕಾದು ಕುಳಿತು ಅಳಲು ತೋಡಿಕೊಳ್ಳುತ್ತಿದ್ದರು.

ಬಹುತೇಕ ಎಲ್ಲವೂ ಸ್ತಬ್ಧ
ಆಸ್ತಿ ಖರೀದಿ, ಮಾರಾಟ, ವಿವಾಹ ನೋಂದಣಿ, ಬ್ಯಾಂಕ್‌ ಲೋನ್‌ಗಳಿಗೆ ದಾಖಲೆ, ಇಸಿ, ಹಳೆಯ ಪಹಣಿ, ಭೂಮಿ ಮನೆ ದಾಖಲೆಗಳ ಸೇವೆಗಳು ಸೇರಿ ಬಹುತೇಕ ಸೇವೆಗಳು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸಿದರು. ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ತತ್‌ಕ್ಷಣ ಮುಂದಾಗಬೇಕು ಎಂದು ವಕೀಲ ಚಂದ್ರಶೇಖರ ಶೆಟ್ಟಿ ತಿಳಿಸಿದರು.

ಸಮಸ್ಯೆ ನಿವಾರಿಸದಿದ್ದರೆ ಧರಣಿ
ರಾಜ್ಯಾದ್ಯಂತ ತಿಂಗಳಿಂದ ಸರ್ವರ್‌ ಸಮಸ್ಯೆ ಇದೆ. ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಸರಕಾರಿ ಕೆಲಸಗಳನ್ನು ಮಾಡಿಸಲು ಸಾಧ್ಯವಾಗದೆ ಜನಸಾಮಾನ್ಯರು ತೊಂದರೆ ಅನಿಭವಿಸುತ್ತಿದ್ದಾರೆ. ಫೆ. 15ರಿಂದ 18ರ ವರೆಗೆ ಸರ್ವರ್‌ ಇಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಕೂಡಲೇ ಸರ್ವರ್‌ ಸಮಸ್ಯೆ ನಿವಾರಣೆಗೆ ಸರಕಾರ ಮುಂದಾಗಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಎಚ್ಚರಿಸಿದ್ದಾರೆ.

ಹೊಸ ತಂತ್ರಜ್ಞಾನದಿಂದ ಸಮಸ್ಯೆ
ನೋಂದಣಿ ಕಚೇರಿಯ ವಿದ್ಯುನ್ಮಾನ ವ್ಯವಸ್ಥೆಗೆ ಫೆ. 2ರಂದು ಹೊಸ ತಂತ್ರಜ್ಞಾನವಾಗಿ 6.8 ಸರ್ವಿಸ್‌ ಪ್ಯಾಚ್‌ ಸಿಸ್ಟಮ್‌ ಅಳವಡಿಸಲಾಗಿದೆ. ಅನಂತರದ ದಿನಗಳಲ್ಲಿ ಸರ್ವರ್‌ ಸಮಸ್ಯೆ ಹೆಚ್ಚಳಗೊಂಡಿದೆ ಅನ್ನುವ ಅಂಶ ಬೆಳಕಿಗೆ ಬಂದಿದೆ. ಹಿಂದೆ ದಿನವೊಂದಕ್ಕೆ 50ಕ್ಕೂ ಮೇಲ್ಪಟ್ಟು ದಸ್ತಾವಣೆ ದಾಖಲು ಆಗುತ್ತಿತ್ತು. ಹೊಸ ಪ್ಯಾಚ್‌ ಅಳವಡಿಸಿದ ಬಳಿಕ ಇಸಿ ಮತ್ತು ದೃಢೀಕೃತ ನಕಲು ರಶೀದಿ ತ್ವರಿತವಾಗಿ ಆಗದೆ ಸಮಸ್ಯೆ ತಂದೊಡ್ಡಿದೆ. ಒಟಿಪಿ ಕೂಡ ವೇಗವಾಗಿ ಅಪ್‌ಲೋಡ್‌ ಆಗುತ್ತಿಲ್ಲ. ಈಗ ದಿನದಲ್ಲಿ 35ರಿಂದ 40ರಷ್ಟು ಮಾತ್ರ ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಉಪ ನೋಂದಣಿ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆಯಿಂದ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಬುಧವಾರವೇ ಅಧಿಕರಾರಿಗಳ ಜತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next