ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲ ಯದ ಸರ್ವರ್ ಸಮಸ್ಯೆ ಯಿಂದಾಗಿ ಶುಲ್ಕಪಾವತಿ, ದಾಖಲೆ ಅಪ್‌ಲೋಡ್ ಮಾಡಲಾಗದೇ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಬಹುತೇಕ ಎಲ್ಲ ಸೇವೆಗಳನ್ನು ಆನ್‌ಲೈನ್ ಮೂಲಕವೇ ನೀಡಲಾಗುತ್ತಿದೆ. ಆದರೆ, ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ದಾಖಲೆ ಒದಗಿಸುವುದು, ಶುಲ್ಕ ಪಾವತಿ ಮಾಡುವುದು ಕಷ್ಟಕರವಾಗುತ್ತಿದೆ. ಸರ್ವರ್ ಪದೇ ಪದೆ ಕೈಕೊಡುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಂಯೋಜನೆಗೊಂಡಿರುವ ಕಾಲೇಜುಗಳಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ, ವಿವಿಧ ಸ್ನಾತಕೋತ್ತರ ಕೋರ್ಸ್‌ಗಳು, ಎಂಜಿನಿಯ ರಿಂಗ್ ಹಾಗೂ ಕಾನೂನು ಕೋರ್ಸ್‌ಗಳ ಶುಲ್ಕ ಪಾವತಿ, ಅಂಚೆ ತೆರಪಿನ ಕೋರ್ಸ್‌ಗಳ ಶುಲ್ಕ ಪಾವತಿ, ಬಿ.ಇಡಿ. ಪರೀಕ್ಷೆಗೆ ನೋಂದಣಿ, ಆಡಳಿತಾತ್ಮಕ ಶುಲ್ಕ ಪಾವತಿ, ಬಿಎ, ಎಲ್‌ಎಲ್‌ಎಂ ಅರ್ಜಿ, ಮರು ಮೌಲ್ಯಮಾಪನ ಹಾಗೂ ಜೆರಾಕ್ಸ್ ಪ್ರತಿಗಳಿಗೆ ಅರ್ಜಿ, ಘಟಿಕೋತ್ಸವ ಶುಲ್ಕ, ವಸತಿ ನಿಲಯದ ಪ್ರವೇಶ ಹಾಗೂ ಶುಲ್ಕ ಪಾವತಿ ಸೇರಿದಂತೆ ಸುಮಾರು 15ಕ್ಕೂ ಅಧಿಕ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ.
ಬಹುತೇಕ ಎಲ್ಲ ರೀತಿಯ ಶುಲ್ಕ ಪಾವತಿಯೂ ಆನ್‌ಲೈನ್‌ನಲ್ಲೇ ವ್ಯವಸ್ಥೆ ಮಾಡಲಾಗಿದೆ. ಆದರೆ ಸರ್ವರ್ ಸಮರ್ಪಕ ವಾಗಿ ಇಲ್ಲದೇ ಇರುವುದರಿಂದ ವಿದ್ಯಾರ್ಥಿ ಗಳಿಗೆ ಯಾವುದೇ ದಾಖಲಾತಿಯನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೊಂದ ವಿದ್ಯಾರ್ಥಿಗಳು ದೂರಿದ್ದಾರೆ. ಕಳೆದ ವರ್ಷದಿಂದಲೂ ಈ ಸಮಸ್ಯೆಯಿಂದ ಹಿಂದಿನ ಸಾಲಿನಲ್ಲಿ ಪರೀಕ್ಷಾ ಶುಲ್ಕ ಪಾವತಿಸಿದ್ದರೂ, ಸರ್ವರ್ ಸಮಸ್ಯೆಯಿಂದಾಗಿ ಶುಲ್ಕ ಪಾವತಿಸಿಲ್ಲ ಎಂದು ತೋರಿಸಿದ್ದಾರೆ.
ಇದರಿಂದ ನಮ್ಮ ಒಂದು ಸೆಮಿಸ್ಟರ್ ಶೈಕ್ಷಣಿಕ ವರ್ಷವೇ ಹಾಳಾಗಿದೆ. ಅಲ್ಲದೆ, ಈ ಬಾರಿ ಹೊಸದಾಗಿ ಶುಲ್ಕಪಾವತಿಸಿ ಪರೀಕ್ಷೆಗೆ ಹಾಜರಾಗುವಂತೆ ವಿಶ್ವವಿದ್ಯಾಲಯದಿಂದ ಸೂಚಿಸುತ್ತಿದ್ದಾರೆ. ಕಳೆದ ಬಾರಿ ಪರೀಕ್ಷೆಗೆ ಪಾವತಿಸಿದ ಶುಲ್ಕವೂ ಸಿಗಲಿಲ್ಲ. ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ವಿಶ್ವವಿದ್ಯಾಲಯದ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸ್ನಾತಕೋತ್ತರ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪರೀಕ್ಷಾ ಶುಲ್ಕಗಳನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಿದ್ದು, ಇದಕ್ಕಾಗಿ ಲಿಂಕ್ ಕೂಡ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆ ಲಿಂಕ್ ತೆರೆದು, ಶುಲ್ಕ ಪಾವತಿಗೆ ಮುಂದಾದರೆ, ಸರಿಯಾಗಿ ಸರ್ವರ್ ಸಿಗುತ್ತಿಲ್ಲ. ಅರ್ಧದಷ್ಟು ದಾಖಲೆ ಅಪ್‌ಡೇಟ್ ಮಾಡುವಾಗಲೇ ಸರ್ವರ್ ಕೈಕೊಡುತ್ತದೆ. ಶುಲ್ಕ ಪಾವತಿಸಿದರೂ ಸರಿಯಾಗಿ ಸ್ವೀಕರಿಸುತ್ತಿಲ್ಲ. ಈ ರೀತಿಯ ಸಮಸ್ಯೆಗಳನ್ನು ವಿವಿಯ ಅಧಿಕಾರಿಗಳಿಗೆ ತಿಳಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸರ್ವರ್ ಸಮಸ್ಯೆ ಇರುವುದು ನಿಜ. ಆದರೆ, ಈಗ ಎಲ್ಲವನ್ನೂ ಸರಿಪಡಿಸಿದ್ದೇವೆ. ಯಾವುದೇ ವಿದ್ಯಾರ್ಥಿಗೂ ಸಮಸ್ಯೆಯಾಗಲು ಬಿಡುವುದಿಲ್ಲ. ಸರ್ವರ್ ಉನ್ನತೀ ಕರಣಕ್ಕೆ ಬೇಕಾದ ಎಲ್ಲ ರೀತಿಯ ಕ್ರಮವನ್ನು ತೆಗೆದು ಕೊಂಡಿದ್ದೇವೆ. ಈಗ ಯಾವುದೇ ಸಮಸ್ಯೆಯಿಲ್ಲ.
-ಡಾ.ಸಿ.ಶಿವರಾಜು, ಮೌಲ್ಯಮಾಪನ ಕುಲಸಚಿವ, ಬೆಂವಿವಿ
* ರಾಜು ಖಾರ್ವಿ ಕೊಡೇರಿ