ಹುಬ್ಬಳ್ಳಿ: ಅಂಚೆ ಕಚೇರಿಗಳಲ್ಲಿ ಕಳೆದೊಂದು ವಾರದಿಂದ ಸರ್ವರ್ ಸಮಸ್ಯೆ ಉಂಟಾಗಿದ್ದು, ಹಿರಿಯ ನಾಗರಿಕರು ಸೇರಿದಂತೆ ಗ್ರಾಹಕರು ನಿತ್ಯ ಅಲೆದಾಡುವಂತಾಗಿದೆ. ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಅಂಚೆ ಸಿಬ್ಬಂದಿಯೂ ಅಸಹಾಯಕರಾಗಿದ್ದು, ಜನರನ್ನು ಸಮಾಧಾನಗೊಳಿಸುವಲ್ಲಿ ಹೈರಾಣಾಗುತ್ತಿದ್ದಾರೆ.
ಯಾವ್ಯಾವ ಸೇವೆ ವ್ಯತ್ಯಯ?: ಪಿಂಚಣಿ ಖಾತೆ, ಉಳಿತಾಯ ಖಾತೆ(ಎಸ್‌ಬಿ), ರಿಕರಿಂಗ್ ಡಿಪಾಜಿಟ್(ಆರ್‌ಡಿ), ತಿಂಗಳ ಬಡ್ಡಿ ಯೋಜನೆ, ಹಿರಿಯ ನಾಗರಿಕರಿಗೆ ಮೂರು ತಿಂಗಳಿಗೊಮ್ಮೆ ಜಮಾ ಆಗುವ ಬಡ್ಡಿ ಹಣ, ಕಿಸಾನ್ ವಿಕಾಸ ಪತ್ರ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್(ಎನ್ ಎಸ್‌ಸಿ), ಸುಕನ್ಯಾ ಸಮೃದ್ಧಿ, ಪಿಪಿಎಫ್ ಸೇರಿದಂತೆ ಅಂಚೆ ಕಚೇರಿಗಳಲ್ಲಿನ ಎಲ್ಲಾ ಸೇವೆಗಳು ಕಂಪ್ಯೂಟರ್ ಡಾಟಾವನ್ನೇ ಅವಲಂಬಿಸಿವೆ. ಪ್ರಸ್ತುತ ಸರ್ವರ್ ಸಮಸ್ಯೆಯಿಂದ ಎಲ್ಲ ಸೇವೆಗಳು ವಿಳಂಬವಾಗಿವೆ.
ಮ್ಯಾನುವಲ್ ಕೆಲಸ ಈಗಿಲ್ಲ: ಈಗ ಎಲ್ಲವೂ ಕಂಪ್ಯೂಟರ್ ಡಾಟಾ ಎಂಟ್ರಿ ಮೇಲೆ ಅವಲಂಬಿತ ಇರುವುದರಿಂದ ಅದರ ನಿರ್ವಹಣೆಗೆ ಸರ್ವರ್ ಬೇಕಾಗುತ್ತದೆ. ಕಂಪ್ಯೂಟರ್ ಡಾಟಾದಲ್ಲಿಯೇ ದಿನದ ವಹಿವಾಟು ನಡೆಯುತ್ತಿರುವುದರಿಂದ ಹಾಗೂ ಅದೆಲ್ಲದರ ಡಾಟಾ ಎಂಟ್ರಿ ಒಂದೇ ಕಡೆ ಕೇಂದ್ರೀಕೃತವಾಗಿರುವುದರಿಂದ ಅಲ್ಲಿಂದಲೇ ಎಲ್ಲಾ ವಹಿವಾಟು ನಡೆಯಬೇಕಾಗುತ್ತದೆ. ಮೊದಲಾಗಿದ್ದರೆ ಮ್ಯಾನುವಲ್‌ನಲ್ಲಿ ವಹಿವಾಟು ನಡೆಯುತ್ತಿತ್ತು. ಆಗ ಸಿಬ್ಬಂದಿ ವಹಿವಾಟನ್ನು ಕೈಯಿಂದ ಬರೆಯುವುದು ಮಾಡುತ್ತಿದ್ದರು. ಹೀಗಾಗಿ ಸರ್ವರ್‌ಗಾಗಿ ಕಾಯುವ ಅವಶ್ಯಕತೆ ಇರಲಿಲ್ಲ. ಈಗ ಎಲ್ಲ ವಹಿವಾಟು ಕಂಪ್ಯೂಟರ್ ಮೇಲೆ ಅವಲಂಬಿತ ಇರುವುದರಿಂದ ಸರ್ವರ್ ಬೇಕಾಗುತ್ತದೆ. ಇಲ್ಲವಾದರೆ ವಹಿವಾಟು ಕಷ್ಟವಾಗುತ್ತದೆ ಎನ್ನುತ್ತಾರೆ ಸಿಬ್ಬಂದಿ.
ಹಿರಿಯರ ಪಡಿಪಾಟಲು: ತಮ್ಮ ಸಂಧ್ಯಾಕಾಲದಲ್ಲಿ ಉಪ ಜೀವನ ನಡೆಸಲು ಅನುಕೂಲವಾಗಲೆಂದು ಸೇವಾ ದಿನಗಳಲ್ಲಿ ಉಳಿತಾಯ ಮಾಡಿ ಕೂಡಿಟ್ಟಿದ್ದ ಹಾಗೂ ಸೇವಾ ನಿವೃತ್ತಿ ನಂತರ ಬಂದಿದ್ದ ಗ್ರ್ಯಾಚುಟಿ ಸೇರಿದಂತೆ ಇತರೆ ಫಂಡ್ ಅನ್ನು ಅಂಚೆ ಕಚೇರಿಗಳಲ್ಲಿ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣವನ್ನೇ ನೆಚ್ಚಿಕೊಂಡು ಹಿರಿಯ ನಾಗರಿಕರು ಪ್ರತಿ ತಿಂಗಳು ತಮ್ಮ ಉಪ ಜೀವನ ಸಾಗಿಸುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆ ಪರಿಣಾಮ ಹಿರಿಯ ನಾಗರಿಕರು ಖರ್ಚಿಗೆ ಹಣ ಸಿಗದೆ ಪರದಾಡುತ್ತಿದ್ದಾರೆ.
ಸಿಬ್ಬಂದಿಯೊಂದಿಗೆ ವಾಗ್ವಾದ: ಹಿರಿಯ ಅಧಿಕಾರಿಗಳಿಗೆ ಸರ್ವರ್ ಸಮಸ್ಯೆ ಬಗ್ಗೆ ಸಿಬ್ಬಂದಿಗಳಿಂದ ದೂರು ಬರುತ್ತಲೇ ಇದ್ದು, ಶೀಘ್ರ ಬಗೆಹರಿಯುತ್ತದೆ ಎಂದು ಸಮಜಾಯಿಷಿ ಕೊಡುತ್ತಿದ್ದಾರೆ. ಇತ್ತ ಗ್ರಾಹಕರು ನಮ್ಮ ಹಣ ನಮಗೆ ಕೊಡಲು ಎಷ್ಟು ಸತಾಯಿಸುತ್ತಿದ್ದೀರಿ. ಕುಂಟು ನೆಪ ಹೇಳುತ್ತಿದ್ದೀರಿ ಎಂದು ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡುತ್ತಿರುವುದು ಸಾಮಾನ್ಯವಾಗಿದೆ.
ವಾರದೊಳಗೆ ಪರಿಹಾರ
ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ಪಿನಾಕಲ್ ಸಾಫ್ಟ್‌ವೇರ್ ಬಳಸಲಾಗುತ್ತಿದೆ. ಕಳೆದೊಂದು ವಾರದಿಂದ ಪ್ಯಾನ್ ಇಂಡಿಯಾದಲ್ಲೆ ಪಿನಾಕಲ್ ಸರ್ವರ್ ಸಮಸ್ಯೆ ಕಾಡುತ್ತಿದೆ. ಒಂದು ಕೌಂಟರ್‌ನಲ್ಲಿ ವರ್ಕ್ ಆದರೆ ಮರುಕ್ಷಣವೇ ಸಮಸ್ಯೆಯಾಗುತ್ತಿದೆ. ಸರ್ವರ್ ತೊಂದರೆ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಇದು ತಾತ್ಕಾಲಿಕವಾಗಿದ್ದು, ವಾರದೊಳಗೆ ಈ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಂಚೆ ಇಲಾಖೆ ಅಧಿಕಾರಿ
ನಮ್ಮ ಸಂಧ್ಯಾ ಕಾಲದಲ್ಲಿ ಉಪಜೀವನ ನಡೆಸಲು ಅನುಕೂಲವಿದೆ ಎಂದುಕೊಂಡು ಅಂಚೆಕಚೇರಿಯಲ್ಲಿ ಠೇವಣಿ ಇಡಲಾಗಿದೆ. ಅದರಿಂದ ಬರುವ ತಿಂಗಳ ಬಡ್ಡಿ ಹಣದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಆದರೆ ಕಳೆದೊಂದು ವಾರದಿಂದ ಸರ್ವರ್ ಸಮಸ್ಯೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಮೊದಲೇ ಕೈಯಲ್ಲಿ ಹಣ ಇಲ್ಲ. ಈಗ ಪದೇ ಪದೇ ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಬರುತ್ತಿರುವುದರಿಂದ ಖರ್ಚಿಗಾಗಿ ಕೈಯಲ್ಲಿದ್ದ ಒಂದಿಷ್ಟು ಹಣ ಕಳೆದುಕೊಂಡು ಜೀವನ ನಡೆಸುವುದು ಕಷ್ಟವಾಗುತ್ತಿದೆ.
∙ದೇವೇಂದ್ರಪ್ಪ, ವಯೋವೃದ್ಧರು