ಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯತ್ ಪಕ್ಕದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ ಕಾರಣ ಅನ್ನಭಾಗ್ಯ ಯೋಜನೆಯಡಿ ನೀಡುವ ಪಡಿತರ ಸಾಮಗ್ರಿ ಪಡೆಯಲು ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ಸೋಮವಾರ ನಿರ್ಮಾಣವಾಯಿತು.
ಪಡಿತರ ಪಡೆಯಲು ಬಯೋ ಮೆಟ್ರಿಕ್ ಪದ್ಧತಿ ಅಳಡಿಸಲಾಗಿದ್ದು, ಸರ್ವರ್ ದೋಷದಿಂದ ಗ್ರಾಹಕರು ಬೆಳಿಗ್ಗೆಯಿಂದ ಸಂಜೆಯವರೆಗೆ ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಅಲ್ಲದೆ ಬಹುತೇಕ ಮಂದಿ ಪಡಿತರ ಸಿಗದೆ ವಾಪಸಾದರು.
ವಯೋವೃದ್ಧರು, ಮಹಿಳೆಯರು ಸುಡು ಬಿಸಿಲಿನಲ್ಲಿ ಸರದಿಯಲ್ಲಿ ನಿಂತು ಬೇಸತ್ತು ಮನೆಗಳಿಗೆ ಮರಳಿದ ದೃಶ್ಯ ಕಂಡು ಬಂತು.ಬೆಟ್ಟಗೇರಿ, ಅವಂದೂರು, ಅರ್ವ ತ್ತೂಕ್ಲು, ಹೆರವನಾಡು, ಪಾಲೂರು ಗ್ರಾಮದ ನೂರಾರು ಕುಟುಂಬಗಳಿಗೆ ಇಲ್ಲಿ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಆದರೆ ಪ್ರತಿದಿನ ಒಂದಲ್ಲ ಒಂದು ಕಾರಣ ನೀಡಿ ಪಡಿತರ ಸಾಮಗ್ರಿಗಳನ್ನು ಸಿಬಂದಿಗಳು ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಕಾದರೂ ಸಾಮಗ್ರಿಗಳು ಸಿಗಲ್ಲ. ಪಡಿತರಕ್ಕಾಗಿ ಕಾಯಲು 2 ದಿನದ ಕೂಲಿ ವ್ಯರ್ಥವಾಗುತ್ತಿದೆ. ಆಯಾ ತಿಂಗಳ ಪಡಿತರ ಆಯಾ ತಿಂಗಳಲ್ಲಿಯೇ ಪಡೆಯಬೇಕು. ಇಲ್ಲದೆ ಹೋದಲ್ಲಿ ಪಡಿತರದಿಂದ ವಂಚಿತವಾಗಬೇಕಾಗುತ್ತದೆಎಂದು ಗ್ರಾಮಸ್ಥರು ಅಳಲು ತೋಡಿ ಕೊಂಡರು.
ಬೆಳಗ್ಗೆ 9.30ರ ಅನಂತರ ಪಡಿತರ ಸಾಮಗ್ರಿಗಳನ್ನು ನೀಡಲಾಗುತ್ತದೆ, ಆದರೆ ನ್ಯಾಯಬೆಲೆ ಅಂಗಡಿ ಸಿಬಂದಿ ಮಾತ್ರ ಸರ್ವರ್ ಸರಿ ಇಲ್ಲ, ಇಂಟರ್‌ನೆಟ್ ಇಲ್ಲ ಎಂದು ಹೇಳಿಕೊಂಡು ಪಕ್ಕದ ಬ್ಯಾಂಕ್‌ನಲ್ಲಿ ಕುಳಿತಿರುತ್ತಾರೆ. ಕೆಲವೊಮ್ಮೆ 5 ನಿಮಿಷ ಬಂದೆ ಎಂದು ಹೇಳಿ ಹೋದವರು ಮತ್ತೆ ಮರಳುತ್ತಿಲ್ಲ ಎಂದು ಹೆರವನಾಡು ಗ್ರಾಮಸ್ಥ ಗಣೇಶ್ ದೂರಿದರು.
ತತ್‌ಕ್ಷಣ ಆಹಾರ ಇಲಾಖೆಯ ಅಧಿಕಾ ರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.