ಗಂಗಾವತಿ: ನಗರದ ತಹಶೀಲ್ದಾರ್ ಕಚೇರಿಯಲ್ಲಿರುವ ಆಧಾರ್ ತಿದ್ದುಪಡಿ ಕೇಂದ್ರದ ಸರ್ವರ್ ಕಳೆದ ವಾರದಿಂದ ತಾಂತ್ರಿಕ ತೊಂದರೆಯ ಕಾರಣ ಕಾರ್ಯ ಸ್ಥಗಿತ ಮಾಡಿದೆ. ಇದರಿಂದ ಪಡಿತರ ಕಾರ್ಡುಗಳ ಕೆವೈಸಿ ದಾಖಲೆ ಸಲ್ಲಿಸಲು ಜನರು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಪರದಾಡುವಂತಾಗಿದೆ.
ಸೆಪ್ಟೆಂಬರ್ ಹತ್ತು ಪಡಿತರ ಚೀಟಿಗಳಿಗೆ ಕೆವೈಸಿ ಜೋಡಣೆ ಕಾರ್ಯ ಮಾಡುವ ಕೊನೆಯ ದಿನವಾಗಿದ್ದು ಜನರು ಆಧಾರ್ ಕಾರ್ಡ್ ನಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ತಹಶೀಲ್ದಾರ್ ಕಚೇರಿ, ಪ್ರಗತಿ ಗ್ರಾಮೀಣ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ತಾಲ್ಲೂಕಿನಲ್ಲಿರುವ ಕೆಲವು ಆಧಾರ್ ತಿದ್ದುಪಡಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.ಆದರೆ ಆಧಾರ್ ತಿದ್ದುಪಡಿ ಕೇಂದ್ರಗಳಲ್ಲಿ ಸರ್ವರ್ ಪದೇ ಪದೇ ತಾಂತ್ರಿಕ ತೊಂದರೆ ಬರುವುದರಿಂದ ಜನರು ಪರದಾಡುವಂತಾಗಿದೆ.
ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಗ್ರಾಮೀಣ ಮತ್ತು ನಗರದ ಜನರು ಮುಗಿ ಬೀಳುವುದರಿಂದ ಟೋಕನ್ ಕೊಡುವ ಪದ್ದತಿ ಜಾರಿಯಲ್ಲಿದ್ದು ಟೋಕನ್ ಪಡೆದವರು ಬೆಳಿಗ್ಗೆ 8.30 ಕ್ಕೆ ತಹಶೀಲ್ದಾರ್ ಕಚೇರಿ ಸೇರಿದಂತೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಸ್ಥಳಗಳಿಗೆ ಆಗಮಿಸುತ್ತಿದ್ದು ಉಪವಾಸ ಮತ್ತು ಬಿಸಿಲಿನಲ್ಲಿ ಬಳಲುವಂತಾಗಿದೆ.
ಆಧಾರ್ ತಿದ್ದುಪಡಿ ಕೇಂದ್ರದಲ್ಲಿ ಕಂಪ್ಯೂಟರ್ ಸರ್ವರ್ ತಾಂತ್ರಿಕ ತೊಂದರೆ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಆಧಾರ್ ಕಾರ್ಡುಗಳ ತಿದ್ದುಪಡಿ ಕಾರ್ಯ ಬಹಳ ವಿಳಂಬವಾಗುತ್ತಿದೆ .ಆಧಾರ್ ತಿದ್ದುಪಡಿ ಕೇಂದ್ರದಲ್ಲಿ ಖಾಸಗಿ ಸಂಸ್ಥೆಗಳಿಂದ ಸಿಬ್ಬಂದಿಯನ್ನು ಪೂರೈಕೆ ಮಾಡಲಾಗುತ್ತಿದ್ದು ಅವರಿಗೆ ಸರಿಯಾದ ತಾಂತ್ರಿಕ ತರಬೇತಿ ಇಲ್ಲದ ಕಾರಣ ಪದೇ ಪದೇ ತಾಂತ್ರಿಕ ತೊಂದರೆ ಬರುತ್ತದೆ ಇದರಿಂದಾಗಿ ಜನರಿಗೆ ಸರ್ವರ್ ತೊಂದರೆ ಇದೆ ನಾಳೆ ಬನ್ನಿ ಎಂಬ ಉತ್ತರವನ್ನು ಆಧಾರ್ ಕೇಂದ್ರದ ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಪಡಿತರ ಕಾರ್ಡುಗಳಿಗೆ ಕೆವೈಸಿ ಜೋಡಣೆಯ ದಿನಾಂಕವನ್ನು ಇನ್ನೂ ಮುಂದುವರಿಸಬೇಕು ಮತ್ತು ಪ್ರತಿ ಗ್ರಾಮ ಪಂಚಾಯಿತಿಗೆ ಮತ್ತು 35 ವಾರ್ಡಿಗೂ ಒಂದರಂತೆ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ದಿನಾಂಕ ವಿಸ್ತರಿಸಲು ಮನವಿ : ಆಧಾರ್ ಕೇಂದ್ರದಲ್ಲಿ ಸರ್ವರ್ ತೊಂದರೆ ಮತ್ತು ಸಿಬ್ಬಂದಿಯ ತೊಂದರೆಯ ಪರಿಣಾಮವಾಗಿ ಪಡಿತರ ಕಾರ್ಡುಗಳಿಗೆ ಕೆವೈಸಿ ಜೋಡಣೆಯ ದಿನಾಂಕವನ್ನು ಸೆಪ್ಟೆಂಬರ್ 10 ರ ಬದಲಿಗೆ ಇನ್ನಷ್ಟು ದಿನಗಳನ್ನು ವಿಸ್ತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ಯು ನಾಗರಾಜ ಉದಯವಾಣಿಗೆ ತಿಳಿಸಿದ್ದಾರೆ.