ಹುಬ್ಬಳ್ಳಿ: ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ತಾಲೂಕು ಕಚೇರಿಯ ‘ಭೂಮಿ’ ಸರ್ವರ್ ಸೋಮವಾರದಿಂದ
ಆರಂಭವಾಗಿದ್ದು, ಇನ್ನೂ ಒಂದು ವಾರ ಕಾಲ ಅಗತ್ಯ ದಾಖಲಾತಿಗಾಗಿ ಜನರ ಪರದಾಟ ತಪ್ಪಿದ್ದಲ್ಲ! ಹುಬ್ಬಳ್ಳಿ ತಾಲೂಕನ್ನು ‘ಹುಬ್ಬಳ್ಳಿ’ ತಾಲೂಕು ಹಾಗೂ ‘ಹುಬ್ಬಳ್ಳಿ ನಗರ’ ತಾಲೂಕು ಎಂದು ಎರಡು ತಾಲೂಕನ್ನಾಗಿ ಏ. 5ರಂದು ವಿಂಗಡಣೆ ಮಾಡಿದಾಗಿನಿಂದ ದಾಖಲೆಗಳನ್ನು ನಿರ್ವಹಣೆ ಮಾಡುತ್ತಿದ್ದ ಭೂಮಿ ಸರ್ವರ್ ಬಂದ್ ಆಗಿತ್ತು. ಅಂದಿನಿಂದ ಅಗತ್ಯ ದಾಖಲಾತಿಗಾಗಿ ಜನರು ಪರದಾಡುತ್ತಲೇ ಇದ್ದಾರೆ.
ಪ್ರತಿದಿನ ತಾಲೂಕು ಕಚೇರಿಗೆ ನೂರಾರು ಜನರು ವಾಟ್ನಿ ಮಾಡಿಸಲು, ಹೆಸರು ಕಡಿಮೆ ಮಾಡಿಸಲು, ಬ್ಯಾಂಕ್ ಬೋಜಾ ಕೂಡ್ರಿಸುವುದು ಮತ್ತು ಕಡಿಮೆ ಮಾಡಿಸುವುದು, ಹೊಲ, ಪ್ಲಾಟ್ ಖರೀದಿ ಕುರಿತು ಅಗತ್ಯ ದಾಖಲಾತಿ ಪಡೆಯುವ ಸಲುವಾಗಿ ಬರುತ್ತಾರೆ. ಆದರೆ ಹುಬ್ಬಳ್ಳಿ ತಾಲೂಕು ವಿಗಂಡಣೆ ಮಾಡಿ ಹೊಸ ಎರಡು ತಾಲೂಕುಗಳನ್ನು ರಚನೆ ಮಾಡಿದ ಮೇಲೆ ಭೂಮಿ ಸರ್ವರ್ ಬಂದ್ ಆಗಿತ್ತು. ಸೋಮವಾರವಷ್ಟೆ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿದ್ದಾರೆ. ಸರ್ವರ್ ಸರಿ ಹೋಗಬೇಕಾದರೆ, ಜನರು ತಮ್ಮ ಅಗತ್ಯ ದಾಖಲಾತಿ ಪಡೆಯಬೇಕೆಂದರೆ ಇನ್ನೂ ಒಂದು ವಾರ ಕಾಯಬೇಕಾಗಿದೆ.
ಸಮಸ್ಯೆಗೆ ಮೂಲ ಕಾರಣ: ಬೆಂಗಳೂರಿನ ಭೂಮಿ ಉಸ್ತುವಾರಿ ಕೋಶ (ಭೂಮಿ ಮಾನಿಟರಿಂಗ್ ಸೆಲ್-ಬಿಎಂಸಿ) ಇದರ ನಿರ್ವಹಣೆ ಮಾಡುತ್ತಿದೆ. ಅದು ತಾಲೂಕು ಕಚೇರಿಯಲ್ಲಿ 5-6 ಕಂಪ್ಯೂಟರ್ (ಸಿಸ್ಟಮ್)ಗಳಿಗೆ ಹಾರ್ಡ್‌ವೇರ್ ಅಳವಡಿಸಿತ್ತು. ಆದರೆ ಸಾಫ್ಟ್‌ವೇರ್ ಅಳವಡಿಸದ್ದರಿಂದ ಉತಾರ ಹೊರತುಪಡಿಸಿ ಇನ್ನುಳಿದ ಎಲ್ಲ ದಾಖಲಾತಿಗಳ ಕಾರ್ಯ ಸ್ಥಗಿತಗೊಂಡಿತ್ತು. ಸಾಫ್ಟ್‌ವೇರ್ ಇಲ್ಲದ್ದರಿಂದ ತಾಲೂಕಾಡಳಿತಕ್ಕೆ ಜನರಿಗೆ ದಾಖಲಾತಿ ಒದಗಿಸಲು ದೊಡ್ಡ ಸಮಸ್ಯೆಯಾಗಿತ್ತು. ಪ್ರತಿದಿನವೂ ಕಚೇರಿಗೆ ಬರುವ ಜನರು ಸಿಬ್ಬಂದಿಯೊಂದಿಗೆ ಖ್ಯಾತೆ ತೆಗೆಯುವುದು ಸಾಮಾನ್ಯವಾಗಿತ್ತು.
ಹುಬ್ಬಳ್ಳಿ ತಾಲೂಕು ಮೊದಲು 71 ಗ್ರಾಮಗಳನ್ನು ಹೊಂದಿತ್ತು. ಈಗ ಹೊಸದಾಗಿ 25 ಗ್ರಾಮಗಳನ್ನೊಳಗೊಂಡ ಹುಬ್ಬಳ್ಳಿ ನಗರ ತಾಲೂಕು ಮಾಡಲಾಗಿದೆ. ಪ್ರಸ್ತುತ ಹುಬ್ಬಳ್ಳಿ ತಾಲೂಕು ಹಾಗೂ ಹುಬ್ಬಳ್ಳಿ ನಗರ ತಾಲೂಕುಗಳ ಡಾಟಾ ಬದಲಾವಣೆ ಮಾಡಬೇಕಿದೆ. ಜನರಿಂದ ಬಂದ ಅರ್ಜಿಗಳನ್ನು ಅವರ ಖಾತೆಗೆ ಎಂಟ್ರಿ ಮಾಡಬೇಕೆಂದರೆ ಸರ್ವರ್ ತೆಗೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ ತಾಲೂಕು ಕಚೇರಿಯವರು ಅರ್ಜಿ ತಿರಸ್ಕರಿಸುತ್ತಿದ್ದರು.
ಒಂದೇ ಸರ್ವರ್: ಬಿಎಂಸಿಯು ಎರಡೂ ತಾಲೂಕುಗಳಿಗೆ ಒಂದೇ ಸರ್ವರ್ ಅಳವಡಿಸಿದ್ದರಿಂದ ಅನೇಕ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಉಪ ನೋಂದಣಿ ಕಚೇರಿಯಿಂದ ಬಂದಂತಹ ಆಟೋಜನರೇಟ್ ಆಗಿ ನೇರವಾಗಿ ನೋಟಿಸ್ ತಯಾರಿಗೆ ಹೋಗುತ್ತಿತ್ತು. ಜೆ-ನಮೂನೆಗಳು ಡೌನ್‌ಲೋಡ್ ಆಗುತ್ತಿರಲಿಲ್ಲ. ಅರ್ಜಿ ಹಾಕಲು ಬರುತ್ತಿರಲಿಲ್ಲ. ಸರ್ವೇ ನಂಬರ್ ಹಾಗೂ ಹಾರ್ಡ್ ಕಾಪಿಯಲ್ಲಿರುವ ಸರ್ವೇ ನಂಬರ್‌ಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿತ್ತು. ಹೀಗಾಗಿ ಖರೀದಿ ಮಾಡಿದವರು ಹಾಗೂ ಖರೀದಿ ಕೊಟ್ಟವರ ಹೆಸರು ಸಿಗುತ್ತಿರಲಿಲ್ಲ. ಆದ್ದರಿಂದ ಎಲ್ಲ ದಸ್ತಾವೇಜುಗಳು ತಿರಸ್ಕೃತಗೊಳ್ಳುತ್ತಿದ್ದವು. ತಾಲೂಕಿನಲ್ಲಿ ಪ್ರತಿದಿನದ ಚಲನ್ ಜನರೇಟ್ ಆದರೂ ಯಾವ ಶುಲ್ಕವನ್ನೂ ತೋರಿಸುತ್ತಿರಲಿಲ್ಲ. ಇದರಿಂದ ಸಿಬ್ಬಂದಿಗೆ ಬ್ಯಾಂಕ್‌ಗೆ ಚಲನ ತುಂಬಲು ಸಮಸ್ಯೆಯಾಗುತ್ತಿತ್ತು. ಎಲ್‌ಆರ್ -ಕಿಯೋಸ್ಕ್ ಮತ್ತು ಅಪ್ಲಿಕೇಶನ್ ಕಿಯೋಸ್ಕ್ ಕಾರ್ಯ ನಿರ್ವಹಿಸದ್ದರಿಂದ ಸಿಬ್ಬಂದಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಅವರಿಂದ ಅರ್ಜಿ ಪಡೆಯಲು ಆಗುತ್ತಿರಲಿಲ್ಲ. ಸರ್ವರ್ ಸಮಸ್ಯೆಯಿಂದಾಗಿ ತಾಲೂಕು ಕಚೇರಿ ಸಿಬ್ಬಂದಿ ಸಾರ್ವಜನಿಕರಿಂದ ಅರ್ಜಿ ಪಡೆಯುತ್ತಿರಲಿಲ್ಲ. ಇದೀಗ ಸಾಫ್ಟವೇರ್ ಅಳವಡಿಕೆ ನಂತರ ಅರ್ಜಿಗಳನ್ನು ಪಡೆಯಲು ಆರಂಭಿಸಿದ್ದಾರೆ. ಇಷ್ಟಾದರೂ ಕೆಲ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಬೆಳೆ ಮಾದರಿಯೂ ವಿಳಂಬ
ರಾಜ್ಯದಲ್ಲಿ ಮುಂಗಾರು ಹಂಗಾಮು ಶುರುವಾಗಿದ್ದು, ರೈತರ ಬೆಳೆ ಮಾದರಿಯ ಅರ್ಜಿಗಳ ಎಂಟ್ರಿ ಜು. 1ರಿಂದಲೇ ಆರಂಭವಾಗಬೇಕಿತ್ತು. ಆದರೆ 5-6 ದಿನ ಭೂಮಿ ಸರ್ವರ್ ಇಲ್ಲದ್ದರಿಂದ ಎಂಟ್ರಿ ವಿಳಂಬವಾಗಿದೆ. ತಾಲೂಕು ಸಿಬ್ಬಂದಿ ರೈತರ ಬೆಳೆ ಮಾದರಿಯ ಅರ್ಜಿಗಳನ್ನು ಸ್ವೀಕಾರ ಮಾಡಿ ಅದನ್ನು ಭೂಮಿ ಸರ್ವರ್‌ನಲ್ಲಿ ಡಾಟಾ ಎಂಟ್ರಿ ಮಾಡಬೇಕಿದೆ. ಶುಕ್ರವಾರ ಮಧ್ಯಾಹ್ನ ಭೂಮಿ ಸರ್ವರ್ ಕನೆಕ್ಟ್ ಆಗಿದ್ದು, ಕ್ರಾಪ್ ಸೈನಿಂಗ್ ಆರಂಭಿಸಲಾಗಿದೆ ಎಂದು ತಾಲೂಕು ಕಚೇರಿ ಸಿಬ್ಬಂದಿಯೋರ್ವರು ‘ಉದಯವಾಣಿ’ಗೆ ತಿಳಿಸಿದರು.
ಎರಡು ತಾಲೂಕುಗಳು ರಚನೆಯಾದ ಮೇಲೆ ಭೂಮಿ ಸರ್ವರ್ ಸಾಫ್ಟ್‌ವೇರ್ ಅಳವಡಿಕೆಯು ವಿಳಂಬವಾದ್ದರಿಂದ ಕೆಲ ತಾಂತ್ರಿಕ ಸಮಸ್ಯೆಯಾಗಿತ್ತು. ಸೋಮವಾರ ಬಿಎಂಸಿಯವರು ಸಾಫ್ಟವೇರ್ ಅಳವಡಿಸಿದ್ದಾರೆ. ಇನ್ನು ಎರಡ್ಮೂರು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.
ಶಶಿಧರ ಮಾಡ್ಯಾಳ,
ತಹಶೀಲ್ದಾರ್, ಹುಬ್ಬಳ್ಳಿ ನಗರ ತಾಲೂಕು.
ಶಿವಶಂಕರ ಕಂಠಿ