Advertisement

ಆದಾಯ ವೃದ್ಧಿಗೆ ಬೇಕು ಗಂಭೀರ ಚಿಂತನೆ

11:24 AM Aug 10, 2020 | Suhan S |

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಸ್ವಯಂ ಆದಾಯದಲ್ಲಿ ಮಹತ್ವದ ಪಾಲು ಆಸ್ತಿಕರದ್ದೇ ಆಗಿದೆ. ಆಸ್ತಿಕರ ಬೇಡಿಕೆಯಷ್ಟು ವಸೂಲಿ ಆಗದಿರುವುದಕ್ಕೆ ಆಸ್ತಿಕರ ಚಲನ್‌ ನೀಡಿಕೆ ವಿಳಂಬ ಇಲ್ಲವೇ ಉದಾಸೀನತೆ ಕಾರಣ ಎನ್ನಲಾಗುತ್ತಿದೆ.

Advertisement

ಸಕಾಲಕ್ಕೆ ಚಲನ್‌ ನೀಡಿಕೆ, ಆಸ್ತಿಕರ ಸಂಗ್ರಹ ಸಂಚಾರಿ ವಾಹನಗಳ ಆರಂಭದಂತಹ ಕ್ರಮಗಳಿಗೆ ಮುಂದಾದರೆ ಸ್ವಯಂ ಆದಾಯ ಹೆಚ್ಚಳ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರಿ ಆಗಲಿದೆ. ಸ್ವಯಂ ಆಸ್ತಿಕರ ಘೋಷಣೆ ಜಾರಿಗೆ ಬಂದಾಗಿನಿಂದ ಕರದಾತರು ತಮ್ಮ ಆಸ್ತಿ ಕುರಿತಾಗಿ ಸ್ವಯಂ ಘೋಷಣೆಯೊಂದಿಗೆ ಕರ ಪಾವತಿ ಮಾಡುತ್ತಾರೆ. ಆದರೆ, ಆಸ್ತಿಕರ ಪಾವತಿಗೆ ಮುಂದಾಗುವವರಿಗೆ ಸಕಾಲಕ್ಕೆ ಚಲನ್‌ಗಳು ಸಿಗದಿರುವುದೇ ದೊಡ್ಡ ಸಮಸ್ಯೆ-ಸವಾಲು ಆಗಿ ಕಾಡತೊಡಗಿದೆ.

ಜತೆಗೆ ಪಾಲಿಕೆಗೂ ಆರ್ಥಿಕ ಸಂಕಷ್ಟ ಸೃಷ್ಟಿಸತೊಡಗಿದೆ. ಕೇಂದ್ರ-ರಾಜ್ಯ ಸರಕಾರಗಳು ಸ್ಥಳೀಯ ಆಡಳಿತ ಸ್ವಯಂ ಆದಾಯ ವೃದ್ಧಿಗೆ ಒತ್ತು ನೀಡಿಬೇಕೆಂದು ಸೂಚಿಸಿದ್ದರೂ ಆ ನಿಟ್ಟಿನಲ್ಲಿ ಸಮರ್ಪಕ ಕ್ರಮ ಸಾಧ್ಯವಾಗಿಲ್ಲ.

ಜುಲೈ ಅಂತ್ಯಕ್ಕೆ 33 ಕೋಟಿ ಸಂಗ್ರಹ :  ಪಾಲಿಕೆಯ ಆಸ್ತಿಕರ ಸಂಗ್ರಹ ನೋಡಿದರೆ ಸಾಮಾನ್ಯವಾಗಿ ವಾರ್ಷಿಕ ಬೇಡಿಕೆಯ ಶೇ.70-80ಕಿಂತ ಕಡಿಮೆ ಆಗುತ್ತಿದೆ. 2020-21ನೇ ಸಾಲಿಗೆ ಅಂದಾಜು 93 ಕೋಟಿ ರೂ. ಆಸ್ತಿಕರ ಮೂಲದಿಂದ ಸಂಗ್ರಹ ನಿರೀಕ್ಷೆ ಇದ್ದು, ಇದರಲ್ಲಿ ಜುಲೈ ಅಂತ್ಯದವರೆಗೆ 33 ಕೋಟಿ ರೂ. ಸಂಗ್ರಹವಾಗಿದೆ. ಸಾಮಾನ್ಯವಾಗಿ ಜೂನ್‌-ಜುಲೈ ವರೆಗೆ ಶೇ.50ಕ್ಕಿಂತ ಹೆಚ್ಚಿನ ಕರ ಸಂಗ್ರಹವಾಗಲಿದ್ದು, ಆನಂತರದಲ್ಲಿ ಅಲ್ಪಸ್ವಲ್ಪ ಸಂಗ್ರಹ ಆಗಲಿದೆ. ಆಸ್ತಿಕರ ಬೇಡಿಕೆಯ ನಿರೀಕ್ಷೆಯಂತೆ ಶೇ.85-90 ಸಂಗ್ರಹವಾಗಬೇಕೆಂದರೆ ಸಕಾಲಕ್ಕೆ ಚಲನ್‌ ಗಳ ನೀಡಿಕೆ, ಮನೆಗಳಿಗೆ ಚಲನ್‌ಗಳ ತಲುಪಿಸುವಿಕೆ, ಕರ ಸಂಗ್ರಹ ಸಂಚಾರಿ ವ್ಯವಸ್ಥೆ ಮಾಡುವ ಕುರಿತು ಪಾಲಿಕೆ ಚಿಂತನೆ ನಡೆಸಬೇಕಾಗಿದೆ.

ರೋಸಿ ಹೋಗುವ ಕರದಾತ :  ಅದೆಷ್ಟೋ ಜನ ಕೆಲಸ-ವೃತ್ತಿ ಬಿಟ್ಟು ಪಾಲಿಕೆ ಕಚೇರಿಗೆ ಬಂದು ಆಸ್ತಿಕರ ಪಾವತಿಗೆ ಚಲನ್‌ ಕೊಡಿ ಎಂದು ಕೇಳಿದರೆ ಸಿಬ್ಬಂದಿ ನಾಳೆ ಬನ್ನಿ, ಇನ್ನೊಂದು ದಿನ ಬಿಟ್ಟು ಬನ್ನಿ ಎನ್ನುತ್ತಾರೆ. ಇದರಿಂದ ರೋಸಿ ಹೋಗುವ ಕರದಾತ ಮುಂದೆ ಕಟ್ಟಿದರಾಯಿತೆಂದು ಸುಮ್ಮನಾಗಿ ಬಿಡುತ್ತಾನೆ. ಈ ಹಿಂದೆ ಕಡತಗಳನ್ನು ನೋಡಿ ಚಲನ್‌ ನೀಡಬೇಕಾಗಿತ್ತು. ಇದೀಗ ಕಂಪ್ಯೂಟರ್‌ನಲ್ಲಿ ಎಲ್ಲ ಮಾಹಿತಿ ಇದ್ದು, ಕೆಲವೇ ನಿಮಿಷಗಳಲ್ಲಿ ಚಲನ್‌ ನೀಡಬಹುದಾಗಿದೆ. ಆದರೂ ಇದು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪ ಕರದಾತರದ್ದು.

Advertisement

ಹಿಂದೆಯೂ ಆಗಿದ್ದವು ವಿಶೇಷ ಯತ್ನಗಳು :  ಕರ ಸಂಗ್ರಹ ಸಂಚಾರಿ ವ್ಯವಸ್ಥೆ ಇನ್ನಿತರ ಕ್ರಮಗಳನ್ನು ಈ ಹಿಂದೆ ಕೈಗೊಳ್ಳಲಾಗಿತ್ತು. ಕೆಲವರು ಅವ್ಯವಹಾರ ಮಾಡಿದ್ದರಿಂದಾಗಿ ಆ ವ್ಯವಸ್ಥೆ ನಿಂತಿತ್ತು. ಇದೀಗ ಡಿಜಿಟಲ್‌ ಹಾಗೂ ಸ್ಥಳದಲ್ಲೇ ಪಾವತಿ ನೀಡುವ ವ್ಯವಸ್ಥೆ ಇದ್ದು ಸಮಸ್ಯೆ ಆಗಲಾರದು. ಡಾ| ಅಜಯ ನಾಗಭೂಷಣ ಪಾಲಿಕೆ ಆಯುಕ್ತರಾಗಿದ್ದಾಗ ಆಸ್ತಿಕರ ಸಂಗ್ರಹ ನಿಟ್ಟಿನಲ್ಲಿ ಚಲನ್‌ಗಳನ್ನು ಕರದಾತರ ಮನೆಗಳಿಗೆ ಅಂಚೆ ಮೂಲಕ ರವಾನಿಸಿದ್ದರು. ಕೈಗಾರಿಕಾ ವಲಯದಲ್ಲಿ ವಿಶೇಷ ಅಭಿಯಾನ ಕೈಗೊಳ್ಳುವ ಮೂಲಕ ಮಾರ್ಚ್‌ 31ರಂದು ಒಂದೇ ದಿನ ಅಂದಾಜು 1.35 ಲಕ್ಷ ರೂ. ಕರ ಸಂಗ್ರಹ ಮಾಡಿದ್ದರು. 2010-11 ಹಾಗೂ 2011-12ರಲ್ಲಿ ವಾಹನಗಳನ್ನು ಕಳುಹಿಸುವ ಮೂಲಕ ಆಸ್ತಿಕರ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಎಪಿಎಂಸಿಯಲ್ಲೇ ವರ್ತಕರಿಗೆ ಕೌಂಟರ್‌ ಆರಂಭಿಸಲಾಗಿತ್ತು.

ಕರದಾತರು ಪಾಲಿಕೆ ಕಚೇರಿಗಳಿಗೆ ಬಂದು ಚಲನ್‌ ಕೇಳಿದಾಗ ನಾಳೆ, ನಾಡಿದ್ದು ಎನ್ನಬಾರದು. ತಕ್ಷಣಕ್ಕೆ ನೀಡುವಂತಾಗಬೇಕು. ಚಲನ್‌ ವಿಳಂಬದಿಂದಲೇ ಆಸ್ತಿಕರ ಸಂಗ್ರಹ ಕುಂಠಿತವಾಗುತ್ತಿದೆ. ಆಯುಕ್ತ-ಕಂದಾಯ ಅಧಿಕಾರಿ ಕಟ್ಟುನಿಟ್ಟು ಇರಬೇಕು. ಕೌಂಟರ್‌ ಗೆ ಬರುವ ಕರದಾತರನ್ನು ಗೌರವಿಸುವ ಹಾಗೂ ಸಕಾಲಕ್ಕೆ ಚಲನ್‌ ನೀಡುವ ಕಾರ್ಯ ಆಗಬೇಕು.- ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ

 

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next