ನವದೆಹಲಿ: ವಿದ್ಯುತ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ವ್ಯಕ್ತಿಯೊಬ್ಬನಿಗೆ ವಿಧಿಸಿದ್ದ 18 ವರ್ಷಗಳ ಜೈಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ (ಡಿಸೆಂಬರ್ 16) ಎರಡು ವರ್ಷಗಳಿಗೆ ಇಳಿಕೆ ಮಾಡಿ ತೀರ್ಪು ನೀಡಿದೆ.
ಇದನ್ನೂ ಓದಿ:ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
“ನಾಗರಿಕರ ಸ್ವಾತಂತ್ರ್ಯವನ್ನು ಅಂತ್ಯಗೊಳಿಸಲಾಗುತ್ತಿದೆ. ಈಗಾಗಲೇ ನ್ಯಾಯಾಂಗ ಗಂಭೀರ ವೈಫಲ್ಯತೆಯನ್ನು ಹೈಕೋರ್ಟ್ ಗಮನಿಸಿರಬೇಕು ಎಂದು ಸುಪ್ರೀಂ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ಜೈಲುಶಿಕ್ಷೆಗೊಳಗಾದ ವ್ಯಕ್ತಿಯನ್ನು ಇಖ್ರಾಮ್ ಎಂದು ಗುರುತಿಸಲಾಗಿದೆ. ಈಗಾಗಲೇ ಮೂರು ವರ್ಷ ಜೈಲುಶಿಕ್ಷೆ ಅನುಭವಿಸಿರುವ ಹಿನ್ನೆಲೆಯಲ್ಲಿ ಇಖ್ರಾಮ್ ಬಿಡುಗಡೆಯ ಹಾದಿ ಸುಗಮವಾಗಲಿದೆ. “ನಾವು ವೈಯಕ್ತಿಕ ಸ್ವಾತಂತ್ರ್ಯದ ವಿಷಯದಲ್ಲಿ ಕಾರ್ಯನಿರ್ವಹಿಸದಿದ್ದರೆ ಅಥವಾ ಪರಿಹಾರವನ್ನು ನೀಡದಿದ್ದರೆ ನಾವಿಲ್ಲಿ ಏನು ಮಾಡಬೇಕು? ಎಂದು ಚೀಫ್ ಜಸ್ಟೀಸ್ ಡಿ.ವೈ ಚಂದ್ರಚೂಡ್ ವಿಚಾರಣೆ ವೇಳೆ ಪ್ರಶ್ನಿಸಿದ್ದರು.
“ಜೈಲುಶಿಕ್ಷೆಯನ್ನು ಇಳಿಕೆ ಮಾಡಬೇಕೆಂಬ ಆರೋಪಿಯ ಮನವಿಗೆ ಉತ್ತರಪ್ರದೇಶ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ಸಿಜೆಐ ಚಂದ್ರಚೂಡ್ ಅವರು, “ನೀವು ವಿದ್ಯುತ್ ಕಳ್ಳತನವನ್ನು ಕೊಲೆ ಕೃತ್ಯಕ್ಕೆ ಸಮ ಎಂಬಂತೆ ಹೋಲಿಕೆ ಮಾಡಬೇಡಿ” ಎಂದು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇಂತಹ ಅರ್ಜಿದಾರರ ಅಳಲನ್ನು ಆಲಿಸಲು ಸುಪ್ರೀಂಕೋರ್ಟ್ ಅಸ್ತಿತ್ವದಲ್ಲಿದೆ. ಅದು ದೊಡ್ಡ ಪ್ರಕರಣವೋ ಅಥವಾ ಸಣ್ಣ ಪ್ರಕರಣವೋ ಎಂಬುದು ಮುಖ್ಯವಲ್ಲ. ನಾವು ಪ್ರತಿದಿನ ಇಂತಹ ಹಲವು ಪ್ರಕರಣಗಳ ವಿಚಾರಣೆ ನಡೆಸುತ್ತೇವೆ. ಹಾಗಾದರೆ ಯಾರೋ ವಿದ್ಯುತ್ ಕಳ್ಳತನ ಮಾಡಿದ್ದಾನೆ ಅಂತ ಆತನನ್ನು 18 ವರ್ಷ ಜೈಲಿಗೆ ಕಳುಹಿಸಬೇಕಾ? ಎಂದು ಸಿಜೆಐ ಪ್ರಶ್ನಿಸಿದ್ದಾರೆ.