ಈ ಹಿಂದೆ “ಬಾಂಬೆ ಮಿಠಾಯಿ’ ಚಪ್ಪರಿಸಿದ್ದ ನೋಡುಗರಿಗೆ ಮತ್ತೂಂದು ಹೊಸ ಚಿತ್ರದ ರುಚಿ ಉಣ ಬಡಿಸಲು ನಿರ್ದೇಶಕ ಚಂದ್ರಮೋಹನ್ ಸಜ್ಜಾಗಿದ್ದಾರೆ. ಈ ಬಾರಿ ಅವರು ಪಕ್ಕಾ ಯುವಕರನ್ನು ಸೆಳೆಯುವ ಹೊಸ ಚಿತ್ರದೊಂದಿಗೆ ಬರಲು ತಯಾರಿ ನಡೆಸಿದ್ದಾರೆ. ಹೆಸರಲ್ಲೇ ಒಂದಷ್ಟು ಕುತೂಹಲ ಹುಟ್ಟುಹಾಕಿರುವ ಚಂದ್ರಮೋಹನ್, ಅದಾಗಲೇ, ಯುವಕರನ್ನೇ ಟಾರ್ಗೆಟ್ ಮಾಡಿ ಮಾಡಿದ ಚಿತ್ರವೆಂಬ ಹಣೆಪಟ್ಟಿ ಪಡೆದಿದೆ.
ಅಂದಹಾಗೆ, ಚಂದ್ರಮೋಹನ್ ತಮ್ಮ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರು “ಡಬ್ಬಲ್ ಇಂಜಿನ್’. ಈ ಹಿಂದೆಯೇ ಶೀರ್ಷಿಕೆ ಕುರಿತು ಹೇಳಿಕೊಂಡಿದ್ದರು ಚಂದ್ರಮೋಹನ್. ಈಗ ಹೊಸ ಸುದ್ದಿ ಅಂದರೆ, ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಮುಂದಿನ ತಿಂಗಳು ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ. ಸಾಮಾನ್ಯವಾಗಿ “ಡಬ್ಬಲ್ ಇಂಜಿನ್’ ಪದ ಯುವಕರ ಬಾಯಲ್ಲೇ ಹೆಚ್ಚಾಗಿ ಓಡಾಡುತ್ತೆ.
ಅದರಲ್ಲೂ ಹಳ್ಳಿಗಳಲ್ಲಂತೂ ಇಂತಹ ಡಬ್ಬಲ್ ಮೀನಿಂಗ್ ಪದಗಳಿಗೆ ಲೆಕ್ಕವೇ ಇಲ್ಲ. ಹಾಗಂತ, ‘ಡಬ್ಬಲ್ ಇಂಜಿನ್’ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಪದಗಳೇ ತುಂಬಿವೆ ಅಂತ ಹೇಳುತ್ತಿಲ್ಲ. ಈ ಪದ ಕೇಳಿದರೆ, ಹಾಗೊಂದು ಬೇರೆ ಅರ್ಥ ಬರುವುದುಂಟು. ಇರಲಿ, ಚಂದ್ರಮೋಹನ್ ಹೆಣೆದಿರುವ “ಡಬ್ಬಲ್ ಇಂಜಿನ್’ ಕುರಿತು ಹೇಳುವುದಾದರೆ, ಇದೊಂದು ಮೂವರು ಮುಗ್ಧ ಹುಡುಗರ ಸುತ್ತ ನಡೆಯುವ ಕಥೆ.
ಹಳ್ಳಿಯಲ್ಲಿರುವ ಮೂವರು ಮುಗ್ಧ ಯುವಕರಿಗೆ ಅದೊಂದು ದಿನ, ತಾವು ದಿಢೀರ್ ಶ್ರೀಮಂತರಾಗಿಬಿಡಬೇಕು ಎಂಬ ಆಸೆ ಚಿಗುರುತ್ತದೆ. ಶ್ರೀಮಂತರಾಗೋದು ಸುಲಭವಲ್ಲ. ಆದರೆ, ಕೆಟ್ಟದಾರಿ ಹಿಡಿದರೆ, ಬೇಗನೇ ಶ್ರೀಮಂತರಾಗಿಬಿಡಬಹುದು ಎಂಬ ಆಸೆಯಿಂದ ಕೆಟ್ಟದಾರಿ ಹಿಡಿಯುತ್ತಾರೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಎಂಬುದು ಚಿತ್ರದ ಕಥಾ ಸಾರಾಂಶ.
ಕಥೆ ಗಂಭೀರವಾಗಿದ್ದರೂ, ಹಾಸ್ಯದ ಮೂಲಕವೇ ಚಿತ್ರ ಸಾಗುವುದರಿಂದ ನೋಡುಗರಿಗೆ ಎಲ್ಲೂ ಬೋರ್ ಎನಿಸುವುದಿಲ್ಲ ಎಂಬುದು ಚಿತ್ರತಂಡದ ಮಾತು. ಮುಖ್ಯವಾಗಿ ಇಲ್ಲಿ ಯುವಕರಿಗೊಂದು ಸಂದೇಶವಿದೆ. ಅದಕ್ಕೆ ಪೂರಕವಾಗಿಯೇ ಶೀರ್ಷಿಕೆ ಇಡಲಾಗಿದೆ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಚಿಕ್ಕಣ್ಣ ಹೈಲೆಟ್. ಅವರೊಂದಿಗೆ ಪ್ರಭು, ಅಶೋಕ್ ಇದ್ದಾರೆ. ಇವರಿಗೆ ಇದು ಹೊಸ ಅನುಭವ. ಉಳಿದಂತೆ ಚಿತ್ರದಲ್ಲಿ ಸುಮನ್ ರಂಗನಾಥ್ ಅವರೂ ಇಲ್ಲಿದ್ದಾರೆ.
ವಿಶೇಷವೆಂದರೆ, ಚಿಕ್ಕಣ್ಣ ಅವರಿಲ್ಲಿ ಸುಮನ್ ರಂಗನಾಥ್ ಅವರ ಜೊತೆ ಪರದೆಯಲ್ಲಿ ಕಾಣಿಸಿಕೊಂಡಿರುವುದು ಖುಷಿ ಕೊಟ್ಟಿದೆ. ಸುಮನ್ ರಂಗನಾಥ್ ಇಲ್ಲಿ ಚಿಕ್ಕಣ್ಣ ಅವರ ಜೋಡಿ ಅಂದುಕೊಂಡರೆ ಆ ಊಹೆ ತಪ್ಪು. ಈ ಮೂವರು ನಾಯಕರ ಜೊತೆಗೆ ಪ್ರಿಯಾಂಕ ಮಲ್ನಾಡ್ ಕಾಣಿಸಿಕೊಂಡರೆ, ಚಿತ್ರದಲ್ಲಿ ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ದತ್ತಣ್ಣ, ಅಚ್ಯುತ ಕುಮಾರ್, ಶೋಭರಾಜ್ ಸೇರಿದಂತೆ ಅನೇಕರು ಇದ್ದಾರೆ.
ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ತೋರಿಸುವ ಮೂಲಕ ಪ್ರೇಕ್ಷಕರ ಮುಂದೆ ಬರುವ ಮುನ್ಸೂಚನೆ ನೀಡಿತು ಚಿತ್ರತಂಡ. ಈ ಚಿತ್ರವನ್ನು ಅರುಣ್ ಕುಮಾರ್, ಶ್ರೀಕಾಂತ್ ಮಠಪತಿ, ಮಂದಾರ ಮಧು, ಮಂಜುನಾಥ್ ಮಂಜಪ್ಪ, ಪದ್ಮಾ ಕೃಷ್ಣಮೂರ್ತಿ ಮತ್ತು ಆರ್.ರಾಜು ನಿರ್ಮಿಸಿದ್ದಾರೆ.