Advertisement

ಸರಣಿ ಅಪಘಾತ: ನಲಪಾಡ್‌ ಕೃತ್ಯ ಬಯಲು

12:20 AM Feb 12, 2020 | Lakshmi GovindaRaj |

ಬೆಂಗಳೂರು: ಇತ್ತೀಚೆಗೆ ಮೇಖ್ರೀ ವೃತ್ತದ ಕೆಳಗಡೆ ಐಷಾರಾಮಿ ಬೆಂಟ್ಲಿ ಕಾರಿನಿಂದ ನಡೆದ ಸರಣಿ ಅಪಘಾತಕ್ಕೆ ಶಾಂತಿನಗರ ಶಾಸಕ ಎನ್‌.ಎ.ಹ್ಯಾರೀಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಕಾರಣ ಎಂದು ಸಂಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಈ ಮಧ್ಯೆ ಮೊಹಮ್ಮದ್‌ ನಲಪಾಡ್‌ ಪರ ಅವರ ಅಂಗರಕ್ಷಕ ಬಾಲಕೃಷ್ಣ ಎಂಬಾತ ಸೋಮವಾರ ಸದಾಶಿವನಗರ ಸಂಚಾರ ಠಾಣೆಗೆ ಶರಣಾಗಲು ಬಂದಿದ್ದನು. ಆತನ ವಿಚಾರಣೆ ಬಳಿಕ, ಆತ ಕಾರು ಚಾಲಕ ಅಲ್ಲ ಎಂಬುದು ಗೊತ್ತಾಗಿದೆ. ಕೂಡಲೇ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ಹಾಗೂ ಇತರೆ ಸಾಕ್ಷ್ಯ ಪರಿಶೀಲಿಸಿದಾಗ, ಮೊಹಮ್ಮದ್‌ ನಲಪಾಡ್‌ ಎಂಬುದು ಖಚಿತವಾಗಿದೆ.

ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮೊಹಮ್ಮದ್‌ ನಲಪಾಡ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಸ್ಪಷ್ಟಪಡಿಸಿದರು. ಅಪಘಾತ ಸಂಬಂಧ ಈಗಾಗಲೇ ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ವಿಚಾರಣೆ ನಡೆಸಿ ಮುಂದಿನ ಕ್ರಮಕೈಗೊಳ್ಳು ತ್ತಾರೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವ ಅಧಿಕಾರವನ್ನು ಠಾಣಾಧಿಕಾರಿಗೆ ಇದೆ ಎಂದು ತಿಳಿಸಿದರು. ಈ ಮಧ್ಯೆ ಜಂಟಿ ಪೊಲೀಸರ್‌ ಆಯುಕ್ತ ರವಿಕಾಂತೇಗೌಡ ಅವರಿಗೆ ಶಾಸಕ ಹ್ಯಾರೀಸ್‌ ಕರೆ ಮಾಡಿ, ಪುತ್ರನನ್ನು ವಿಚಾರಣೆಗೆ ಕರೆತರುವುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.

ಏನಿದು ಘಟನೆ?: ಫೆ.9ರ ಮಧ್ಯಾಹ್ನ 2.30ರ ಸುಮಾರಿಗೆ ಮೇಕ್ರಿ ವೃತ್ತದ ಕೆಳಗಡೆ ಹೆಬ್ಟಾಳದ ಕಡೆ ಯಿಂದ ಅತೀ ವೇಗವಾಗಿ ಐಷಾರಾಮಿ ಬೆಂಟ್ಲಿ ಕಾರು ಚಲಾಯಿಸಿಕೊಂಡು ಬಂದ ಚಾಲಕ, ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋ, ಬೈಕ್‌ಗೆ ಡಿಕ್ಕಿಯಾಗಿತ್ತು.

Advertisement

ಅಪಘಾತದಲ್ಲಿ ಬೈಕ್‌ ಸವಾರ ಪ್ರಫುಲ್‌ಕುಮಾರ್‌, ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಬೀಹಾ, 6 ವರ್ಷದ ಬಾಲಕ ಗಾಯಗೊಂಡಿದ್ದರು. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ವೇಳೆ ನಲಪಾಡ್‌ ಜತೆಗೆ ಆತನ ಸಂಬಂಧಿಕ ಮೊಹಮ್ಮದ್‌ ನಫೀ, ಅಂಗರಕ್ಷಕ ಬಾಲಕೃಷ್ಣ ಇದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅವಾಂತರ ಮೊದಲಲ್ಲ: ಮೊಹಮ್ಮದ್‌ ನಲಪಾಡ್‌ ಈ ಹಿಂದೆಯೂ ಗಲಾಟೆಯೊಂದರಲ್ಲಿ ಜೈಲು ಸೇರಿದ್ದರು. 2018ರಲ್ಲಿ ತನ್ನ ಸಹಚರರ ಜತೆಗೂಡಿ ಯುಬಿ ಸಿಟಿ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್‌ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ 118 ದಿನಗಳವರೆಗೆ ಜೈಲಿನಲ್ಲಿದ್ದ. ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಇದೀಗ ಸರಣಿ ಅಪಘಾತ ಪ್ರಕರಣದಲ್ಲಿ ಸಿಲುಕಿದ್ದಾರೆ.

ಪ್ರತಿಕ್ರಿಯೆಗೆ ನಕಾರ: ಈ ಮಧ್ಯೆ, ವಿಧಾನಸೌಧದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ಎನ್‌.ಎ.ಹ್ಯಾರೀಸ್‌, ಪುತ್ರನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಕ್ಯಾಮೆರಾದಲ್ಲಿ ನಲಪಾಡ್‌!: ಮೊಹಮ್ಮದ್‌ ನಲಪಾಡ್‌ ತನ್ನ ಭದ್ರತಾ ಸಿಬ್ಬಂದಿ ಜತೆ ಅನುಮಾನಾಸ್ಪದವಾಗಿ ಓಡಿ ಹೋಗುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರತ್ಯಕ್ಷ ದರ್ಶಿಗಳೂ ಗುರುತಿಸಿದ್ದರು. ಬೆಂಟ್ಲಿ ಕಾರು ಚಲಾಯಿಸಿದ್ದು, ನಲಪಾಡ್‌ ಎಂಬುದು ಖಚಿತವಾಗಿದೆ. ಇನ್ನು ಪ್ರಕರಣದಲ್ಲಿ ತನ್ನ ಪಾತ್ರವಿದ್ದರೂ ಪೊಲೀಸ್‌ ತನಿಖೆಯಿಂದ ತಪ್ಪಿಸಿಕೊಳ್ಳಲು ಅಂಗರಕ್ಷಕ ಬಾಲಕೃಷ್ಣಗೆ ಶರಣಾಗಲು ಠಾಣೆಗೆ ಕಳುಹಿಸಿ ಪೊಲೀಸರ ದಿಕ್ಕುತಪ್ಪಿಸಲು ಯತ್ನಿಸಿದ್ದಾನೆ. ತೀವ್ರ ವಿಚಾರಣೆ ಬಳಿಕ, ಸತ್ಯಾಂಶ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.