ಬೆಂಗಳೂರು: ಖಾಸಗಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರಗೊಳ್ಳುವ ಧಾರವಾಹಿಗಳು ಹಾಗೂ ವಾಣಿಜ್ಯ ಪ್ರಾಯೋಜಿತ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಈ ಸಂಬಂಧ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ಧಾರಾವಾಹಿ, ವಾಣಿಜ್ಯ ಪ್ರಾಯೋಜಿತ ಸೇರಿದಂತೆ ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಬರುವ ದೃಶ್ಯಗಳು/ ಅಂಶಗಳು ಸಿನಿಮಾಗಳಲ್ಲಿ ಬರುವ ದೃಶ್ಯ ಮತ್ತು ಅಂಶಗಳಿಗಿಂತಲೂ ಅಸಭ್ಯ ಹಾಗೂ ಕೀಳು ಮಟ್ಟದಿಂದ ಕೂಡಿರುತ್ತವೆ. ಅವುಗಳನ್ನು ಸೆನ್ಸಾರ್‌ಗೆ ಒಳಪಡಿಸದೇ ಪ್ರಸಾರ ಮಾಡಲಾಗುತ್ತದೆ. ಅವುಗಳ ನಿಯಂತ್ರಣ ಅಥವಾ ಮೇಲ್ವಿಚಾರಣೆಗೆ ಯಾವುದೇ ವ್ಯವಸ್ಥೆ ಇಲ್ಲ. ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹಾಗೂ ಸಾಮರಸ್ಯ ಹಾಳಾಗಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಾದಿಸಿದರು.
ಅಲ್ಲದೇ ಖಾಸಗಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರಗೊಳ್ಳುವ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವಂತೆ 2008ರ ಫೆ.19ರಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಈ ನಿರ್ದೇಶನ ಅನುಷ್ಠಾನಕ್ಕೆ ತರುವಂತೆ ಕೋರಿ ಅರ್ಜಿದಾರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.