ನಿಜಕ್ಕೂ ಇದೊಂದು ಆರೋಗ್ಯಕರ ಸಂಗತಿ ಅಥವಾ ಸ್ವಾರಸ್ಯಕರ ಸಂಗತಿ. ಆದರೆ ಟೆನಿಸ್ ಅಭಿಮಾನಿಗಳ ಮಟ್ಟಿಗೆ ಇದೊಂದು ತಲೆಬಿಸಿ. ಟೆನಿಸ್ ಕಂಡ ನಾಲ್ವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ/ಗಾರ್ತಿಯರು ಈಗ ಕಣದಲ್ಲಿದ್ದಾರೆ. ಒಬ್ಬೊಬ್ಬರೂ ಅಭಿಮಾನಿಗಳಿಗೆ ಅತ್ಯಂತ ಪ್ರೀತಿಪಾತ್ರರು. ನಾಲ್ವರ ಪೈಕಿ ಮೂವರು ಪುರುಷ ಆಟಗಾರರು. ಇವರಲ್ಲಿ ರೋಜರ್ ಫೆಡರರ್ 20 ಗ್ರ್ಯಾನ್‌ಸ್ಲಾಮ್ ಗೆದ್ದಿದ್ದಾರೆ, ರಫಾಯೆಲ್ ನಡಾಲ್ 19, ನೊವಾಕ್ ಜೊಕೊವಿಚ್ 16 ಪ್ರಶಸ್ತಿ ಗೆದ್ದಿದ್ದಾರೆ. ಹಿಂದೆ ಆಡಿದ ಎಲ್ಲ ಆಟಗಾರರನ್ನು ಈ ಮೂವರು ಮೀರಿಸಿದ್ದಾರೆ.
ಇವರ ಪೈಕಿ 32 ವರ್ಷದ ಜೊಕೊವಿಚ್ ಕಿರಿಯ, 33 ವರ್ಷದ ನಡಾಲ್ ಸ್ವಲ್ಪ ಹಿರಿಯ. 38 ವರ್ಷದ ಫೆಡರರ್ ಎಲ್ಲರಿಗಿಂತ ಹಿರಿಯ ಆಟಗಾರ. ನಿವೃತ್ತಿಗೆ ಸನಿಹದಲ್ಲಿರುವುದು ಫೆಡರರ್. ಆಶ್ಚರ್ಯವೆಂದರೆ, ಎರಡು ಮೂರು ವರ್ಷಗಳ ಹಿಂದೆ ಮೂವರೂ ಲಯ ಕಳೆದುಕೊಂಡು, ಟೆನಿಸ್‌ನಿಂದ ನಿವೃತ್ತಿಯೊಂದೇ ಬಾಕಿ ಎಂಬ ಸ್ಥಿತಿಯಲ್ಲಿದ್ದರು. ಒಮ್ಮೆಲೇ ಅಷ್ಟೂ ಮಂದಿ ಲಯಕ್ಕೆ ಮರಳಿ, ಪ್ರಶಸ್ತಿ ಮೇಲೆ ಪ್ರಶಸ್ತಿ ಗೆಲ್ಲುತ್ತಿದ್ದಾರೆ.
ಯಾವುದೇ ಕೂಟ ನಡೆಯಲಿ, ಮೂವರ ಪೈಕಿ ಒಬ್ಬರಿಗೆ ಪ್ರಶಸ್ತಿ ಸಿಕ್ಕುವುದು ಖಾತ್ರಿ. ಇವರನ್ನು ಬಿಟ್ಟು ಮತ್ತೂಬ್ಬರು ಗೆಲ್ಲುವುದು ಬಹಳ ಕಷ್ಟ. ಇಂತಹ ಫೆಡರರ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರ ಓಟ 20 ಗ್ರ್ಯಾನ್‌ಸ್ಲಾéಮ್‌ಗೆ ನಿಲ್ಲುತ್ತದೋ, ಮುಂದುವರಿಯುತ್ತದೋ ಕಾದು ನೋಡಬೇಕು. ಸವಾಲು ಇರುವುದು ಉಳಿದಿಬ್ಬರ ನಡುವೆ. ಇಬ್ಬರಿಗೂ ಕನಿಷ್ಠ 5 ವರ್ಷ ಸಮಯವಿದೆ. ಈ ಅವಧಿಯಲ್ಲಿ ಯಾರು ಮೀರಿ ಮುನ್ನಡೆಯುತ್ತಾರೆ?
ಯಾರು ಸಾರ್ವಕಾಲಿಕ ದಿಗ್ಗಜರಾಗುತ್ತಾರೆ? ಎಂಬ ಪ್ರಶ್ನೆಯಿದೆ. ಅದಕ್ಕಿಂತ ಸಮಸ್ಯೆಯೆಂದರೆ ಪ್ರಸ್ತುತ ಕಣದಲ್ಲಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೋಲು. ಗರಿಷ್ಠ 25 ಗ್ರ್ಯಾನ್‌ಸ್ಲಾಮ್ ಗೆಲ್ಲಲು ಹೊರಟಿರುವ ಅವರು, 23 ಬಾರಿ ಗೆದ್ದಿದ್ದಾರೆ. ಇನ್ನೆರಡು ಬಾರಿ ಗೆಲ್ಲಲಾಗದೇ ಎಲ್ಲಿ ನಿವೃತ್ತರಾಗುತ್ತಾರೋ ಎಂಬ ಚಿಂತೆ ಶುರುವಾಗಿದೆ. ಅದಕ್ಕೆ ಸರಿಯಾಗಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಆರಂಭಿಕ ಸುತ್ತಿನಲ್ಲೇ ಅವರು ಸೋತುಹೋಗಿದ್ದಾರೆ.