ನ್ಯೂಯಾರ್ಕ್: ಅಮೆರಿಕನ್ ಓಪನ್ ವನಿತಾ ಸಿಂಗಲ್ಸ್‌ನಲ್ಲಿ “ಆಲ್ ಅಮೆರಿಕನ್’ ಸ್ಪರ್ಧೆಗೆ ವೇದಿಕೆಯೊಂದು ಸಿದ್ಧಗೊಂಡಿದೆ. ದಾಖಲೆಯ ಹಾದಿಯಲ್ಲಿರುವ ಸೆರೆನಾ ವಿಲಿಯಮ್ಸ್ ಮತ್ತು 2017ರ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಮೂರನೇ ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದಾರೆ.
ಗುರುವಾರ ರಾತ್ರಿ “ಆರ್ಥರ್ ಆ್ಯಶ್ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ 117ರಷ್ಟು ಕೆಳ ರ್‍ಯಾಂಕಿಂಗ್‌ನ ರಶ್ಯನ್ ಆಟಗಾರ್ತಿ ಮಾರ್ಗರಿಟಾ ಗ್ಯಾಸ್ಪರಿಯನ್ ವಿರುದ್ಧ 6-2, 6-4 ಅಂತರದ ಜಯ ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಸ್ಲೋನ್ ಸ್ಟೀಫನ್ಸ್ ಬೆಲರೂಸ್‌ನ ಓಲ್ಗಾ ಗೊವತ್ಸೋವಾ ಅವರನ್ನು 6-2, 6-2ರಿಂದ ಮಣಿಸಿದರು.
ಇದು ಸೆರೆನಾ-ಸ್ಟೀಫನ್ಸ್ ನಡುವಿನ 7ನೇ ಮುಖಾಮುಖಿ. ಇಲ್ಲಿ ಸೆರೆನಾ 5-1 ಗೆಲುವಿನ ದಾಖಲೆ ಹೊಂದಿದ್ದಾರೆ. ಕಳೆದ ಸತತ ನಾಲ್ಕೂ ಪಂದ್ಯಗಳಲ್ಲಿ ಸೆರೆನಾ ಜಯ ಸಾಧಿಸಿದ್ದಾರೆ. ಆದರೆ ಇವರು ಕೊನೆಯ ಸಲ ಮುಖಾಮುಖೀಯಾದದ್ದು 2015ರ ಫ್ರೆಂಚ್ ಓಪನ್‌ನಲ್ಲಿ. ಸ್ಲೋನ್ ಸ್ಟೀಫನ್ಸ್ ಅವರ ಏಕೈಕ ಗೆಲುವು 2013ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಬಂದಿದೆ.
ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್, 7ನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್, ಮರಿಯಾ ಸಕ್ಕರಿ, ಡೋನಾ ವೆಕಿಕ್, ಅಮಂಡಾ ಅನಿಸಿಮೋವಾ ಕೂಡ ದ್ವಿತೀಯ ಸುತ್ತು ದಾಟಿದ್ದಾರೆ.
Related Articles
ಮುಗುರುಜಾ ಪರಾಭವ
ಎರಡು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಸ್ಪೇನಿನ ಗಾರ್ಬಿನ್ ಮುಗುರುಜಾ ಬಲ್ಗೇರಿಯಾದ ಸ್ವೆತಾನಾ ಪಿರೊಂಕೋವಾಗೆ ಶರಣಾಗಿ ಕೂಟದಿಂದ ನಿರ್ಗಮಿಸಿದರು. ಪಿರೊಂಕೋವಾ ಗೆಲುವಿನ ಅಂತರ 7-5, 6-3. 9ನೇ ಶ್ರೇಯಾಂಕದ ಬ್ರಿಟನ್ ಆಟಗಾರ್ತಿ ಜೊಹಾನಾ ಕೊಂಟಾ ಕೂಡ ಪರಾಭವಗೊಂಡಿದ್ದಾರೆ. ಅವರನ್ನು ರೊಮೇನಿಯಾದ ಸೊರಾನಾ ಕಿಸ್ಟಿì ಭಾರೀ ಹೋರಾಟದ ಬಳಿಕ 2-6, 7-6 (5), 6-4ರಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.