ಲೆಕ್ಸಿಂಗ್ಟನ್ (ಕೆಂಟುಕಿ): ತಮ್ಮ ಟೆನಿಸ್ ಬಾಳ್ವೆಯ 967ನೇ ಸಿಂಗಲ್ಸ್ ಆಡಲಿಳಿದ ಸೆರೆನಾ ವಿಲಿಯಮ್ಸ್ 4ನೇ ಬಾರಿಗೆ ನೂರರಾಚೆಯ ರ್‍ಯಾಂಕಿಂಗ್ ಆಟಗಾರ್ತಿಗೆ ಶರಣಾಗಿದ್ದಾರೆ.
“ಟಾಪ್ ಸೀಡ್ ಓಪನ್’ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಅವರನ್ನು ಅಮೆರಿಕದವರೇ ಆದ, 116ನೇ ರ್‍ಯಾಂಕಿಂಗ್ ಆಟಗಾರ್ತಿ ಶೆಲ್ಬಿ ರೋಜರ್ 1-6, 6-4, 7-6 (5) ಅಂತರದಿಂದ ಮಣಿಸಿ ಸುದ್ದಿಯಾದರು.
ಸೌತ್ ಕ್ಯಾರೊಲಿನಾದ ಶೆಲ್ಬಿ ರೋಜರ್ ವಿರುದ್ಧ ಮೊದಲ ಸೆಟ್ ಗೆದ್ದ ಬಳಿಕ ಸೆರೆನಾ ಲಯ ತಪ್ಪಿದಂತೆ ಕಂಡುಬಂದರು. ಟೈ-ಬ್ರೇಕರ್‌ನಲ್ಲಿ 3-1 ಮುನ್ನಡೆಯಲ್ಲಿದ್ದರೂ ಅದೃಷ್ಟ ಕೈಹಿಡಿಯಲಿಲ್ಲ. ಶೆಲ್ಬಿ ಟಾಪ್-10 ಆಟಗಾರ್ತಿಯರ ವಿರುದ್ಧ 3ನೇ ಜಯ ದಾಖಲಿಸಿದರು; 2016ರ ಬಳಿಕ ಮೊದಲ ಸಲ ಡಬ್ಲ್ಯುಟಿಎ ಕೂಟದ ಸೆಮಿಫೈನಲ್‌ಗೆ ಪ್ರವೇಶ ಪಡೆದರು. ಶೆಲ್ಬಿ ಎದುರಾಳಿ ಸ್ವಿಸ್‌ನ ಜಿಲ್ ಟೀಶ್ಮನ್. ಅವರು ಸಿಸಿ ಬೆಲ್ಲಿಸ್‌ಗೆ 6-2, 6-4 ಅಂತರದ ಸೋಲುಣಿಸಿದರು.
ಸೆರೆನಾ 2012ರ ಫ್ರೆಂಚ್ ಓಪನ್ ಬಳಿಕ ನೂರರಾಚೆಯ ರ್‍ಯಾಂಕಿಂಗ್ ಆಟಗಾರ್ತಿಗೆ ಶರಣಾದದ್ದು ಇದೇ ಮೊದಲು. ಅಂದು 111ನೇ ರ್‍ಯಾಂಕಿಂಗ್ ಆಟಗಾರ್ತಿ ವಿರ್ಜಿನಿ ರಝಾನೊ ವಿರುದ್ಧ ಸೆರೆನಾ ಎಡವಿದ್ದರು.
ಕೊಕೊ ಗಾಫ್ ಸೆಮಿಗೆ
ಅಮೆರಿಕದ 16ರ ಹರೆಯದ ಕೊಕೊ ಗಾಫ್ ಸೆಮಿಫೈನಲ್ ಪ್ರವೇಶಿಸಿ ಸೆರೆನಾ ನಿರ್ಗಮನದ ಕೊರತೆಯನ್ನು ನೀಗಿಸಿದ್ದಾರೆ. ಅವರು ಟ್ಯುನಿಶಿಯಾದ ಓನ್ಸ್ ಜಾಬರ್ ವಿರುದ್ಧ 3 ಸೆಟ್‌ಗಳ ಕಾದಾಟ ನಡೆಸಿ 4-6, 6-4, 6-1ರಿಂದ ಗೆದ್ದು ಬಂದರು. ಗಾಫ್ ಅವರ ಎದುರಾಳಿ ಅಮೆರಿಕದವರೇ ಆದ ಜೆನ್ನಿಫರ್ ಬ್ರಾಡಿ. ಅವರು ಜೆಕ್‌ನ ಮಾರಿ ಬೌಜ್ಕೋವಾ ವಿರುದ್ಧ 6-1, 6-2 ಅಂತರದ ಜಯ ಸಾಧಿಸಿದರು.