Advertisement

ತಾಯಿ ಸೆರೆನಾರಲ್ಲೊಬ್ಬ ಅಸಾಮಾನ್ಯ ಸಾಧಕಿ

11:13 AM Jun 09, 2019 | Vishnu Das |

ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲೊಬ್ಬರಾದ ಸೆರೆನಾ ವಿಲಿಯಮ್ಸ್‌, ಪ್ರಸ್ತುತ ನಡೆದ ಫ್ರೆಂಚ್‌ ಓಪನ್‌ನಲ್ಲಿ ಸೋತು ಹೋಗಿದ್ದಾರೆ. ಒಂದು ವೇಳೆ ಪ್ರಶಸ್ತಿ ಗೆದ್ದಿದ್ದರೆ, ಸಾರ್ವಕಾಲಿಕ ಗರಿಷ್ಠ ಗ್ರ್ಯಾನ್‌ಸ್ಲಾéಮ್‌ ಗೆಲುವಿನ ದಾಖಲೆ ಸರಿಗಟ್ಟುತ್ತಿದ್ದರು. ಈಗಿನ್ನೂ ಒಂದೂವರೆ ವರ್ಷದ ಮಗಳ ತಾಯಿಯಾಗಿರುವ ಸೆರೆನಾರ ಅಸಾಮಾನ್ಯ ಹೋರಾಟದ ಕಥೆ ಇಲ್ಲಿದೆ.

Advertisement

ಮಹಿಳಾ ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರ ಪಟ್ಟಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಹೆಸರು ಕೇಳಿ ಬರುವುದು ಸಹಜ ನ್ಯಾಯ. 37 ವರ್ಷದ ಸೆರೆನಾ ತಮ್ಮ ಸಾಧನೆಯ ಬಲದಿಂದಲೇ, ಆ ಸ್ಥಾನಕ್ಕೇರಿದ್ದಾರೆ. ಅವರ ಸಾಧನಯನ್ನೇ ನೋಡಿ. ಮಹಿಳಾ ಸಿಂಗಲ್ಸ್‌ನಲ್ಲಿ ಅವರು 23 ಗ್ರ್ಯಾನ್‌ಸ್ಲಾéಮ್‌ ಪ್ರಶಸ್ತಿ ಗೆದ್ದಿದ್ದಾರೆ. ಇದು ಆಧುನಿಕ ಟೆನಿಸ್‌ನ ಗರಿಷ್ಠ ಸಾಧನೆ. ಜರ್ಮನಿಯ ಸ್ಟೆಫಿಗ್ರಾಫ್ 22 ಪ್ರಶಸ್ತಿ ಗೆದ್ದಿದ್ದೇ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು.

ಸೆರೆನಾ ಮುಂದೆ ಇನ್ನೊಂದು ದಾಖಲೆ ಮಾತ್ರ ಉಳಿದುಕೊಂಡಿದೆ. ಅದು ಮಹಿಳಾ ಸಿಂಗಲ್ಸ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಗ್ರ್ಯಾನ್‌ಸ್ಲಾéಮ್‌ ಪ್ರಶಸ್ತಿ ಗೆಲ್ಲುವುದು. ನವೋದಯ ಕಾಲದಲ್ಲಿ ಸೆರೆನಾ 23 ಪ್ರಶಸ್ತಿ ಗೆದ್ದಿದ್ದರೂ, ಹಳೆಯ-ಹೊಸ ಎರಡೂ ಕಾಲಘಟ್ಟಗಳನ್ನು ತೆಗೆದುಕೊಂಡರೆ, ಮಾರ್ಗರೆಟ್‌ ಕೋರ್ಟ್‌ ಗೆದ್ದಿರುವ 24 ಪ್ರಶಸ್ತಿಗಳೇ ಸಾರ್ವಕಾಲಿಕ ಗರಿಷ್ಠ ಸಾಧನೆಯಾಗಿದೆ. ಈ ಗಡಿಯನ್ನು ದಾಟಲು ಸೆರೆನಾಗೆ ಬೇಕಾಗಿರುವುದು ಕೇವಲ 2 ಸಿಂಗಲ್ಸ್‌ ಪ್ರಶಸ್ತಿ ಮಾತ್ರ.

ಆಧುನಿಕ ಟೆನಿಸ್‌ನಲ್ಲಿರುವ ಪೈಪೋಟಿ, ವಿಶಾದ್ಯಂತ ಅದಕ್ಕಿರುವ ಜನಪ್ರಿಯತೆಯನ್ನು ಗಮನಿಸಿದರೆ, ಸೆರೆನಾರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಎನ್ನಲು ಅಡ್ಡಿಯಿಲ್ಲ. ಇನ್ನು ಆಟದಲ್ಲಿನ ತಂತ್ರಗಾರಿಕೆ, ಕೌಶಲ್ಯವನ್ನು ಗಮನಿಸಿದರೆ; ಮಾರ್ಟಿನಾ ನವ್ರಾಟಿಲೊವಾ, ಸ್ಟೆಫಿಗ್ರಾಫ್ ಸೆರೆನಾಗಿಂತ ತುಸು ಮೇಲಿನ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರಶಸ್ತಿ ಲೆಕ್ಕಾಚಾರದಲ್ಲಿ ಹಿಂದೆ ಬೀಳುತ್ತಾರೆ. ಅದೇನಿದ್ದರೂ ಸೆರೆನಾಗೆ ಸೆರೆನಾ ಅವರೇ ಸಾಟಿ. ಇದಕ್ಕೂ ಕಾರಣವಿದೆ.

ಮಹಿಳಾ ಟೆನಿಸಿಗರಿಗೆ ಪುರುಷರಿಗಿಂತ ಕಷ್ಟ ಜಾಸ್ತಿ. ಅದಕ್ಕೆ ಕಾರಣ ತಾಯ್ತನ. ಸಮಯಕ್ಕೆ ಸರಿಯಾಗಿ ವಿವಾಹವಾದರೆ ಯಾವುದೇ ಸಮಸ್ಯೆಯಿಲ್ಲದೇ ಮಗು ಜನಿಸುತ್ತದೆ. ಅದು ನಡೆಯದಿದ್ದರೆ ಹಲವು ಕಾರಣಗಳಿಂದ ಮಕ್ಕಳಾಗದೇ ಇರಬಹುದು. ಆದ್ದರಿಂದ ಕ್ರೀಡಾ ಜೀವನವೊ, ಮದುವೆಯೊ ಎಂಬ ಗೊಂದಲವಿದ್ದಿದ್ದೇ. ಯಾವುದೊ ಹಂತದಲ್ಲಿ ಅದಕ್ಕೆಲ್ಲ ಉತ್ತರ ಕಂಡುಕೊಳ್ಳಲೇಬೇಕಾಗುತ್ತದೆ. ಅಂತಹ ಧೈರ್ಯವನ್ನು ಸೆರೆನಾ ತಮ್ಮ 35ನೇ ವಯಸ್ಸಿನಲ್ಲಿ ಅಂದರೆ 2017ರಲ್ಲಿ ಮಾಡಿದರು. ಆ ವರ್ಷ ಜನವರಿಯಲ್ಲಿ ಅವರು ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಗೆದ್ದರು. ಆಗ ಅವರು 8 ವಾರದ ಗರ್ಭಿಣಿಯಾಗಿದ್ದರು! ಅಂತಹ ಸ್ಥಿತಿಯಲ್ಲೂ ಆಡುವ ಮಹತ್ವದ ತೀರ್ಮಾನ ತೆಗೆದುಕೊಂಡ ಅವರು ಅದರಲ್ಲಿ ಯಶಸ್ವಿಯಾದರು. ಆಗವರು ಈ ಮಾಹಿತಿಯನ್ನು ಬಚ್ಚಿಟ್ಟಿದ್ದರು! ಮುಂದೆ ಅಂದರೆ 2017ರ ಏಪ್ರಿಲ್‌ನಲ್ಲಿ ತಾನು 20 ವಾರದ ಗರ್ಭಿಣಿ ಎಂದು ಬಹಿರಂಗಪಡಿಸಿದರು. ಆಗಲೇ ಎಲ್ಲ ಲೆಕ್ಕಾಚಾರಗಳು ಜಗತ್ತಿನ ಎದುರು ತೆರೆದುಕೊಂಡಿದ್ದು. ಸೆ.1ರಂದು ಅವರು ತಮ್ಮ ಪುತ್ರಿ ಒಲಿಂಪಿಯಾಗೆ ಜನ್ಮ ನೀಡಿದರು. ಪತಿ ಅಲೆಕ್ಸಿಸ್‌ ಒಹಾನಿಯನ್‌, ಸಾಮಾಜಿಕ ಜಾಲತಾಣ ರೆಡ್ಡಿಟ್‌ ಸಂಸ್ಥಾಪಕರಲ್ಲಿ ಒಬ್ಬರು.

Advertisement

ಸೆರೆನಾ ಸಾಧಿಸಿದ ಇನ್ನೊಂದು ಅದ್ಭುತವೆಂದರೆ 2018ರಲ್ಲಿ ಅವರು ಅಂಕಣಕ್ಕೆ ಮರಳಿ, ಬೆನ್ನು ಬೆನ್ನಿಗೆ 2 ಬಾರಿ ಗ್ರ್ಯಾನ್‌ಸ್ಲಾéಮ್‌ ಫೈನಲ್‌ಗೇರಿದರು. ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ ಫೈನಲ್‌ಗೇರುವ ಜೊತೆಗೆ ಗೆದ್ದೇ ಬಿಡುವ ನಿರೀಕ್ಷೆಯಲ್ಲಿದ್ದರು. ಅಲ್ಲಿ ಸೋತರೂ ಇಡೀ ಕ್ರೀಡಾವಿಶ್ವ ಅವರಿಗೆ ಶಹಬ್ಟಾಷ್‌ ಎಂದಿತು. ಸದ್ಯ ಅವರ ಮುಂದಿರುವುದು ಕನಿಷ್ಠ ಇನ್ನೆರಡು ಮಹಿಳಾ ಸಿಂಗಲ್ಸ್‌ ಗ್ರ್ಯಾನ್‌ಸ್ಲಾéಮ್‌ ಗೆಲ್ಲುವುದು. ಅದಕ್ಕಾಗಿ ಈ ಬಾರಿ ಪ್ಯಾರಿಸ್‌ ನಡೆದ ಫ್ರೆಂಚ್‌ ಓಪನ್‌ ಕಣಕ್ಕಿಳಿದರು. ನೋವಿನ ಸಂಗತಿಯೆಂದರೆ 3ನೇ ಪಂದ್ಯದಲ್ಲೇ ಸೋತು ಕೂಟದಿಂದ ಹೊರಬಿದ್ದರು. ಆದರೆ ಗೆಲ್ಲುವ ಛಲ ಅವರಿಂದ ಹೊರಬಿದ್ದಿಲ್ಲ. ಸೆರೆನಾರಲ್ಲಿ ಆಡಾಡ್ತ ಅದ್ಭುತ ಸಾಧಿಸುವ ಉಮೇದು ಇನ್ನೂ ಹೋಗಿಲ್ಲ.

ಸಾವಿನಿಂದ ಪಾರಾಗಿದ್ದ ಸೆರೆನಾ
ಪುತ್ರಿಗೆ ಜನ್ಮ ನೀಡುವಾಗ ಸ್ವತಃ ಸೆರೆನಾ ಮೃತರಾಗಬೇಕಿತ್ತು. ಶ್ವಾಸಕೋಶದಲ್ಲಿ ರಕ್ತ ಕಟ್ಟಿಕೊಂಡು ಹೆರಿಗೆ ಅಸಾಧ್ಯ ಎನ್ನುವ ಸ್ಥಿತಿಯಿತ್ತು. ಅಂತಹ ಹೊತ್ತಿನಲ್ಲಿ ಸಾವಿನ ಜೊತೆ ಹೋರಾಡಿ ಸೆರೆನಾ ಗೆದ್ದು ಬಂದರು. ಮಗು ಜನನವಾದ ಮೇಲೆ ಸೆರೆನಾಗೆ ಉಸಿರಾಟದ ಸಮಸ್ಯೆ ಎದುರಾಯಿತು. ಅವರ ಆರೋಗ್ಯ ಬಹಳ ಕಾಲ ಹದಗೆಟ್ಟಿತ್ತು. ಇದಕ್ಕೆಲ್ಲ ಅವರು ಸೆಡ್ಡು ಹೊಡೆದಿದ್ದು, ಟೆನಿಸ್‌ ಮತ್ತೆ ಆಡಲೇಬೇಕೆಂಬ ತೀವ್ರ ವಾಂಛೆಯ ಮೂಲಕ. 2017ರ ಡಿಸೆಂಬರ್‌ನಲ್ಲಿ ಅಂದರೆ ಮಗು ಜನಿಸಿ ಕೇವಲ 3 ತಿಂಗಳಿಗೆ ಅವರು ಅಭ್ಯಾಸ ಆರಂಭಿಸಿದರು. ಬಹಳ ಪ್ರಯಾಸ ಪಟ್ಟು , ಹೋರಾಡಿ, ತಿಣುಕಾಡಿ ಅಂತೂ 2018 ಮಾರ್ಚ್‌ ತಿಂಗಳಿನ ಹೊತ್ತಿಗೆ ಮರಳಿ ದೈಹಿಕ ಸಾಮರ್ಥ್ಯ ಗಳಿಸಿದರು. ಸೆರೆನಾ ಟೆನಿಸ್‌ ಅಂಕಣಕ್ಕೆ ಮರಳಿದರು. ಆಗಿನ್ನೂ ಕೇವಲ 6 ತಿಂಗಳ ಬಾಣಂತಿ, ನಮ್ಮ ಮಾಮೂಲಿ ಭಾಷೆಯಲ್ಲಿ ಹೇಳುವುದಾದರೆ!

Advertisement

Udayavani is now on Telegram. Click here to join our channel and stay updated with the latest news.

Next