ದಕ್ಷಿಣ ಭಾರತದ ಹೆಚ್ಚಿನ ಅಡುಗೆ ಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು. ಬೇಕರಿ ತಿನಿಸುಗಳ ಕಲ್ಪನೆಯೇ ಇಲ್ಲದಿದ್ದ ನಮ್ಮ ಬಾಲ್ಯದ ದಿನಗಳಲ್ಲಿ, ಅಮ್ಮಂದಿರು ಒಂದಿಷ್ಟು ಕಾಯಿ ತುರಿಗೆ ಬೆಲ್ಲ ಬೆರೆಸಿ ಸಿಹಿ ಅವಲಕ್ಕಿ ಅಥವಾ ಉಪ್ಪು-ಖಾರ-ಒಗ್ಗರಣೆ ಬೆರೆಸಿದ ಖಾರದ ಅವಲಕ್ಕಿ ಬೆರೆಸಿ ಕೊಡುತ್ತಿದ್ದರು. ಅದ್ಬುತವಾದ ರುಚಿಯುಳ್ಳ ತಾಜಾ ತಿನಿಸು ಕೆಲವೇ ನಿಮಿಷದಲ್ಲಿ ಸಿದ್ಧವಾಗುತ್ತಿತ್ತು. ಆ ದಿನಗಳಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಭೋರ್ಗರೆಯುವ ಮಳೆಗಾಲದ ದಿನಗಳಲ್ಲಿ ತರಕಾರಿ ಸಿಗದಿದ್ದರೆ ಅಡುಗೆ ಮಾಡಲು ಚಿಂತೆ ಇರುತ್ತಿರಲಿಲ್ಲ. ತೆಂಗಿನಕಾಯಿ ತುರಿಗೆ ಆಯ್ಕೆಗೆ ತಕ್ಕಂತೆ ಒಣಮೆಣಸಿನಕಾಯಿ, ಹಸಿರುಮೆಣಸಿನಕಾಯಿ, ಉಪ್ಪು, ಹುಳಿ ಸೇರಿಸಿ ಗಟ್ಟಿಯಾಗಿ ರುಬ್ಬಿ ಒಗ್ಗರಣೆ ಕೊಟ್ಟರೆ ರುಚಿಯಾದ ಚಟ್ನಿ ಸಿದ್ಧ. ಲಭ್ಯತೆಗೆ ತಕ್ಕಂತೆ ಮಾವಿನಕಾಯಿ, ಶುಂಠಿ, ಈರುಳ್ಳಿ, ಕರಿಬೇವಿನಸೊಪ್ಪು, ಹೀರೆಕಾಯಿ, ಹುರಿದ ಕಡಲೇಬೇಳೆ, ಹುರುಳಿಕಾಳು…ಹೀಗೆ ಯಾವುದಾದರೂ ಒಂದನ್ನು ಸೇರಿಸಿದರೆ ಇನ್ನೂ ಸೊಗಸು. ಬಿಸಿಬಿಸಿ ಕುಸುಬಲಕ್ಕಿ ಗಂಜಿಯೊಂದಿಗೆ ಖಾರ ಚಟ್ನಿ, ತುಪ್ಪ ಸೇರಿಸಿ ಉಂಡರೆ ಕರಾವಳಿಗರಿಗೆ ಸ್ವರ್ಗಕ್ಕೆ ಮೂರೇ ಗೇಣು. ಹೀಗೆ ಬಹುವಿಧದ ಸಿಹಿ, ಖಾರ ಅಡುಗೆಗಳಿಗೆ ಹೊಂದಿಕೊಳ್ಳುವ ತೆಂಗಿನಕಾಯಿಂದಾಗಿ “ಇಂಗು - ತೆಂಗು ಇದ್ದರೆ ಮಂಗುವೂ ಅಡುಗೆ ಮಾಡುತ್ತದೆ’ ಎಂಬ ಗಾದೆ ಸೃಷ್ಟಿಯಾಗಿರಬೇಕು.
ತೆಂಗಿನಕಾಯಿಯ ಎಳನೀರು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ಎಳೆಯ ಮಕ್ಕಳಿಗೂ, ಅಶಕ್ತರಿಗೂ ಉತ್ತಮ ಆಹಾರ. ಬೆಳೆದ ಕಾಯಿಯು ಅಡುಗೆಗೆ ಮಾತ್ರವಲ್ಲದೆ ಹೆಚ್ಚಿನ ಧಾರ್ಮಿಕ ಆಚರಣೆಗಳಲ್ಲಿ ಹಬ್ಬಹರಿದಿನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ನೆರೆಯ ರಾಜ್ಯ ಕೇರಳದ ಪ್ರಮುಖ ಆಹಾರ ಹಾಗೂ ವಾಣಿಜ್ಯ ಬೆಳೆ ತೆಂಗು. ಮಲಯಾಳಂ ಭಾಷೆಯಲ್ಲಿ “ಕೇರ’ಎಂದರೆ ತೆಂಗಿನಮರ ಹಾಗೂ “ಅಲಂ’ ಎಂದರೆ ನಾಡು. ಈ ರಾಜ್ಯವು ತನ್ನ ಭೂಮಿಯಲ್ಲಿ ಬಹಳಷ್ಟು ತೆಂಗಿನ ಮರಗಳನ್ನು ಹೊಂದಿರುವುದ, ಕೇರಳ’ ಎಂಬ ಹೆಸರು ಪಡೆಯಿತು. ತೆಂಗಿನ ಮರದ ಕಾಂಡ, ಗರಿ, ಕಾಯಿ, ನಾರು, ಕರಟಗಳನ್ನು ಬಳಸಿ ತಯಾರಿಸುವ ಆಕರ್ಷಕ ಕರಕುಶಲ ಉತ್ಪನ್ನಗಳು ಕೇರಳದಲ್ಲಿ ಪ್ರಸಿದ್ಧ. ಉದಾಹರಣೆಗೆ, ಪೆನ್ ಸ್ಟ್ಯಾಂಡ್, ಗೃಹಾಲಂಕಾರ ವಸ್ತುಗಳು, ವಿವಿಧ ಕಲಾಕೃತಿಗಳು, ಹುರಿಹಗ್ಗ, ಕಾಲೊರೆಸುವ ಚಾಪೆಗಳು, ಚೀಲಗಳು, ಕರಟದ ಚಿಪ್ಪಿನ ಆಭರಣಗಳು, ಕ್ಲಿಪ್ ಗಳು ಇತ್ಯಾದಿ ಕೇರಳದ ಅಡುಗೆಗಳಿಗೆ ತೆಂಗಿನೆಣ್ಣೆಯನ್ನೇ ಬಳಸುತ್ತಾರೆ. ತೆಂಗಿನೆಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಅಂಶ ಜಾಸ್ತಿ ಇದೆಯೆಂದೂ, ಅದು ಹೃದಯಾಘಾತವನ್ನು ಹೆಚ್ಚಿಸುತ್ತದೆಯೆಂದೂ ಇತರ ಖಾದ್ಯತೈಲ ಉತ್ಪಾದಕ ಸಂಸ್ಥೆಗಳು ಪ್ರಚಾರಮಾಡುತ್ತಿವೆ. ಇದರಲ್ಲಿ ಸತ್ಯಾಂಶಕ್ಕಿಂತಲೂ ವ್ಯಾವಹಾರಿಕ ದೃಷ್ಟಿಕೋನವೇ ಹೆಚ್ಚು ಎಂಬುದು ಇತ್ತೀಚೆಗೆ ವೇದ್ಯವಾಗುತ್ತಿದೆ. ತೆಂಗಿನೆಣ್ಣೆಯು ಚರ್ಮದ ಶುಷ್ಕತೆಯನ್ನು ಕಡಿಮೆಮಾಡುವುದರೊಂದಿಗೆ ಕೆಲವು ಸೋಂಕುಗಳನ್ನೂ ನಿವಾರಿಸುವ ಸಾಮರ್ಥ್ಯ ಹೊಂದಿದೆ. ಕೇರಳದ ಹೆಚ್ಚಿನ ಮಂದಿ ಅಡುಗೆಗೂ, ತಲೆ-ಮೈಗೆ ಹಚ್ಚಿಕೊಳ್ಳಲೂ ತೆಂಗಿನ ಎಣ್ಣೆಯನ್ನೇ ಬಳಸಿ ಆರೋಗ್ಯದಿಂದಿರುವುದು ಇದಕ್ಕೆ ಸಾಕ್ಷಿ.
ಹೀಗೆ ತೆಂಗಿನಮರದ ಪ್ರತಿ ಭಾಗಗಳೂ, ಪ್ರತಿಹಂತದಲ್ಲಿಯೂ ಉಪಯುಕ್ತವಾಗಿದ್ದು, ಬಯಸಿದ್ದನ್ನೆಲ್ಲ ಕೊಡುವ ಮರ ಎಂಬ ಅರ್ಥದಲ್ಲಿ ಕಲ್ಪವೃಕ್ಷವೆಂದೂ ಕರೆಯಲ್ಪಡುತ್ತದೆ. ಏಷ್ಯಾದ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆಗೆ ತೆಂಗಿನಕಾಯಿ ಬೆಳೆಯನ್ನು ಪೋ›ತ್ಸಾಹಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ, ಏಷ್ಯಾ-ಫೆಸಿಫಿಕ್ ದೇಶಗಳ ತೆಂಗಿನಕಾಯಿ ಸಮುದಾಯ ಮಂಡಳಿಯನ್ನು ರಚಿಸಿ, ಸೆಪ್ಟೆಂಬರ್ 2 ರಂದು “ವಿಶ್ವ ತೆಂಗಿನಕಾಯಿ ದಿನ’ ಎಂದು ಘೋಷಿಸಿದ್ದಾರೆ. ಭಾರತದಲ್ಲಿ, ಮುಂಬಯಿ, ಕೊಂಕಣ ಸೀಮೆಗಳ ಸಮುದ್ರ ತೀರದಲ್ಲಿ ವಾಸಿಸುವ ಜನರು, ಶ್ರಾವಣ ಮಾಸದ ಪ್ರಥಮ ಹುಣ್ಣಿಮೆ ದಿನದಂದು, “ನಾರಿಯಲ್ ಪೂರ್ಣಿಮಾ’ ಎಂಬ ಹೆಸರಿನಲ್ಲಿ ಸಮುದ್ರವನ್ನು ಪೂಜಿಸಿ ಹೂವು, ಅಕ್ಕಿ ಹಾಗೂ ತೆಂಗಿನಕಾಯಿಗಳನ್ನು ಅರ್ಪಿಸಿ, “ತೆಂಗಿನಕಾಯಿ ದಿನ’ವನ್ನು ಆಚರಿಸುತ್ತಾರೆ.
ಹೇಮಮಾಲಾ ಬಿ.