Advertisement

ಭಾರತೀಯ ನೌಕಾಪಡೆಗೆ ವಿಕ್ರಾಂತ ಕ್ರಾಂತಿ…

02:35 PM Sep 01, 2022 | Team Udayavani |

ಸೆ.2ರಂದು ಲೋಕಾರ್ಪಣೆಯಾಗಲಿರುವ ಐಎನ್‌ಎಸ್‌ ವಿಕ್ರಾಂತ್‌ನ ದರ್ಶನದ ಭಾಗ್ಯ ಉದಯವಾಣಿಗೆ ಸಿಕ್ಕಿದೆ. ನೌಕಾಪಡೆ ತಂಡದೊಂದಿಗೆ ಸುಮಾರು 700 ಮೆಟ್ಟಿಲುಗಳನ್ನು ಏರಿ ನೀರುಕೊಕ್ಕರೆಯಂತೆ ಚಾಚಿಕೊಂಡ ನೌಕೆಯ ನೆತ್ತಿಯ ಮೇಲೆ ನಿಂತಾಗ ಅದ್ಭುತ ಅನುಭವ. ಸಾಮಾನ್ಯವಾಗಿ ಒಲಿಂಪಿಕ್‌ನಲ್ಲಿಯ ಐದು ಈಜುಕೊಳಗಳನ್ನು ಒಟ್ಟಿಗೆ ಸೇರಿಸಿದರೆ ಆಗುವಷ್ಟು ವಿಶಾಲ ಮೈದಾನ ಅಲ್ಲಿ ತೆರೆದುನಿಂತಿದೆ. ಹಾಗೆಯೇ ಇದು ಹೊರಗಿನಿಂದ ನೋಡಲು ಇದೊಂದು ಕೇವಲ ನೌಕೆಯಷ್ಟೇ… ಒಳಹೊಕ್ಕರೆ ವಿರಾಟ ದರ್ಶನ. ಬಗೆದಷ್ಟೂ ಕೌತುಕಗಳೇ.

Advertisement

ಮೇಕ್‌ ಇನ್‌ ಇಂಡಿಯಾ ಯೋಜನೆ ಅಡಿ ನಿರ್ಮಾಣಗೊಂಡ ದೇಶದ ಮೊದಲ ಮತ್ತು ಅತೀ ದೊಡ್ಡ ವಿಮಾನವಾಹಕ ನೌಕೆಯಾದ ವಿಕ್ರಾಂತ್‌ನ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲು “ಉದಯವಾಣಿ’ ತಂಡ ಭೇಟಿ ನೀಡಿತು.

ಧೋ ಧೋ ಮಳೆ ಬೆಳಗ್ಗೆ 9 ಗಂಟೆಯಾ­ದರೂ ಹೊದ್ದುಮಲಗಿದ್ದ ಮುಸುಕಿನ ನಡುವೆ ಕೊಚ್ಚಿ ಶಿಪ್‌ಯಾರ್ಡ್‌ನ ಬಂದರಿನಲ್ಲಿ ಭವಿಷ್ಯದ ತಾರೆಯಂತೆ ಐಎನ್‌ಎಸ್‌ ವಿಕ್ರಾಂತ್‌ ಮಿನುಗುತ್ತಿತ್ತು. ಸುಣ್ಣ­ಬಣ್ಣ ಬಳಿದು ಸಿಂಗರಿಸುವ, ದೇಶದ ಪ್ರಧಾನಿ ನರೇಂದ್ರ ಮೋದಿ ಎದುರು ನೌಕಾಪಡೆಯ ಸಾಮರ್ಥ್ಯ ಪ್ರದರ್ಶನ, ಕವಾಯತು, ಬ್ಯಾಂಡ್‌ ಹೀಗೆ ಪ್ರತಿಯೊಬ್ಬರೂ ತೊಡಗಿದ್ದರು.

ಹ್ಯಾಂಗರ್‌ ಕಂಪಾರ್ಟ್‌ಮೆಂಟ್‌
ಯುದ್ಧವಿಮಾನದ ಹ್ಯಾಂಗರ್‌ ಕಂಪಾರ್ಟ್‌ ­ ಮೆಂಟ್‌ ಸಿಕ್ಕಿತು. ಶತ್ರು ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸುವ ದೈತ್ಯಾಕಾರದ ಯುದ್ಧವಿಮಾನ­ಗಳು ಇಲ್ಲಿ ವಿರಾಜಮಾನವಾಗಿವೆ. ಇಲ್ಲಿಂದ ವಿಮಾನ­ಗಳನ್ನು ಹ್ಯಾಂಗರ್‌ಗಳಿಂದ ಫ್ಲೈಯಿಂಗ್‌ ಡೆಕ್‌ಗೆ ಲಿಫ್ಟ್ ಮಾಡಲಾಗುತ್ತದೆ. ಅಲ್ಲಿಂದ ಕಾರ್ಯಾಚರಣೆ­ಕಳುಹಿಸಲಾಗುತ್ತದೆ. ಸದ್ಯಕ್ಕೆ ಇಲ್ಲಿ ಎರಡು ಮಾತ್ರ ಇದ್ದು, 30 ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಇಲ್ಲಿ ನಿಲ್ಲಿಸಬಹುದು ಎಂದು ಲೆ| ಕ| ಭರತ್‌ಚಂದ್ರ ಮಾಹಿತಿ ನೀಡಿದರು.

ಅಲ್ಲಿಂದ ಕೆಳಗಿಳಿಯುತ್ತಿದ್ದಂತೆ ಇಡೀ ನೌಕೆಯ ಮೆದುಳು ಅಥವಾ ನರಮಂಡಲ ಸಿಕ್ಕಿತು. ನೌಕೆಯ ಎಡ ಮತ್ತು ಬಲಭಾಗವನ್ನು ಪ್ರತ್ಯೇಕವಾಗಿ ನಿಯಂತ್ರಿಸಲಾಗುತ್ತದೆ. ಶುದ್ಧಕುಡಿಯುವ ನೀರು ಪಂಪ್‌, ವೆಂಟಿಲೇಷನ್‌ ಮತ್ತು ಹವಾನಿಯಂತ್ರಣ ವ್ಯವಸ್ಥೆ, ನೆಟ್‌ವರ್ಕಿಂಗ್‌ ಸೇರಿದಂತೆ ಪಾಳಿಯಲ್ಲಿ ದಿನದ 24 ಗಂಟೆ ಇಲ್ಲಿ ಜನ ಕೆಲಸ ಮಾಡುತ್ತಾರೆ. ನಿರ್ದೇಶನಗಳನ್ನೂ ಇಲ್ಲಿಂದ ನೀಡಲಾಗುತ್ತದೆ. ಪಕ್ಕದಲ್ಲೇ ನಾಲ್ಕು ಸ್ವಿಚ್‌ಬೋರ್ಡ್‌ಗಳನ್ನು ಅಳವಡಿಸ­ಲಾಗಿದೆ. ಡೀಸೆಲ್‌ ಜನರೇಟರ್‌ಗಳಿಂದ ಇಲ್ಲಿಗೆ ವಿದ್ಯುತ್‌ ಪೂರೈಕೆ ಆಗುತ್ತದೆ. ಇಲ್ಲಿಂದ ಲೋಡ್‌ ಮ್ಯಾನೇಜ್‌ಮೆಂಟ್‌ ಮಾಡಲಾಗುತ್ತದೆ.

Advertisement

ಸಣ್ಣ ಕಸಕಡ್ಡಿಯನ್ನೂ ಇಲ್ಲಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ, ಸುಮಾರು 200 ಜನರನ್ನು ಬರೀ ರನ್‌ವೇ ಸ್ವತ್ಛಗೊಳಿಸಲಿಕ್ಕಾಗಿಯೇ ನೇಮಿಸಲಾಗಿದೆ!

ಸುಸಜ್ಜಿತ ಪಾಕಶಾಲೆ
ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಅತ್ಯಂತ ಸುಸಜ್ಜಿತ “ಪಾಕಶಾಲೆ’ ಇದೆ. ಇದರಲ್ಲಿ ಕಿರಿಯರು, ಹಿರಿಯ ಅಧಿಕಾರಿಗಳು ಸೇರಿದಂತೆ ಮೂರು ಪ್ರಕಾರದ ಅಡುಗೆಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಚಪಾತಿ, ಪಲ್ಯ ಒಳಗೊಂಡಂತೆ ತರಹೇವಾರಿ ಊಟ ತಯಾರಾಗುತ್ತದೆ. ಬೆಳಗ್ಗೆ 4 ಗಂಟೆಗೆ ಅಡುಗೆ ಮನೆಯ ಸ್ವಿಚ್‌ ಆನ್‌ ಆದರೆ ಬಂದ್‌ ಆಗುವುದು ರಾತ್ರಿ 10 ಗಂಟೆಗೆ.

ನಿತ್ಯ 1,500-1,600 ಜನರಿಗಾಗಿ ಊಟ-ಉಪಾಹಾರ ಇಲ್ಲಿ ತಯಾರಾಗುತ್ತದೆ. ಇದೊಂದು ರೀತಿ ಧಾರ್ಮಿಕ ಕ್ಷೇತ್ರಗಳಲ್ಲಿನ ದಾಸೋಹದಂತೆ. ಇಷ್ಟೇ ಅಲ್ಲ, ಆರು ತಿಂಗಳುಗಟ್ಟಲೆ ಯೋಧರು ಈ ನೌಕೆಯಲ್ಲಿ ಕಳೆಯುವುದರಿಂದ ಅವರಿಗೂ ಬೇಸರ ಇರುತ್ತದೆ. ಹಾಗಾಗಿ, ಪಿಜ್ಜಾ, ಬರ್ಗರ್‌, ಚಿಪ್ಸ್‌ ನಂತಹ ಬಾಯಲ್ಲಿ ನೀರೂರಿಸುವ ತಿಂಡಿಗಳು ಕೂಡ ಲಭ್ಯ ಎಂದು ಲೆಫ್ಟಿನೆಂಟ್‌ ಕಮಾಂಡರ್‌ ಬಿ.ಎಂ. ಭರತ್‌ಚಂದ್ರ ತಿಳಿಸುತ್ತಾರೆ.

ಅತೀ ಕಡಿಮೆ ವೆಚ್ಚದಲ್ಲಿ ನಿರ್ಮಾಣ
ಅತೀ ಕಡಿಮೆ ವೆಚ್ಚದಲ್ಲಿ ಈ ನೌಕೆಯನ್ನು ನಿರ್ಮಿಸಿದ ಕೀರ್ತಿ ಕೊಚ್ಚಿ ಶಿಪ್‌ಯಾರ್ಡ್‌ ಲಿ., (ಸಿಎಸ್‌ಎಲ್‌) ನದ್ದಾಗಿದೆ. ಉಳಿದ ದೇಶಗಳು ಖರ್ಚು ಮಾಡಿದ 3ನೇ ಎರಡು ಭಾಗದಲ್ಲಿ ಈ ನೌಕೆಯನ್ನು ನಿರ್ಮಿಸಲಾಗಿದೆ. ಉದಾಹರಣೆಗೆ 48 ಸಾವಿರ ಟನ್‌ ಸಾಮರ್ಥ್ಯದ ವಿಕ್ರಾಂತ್‌ ನಿರ್ಮಾಣಕ್ಕೆ ಸುಮಾರು 20 ಸಾವಿರ ಕೋಟಿ ರೂ. ಖರ್ಚಾಗಿದೆ. ಇಷ್ಟೇ ಸಾಮರ್ಥ್ಯದ ನೌಕೆಯನ್ನು ಅಮೆರಿಕ 30ರಿಂದ 35 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತದೆ. ಇದು ಮೇಕ್‌ ಇನ್‌ ಇಂಡಿಯಾ ಫ‌ಲ ಎಂದು ಸಿಎಸ್‌ಎಲ್‌ ಅಧಿಕಾರಿಗಳು ತಿಳಿಸುತ್ತಾರೆ. ಸುಮಾರು 550 ದೇಶೀಯ ಕಂಪೆನಿಗಳು ಇದಕ್ಕಾಗಿ ಕೆಲಸ ಮಾಡಿವೆ. ಶೇ. 76ರಷ್ಟು ದೇಶೀಯವಾಗಿದ್ದು, ಇದಕ್ಕಾಗಿ ದುಡಿದವರಲ್ಲಿ ಶೇ. 80ರಷ್ಟು ಜನ ಕೂಡ ಭಾರತದವರೇ ಆಗಿದ್ದಾರೆ. ಇನ್ನೂ ವಿಶೇಷವೆಂದರೆ ಇಲ್ಲಿ ಜಮ್ಮು- ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ಭಾಗದ ಜನ ಒಂದಿಲ್ಲೊಂದು ರೀತಿಯಲ್ಲಿ ಕೈಜೋಡಿಸಿದ್ದಾರೆ.

ಮತ್ತೆ ಹುಟ್ಟಿಬಂದ ವಿಕ್ರಾಂತ್‌
ಎಚ್‌ಎಂಎಸ್‌ ಹೆರ್ಕುಲಸ್‌ ವಿಮಾನವಾಹಕ ನೌಕೆಯನ್ನು ಬ್ರಿಟಿಷರಿಂದ ಪಡೆಯಲಾಗಿತ್ತು. ಇದಕ್ಕೆ ಅನಂತರ “ವಿಕ್ರಾಂತ್‌’ ಎಂದು ನಾಮಕರಣ ಮಾಡಲಾಯಿತು. ಇದೇ ನೌಕೆ 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಇದಾದ ಬಳಿಕ ಅಂದರೆ, 1987ರಲ್ಲಿ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆಯನ್ನು ಬ್ರಿಟನ್‌ನಿಂದ ಪಡೆಯಲಾಯಿತು. ಇದಾಗಿ 2013ರಲ್ಲಿ ಐಎನ್‌ಎಸ್‌ ವಿಕ್ರಮಾದಿತ್ಯ ಬಂದಿತು. ಸಾಮಾನ್ಯವಾಗಿ ಭಾರತೀಯ ಪರಂಪರೆಯಲ್ಲಿ ದೇಶಕ್ಕಾಗಿ ಕೊಡುಗೆ ನೀಡಿದ ಯಾವುದನ್ನೂ ಗುಜರಿಗೆ ಹಾಕುವುದಿಲ್ಲ. ಬದಲಿಗೆ ಅದನ್ನು ಮುಂದಿನ ಪೀಳಿಗೆಗೆ ಮಾದರಿಯನ್ನಾಗಿ ಇಡಲಾಗುತ್ತದೆ. ಈ ಹಿಂದೆ ಇದ್ದ ವಿಕ್ರಾಂತ್‌ ಅನ್ನೂ ಹಾಗೇ ಮಾಡಲಾಗಿತ್ತು. ಈಗ ಸ್ವತಃ ದೇಶೀಯವಾಗಿ ನಿರ್ಮಿಸಿರುವ ನೌಕೆಗೆ ದೇಶದ ಮೊದಲ ಯುದ್ಧನೌಕೆಯ ಹೆಸರನ್ನೇ ಇಡಲಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದರು.

6ನೇ ರಾಷ್ಟ್ರ ಭಾರತ
ವಿಕ್ರಾಂತ್‌ ನಿರ್ಮಾಣದ ಮೂಲಕ ದೇಶೀಯವಾಗಿ ವಿಮಾನವಾಹಕ ನೌಕೆ ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಾಮರ್ಥ್ಯವಿರುವ ಕೆಲವೇ ಕೆಲವು ದೇಶಗಳ ಸಾಲಿಗೆ ಭಾರತ ಸೇರಿದಂತಾಗಿದೆ. ಪ್ರಸ್ತುತ ಅಮೆರಿಕ, ಬ್ರಿಟನ್‌, ಚೀನ, ರಷ್ಯಾ ಮತ್ತು ಫ್ರಾನ್ಸ್‌ ಇಂಥದ್ದೊಂದು ಮಿಲಿಟರಿ ಆಸ್ತಿಯನ್ನು ಹೊಂದಿವೆ.

ವೈಶಿಷ್ಟ್ಯನು?
-ವಿಕ್ರಾಂತ್‌ ನೌಕೆಯ ಶೇ.76ರಷ್ಟು ಭಾಗವನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ವಿಶೇಷವೆಂದರೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ ಬಿಡಿಭಾಗಗಳು ಸಿದ್ದವಾಗಿದ್ದು, ಇದು “ರಾಷ್ಟ್ರೀಯ ಏಕತೆ’ಯ ಸಂಕೇತವಾಗಿ ಗುರುತಿಸಿಕೊಂಡಿದೆ.
– ನೌಕೆಯಲ್ಲಿ ಮಹಿಳಾ ಅಧಿಕಾರಿಗಳು ಹಾಗೂ ಮಹಿಳಾ ಅಗ್ನಿವೀರ ನೌಕಾಯಾನಿಗಳಿಗೆಂದೇ ವಿಶೇಷ ಕ್ಯಾಬಿನ್‌ಗಳನ್ನು ನಿರ್ಮಿಸಲಾಗಿದೆ.
– ಗ್ಯಾಸ್‌ ಟರ್ಬೈನ್‌ಗಳ ಮೂಲಕ (ಒಟ್ಟು 88 ಮೆ.ವ್ಯಾ. ಶಕ್ತಿ) ಸಂಚರಿಸುವ ಈ ನೌಕೆಯು 28 ನಾಟ್‌ಗಳ ಗರಿಷ್ಠ ವೇಗವನ್ನು ಹೊಂದಿದೆ. ನಿರ್ಮಾ ಣಕ್ಕೆ ಯುದ್ಧನೌಕೆ-ಗ್ರೇಡ್‌ನ‌ ಉಕ್ಕು ಬಳಸಲಾಗಿದೆ.
– ನೌಕಾಪಡೆ, ಭಾರತೀಯ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಭಾರತೀಯ ಉಕ್ಕು ಪ್ರಾಧಿಕಾರ ಜಂಟಿಯಾಗಿ ನಿರ್ಮಿಸಿವೆ.
– ಮಿಗ್‌-29ಕೆ ಯುದ್ಧ ವಿಮಾನದ ವಾಹಕವನ್ನಾಗಿ ವಿಕ್ರಾಂತ್‌ ನೌಕೆಯನ್ನು ನಿರ್ಮಾಣ ಮಾಡಲಾ ಗಿದೆ. ಆದರೆ ಟಿಇಡಿ-ಬಿಎಫ್ ಯುದ್ಧವಿಮಾನ, ರಫೇಲ್‌, ಎಫ್-18 ಜೆಟ್‌ಗಳನ್ನೂ ಇದರಲ್ಲಿ ನಿಯೋಜಿಸಬಹುದು ಎಂದು ನೌಕಾಪಡೆ ಹೇಳಿದೆ.
– ಫ್ಲೈಟ್‌ ಡೆಕ್‌ನಲ್ಲಿ (ವಿಮಾನ ಟೇಕಾಫ್ ಮತ್ತು ಲ್ಯಾಂಡ್‌ ಆಗುವಂಥ ಮೇಲ್ಮೆ„ ಪ್ರದೇಶ) 19 ಮತ್ತು ಕೆಳಗಿರುವ ಹ್ಯಾಂಗರ್‌ನಲ್ಲಿ 17 ಹೀಗೆ ಒಟ್ಟು 36 ಯುದ್ಧ ವಿಮಾನಗಳನ್ನು ವಿಕ್ರಾಂತ್‌ ಹೊರಬಲ್ಲುದು.

ಸಮರ ನೌಕೆಯ ಎಲೈಟ್‌ ಕ್ಲಬ್‌
ಭಾರತ ಐಎನ್‌ಎಸ್‌ ವಿಕ್ರಮಾದಿತ್ಯವನ್ನು 2013ರಲ್ಲೇ ನೌಕಾಪಡೆಗೆ ಸೇರಿಸಿಕೊಂಡಿತ್ತು. ಆದರೆ ಈಗ ಸೇರಿಸಿಕೊಳ್ಳುತ್ತಿರುವ ಐಎನ್‌ಎಸ್‌ ವಿಕ್ರಾಂತ್‌ನ ವಿಶೇಷವೆಂದರೆ ಇದರ ಮುಕ್ಕಾಲು ಪಾಲು ದೇಶೀಯವಾಗಿಯೇ ತಯಾರಾಗಿರುವುದು. ಈಗಾಗಲೇ ಅಮೆರಿಕ, ಚೀನ, ರಷ್ಯಾ, ಫ್ರಾನ್ಸ್‌, ಬ್ರಿಟನ್‌ ಸೇರಿದಂತೆ ಹಲವಾರು ದೇಶಗಳು ಇಂಥವೇ ನೌಕೆ ಹೊಂದಿವೆ. ಈ ಸಾಲಿಗೆ ಈಗ ಭಾರತ ಸೇರ್ಪಡೆಯಾಗಿದೆ.

ಅಮೆರಿಕ (ಎಲ್ಲವೂ ಅಣುಶಕ್ತಿ ಚಾಲಿತ)
ಗೆರಾಲ್ಡ್‌ ಆಫ್ ಫೋರ್ಡ್‌
ಚಾಲನೆ : 2017ರ ಜು.22
ತವರು ಬಂದರು : ನಾಫೋಲ್ಕ್, ವರ್ಜೀನಿಯಾ
ಸಾಮರ್ಥ್ಯ : ಒಂದು ಲಕ್ಷ ಟನ್‌
ಸಾಗಣೆ ಸಾಮರ್ಥ್ಯ – 75+ ಯುದ್ಧ ವಿಮಾನಗಳು
ನಿಮಿಟ್ಜ್ ಕ್ಲಾಸ್‌ ಸಮರನೌಕೆ
ನಿಮಿಟ್ಜ್
1975ರ ಮೇ 3
ಬ್ರೆಮೆರ್ಟಾನ್‌, ವಾಷಿಂಗ್ಟನ್‌
ಜಾರ್ಜ್‌ ವಾಷಿಂಗ್ಟನ್‌
1992ರ ಜು.4
ನಾಫೋಲ್ಕ್, ವರ್ಜೀನಿಯಾ
ಡ್ವೆಲ್ಟ್ ಡಿ. ಐಸೆನ್ಹೋವರ್‌
1977ರ ಅ.18
ನಾಫೋಲ್ಕ್, ವರ್ಜೀನಿಯಾ
ಜಾನ್‌ ಸಿ. ಸ್ಟೆನ್ನಿಸ್‌
1995ರ ಡಿ.9,
ನಾಫೋಲ್ಕ್, ವರ್ಜೀನಿಯಾ
ಕಾರ್ಲ್ ವಿನ್ಸನ್‌
1982ರ ಮಾ.13
ಸ್ಯಾನ್‌ ಡಿಯಾಗೋ, ಕ್ಯಾಲಿಫೋರ್ನಿಯಾ
ಹ್ಯಾರಿ ಎಸ್‌. ಟ್ರೂಮನ್‌
1998ರ ಜು.25
ನಾಫೋಲ್ಕ್, ವರ್ಜೀನಿಯಾ
ಟಿ ರೂಸ್‌ವೆಲ್ಟ್
1986ರ ಅ.25
ಬ್ರೆಮೆರ್ಟಾನ್‌, ವಾಷಿಂಗ್ಟನ್‌
ರೋನಾಲ್ಡ್‌ ರೇಗನ್‌
2003ರ ಜು.12
ಯೋಕುಸುಕಾ, ಜಪಾನ್‌
ಅಬ್ರಾಹಂ ಲಿಂಕನ್‌
1989ರ ನ.11
ಸ್ಯಾನ್‌ಡಿಯಾಗೋ, ಕ್ಯಾಲಿಫೋರ್ನಿಯಾ
ಜಾರ್ಜ್‌ ಎಚ್‌.ಡಬ್ಲ್ಯೂ . ಬುಷ್‌
2009ರ ಜ.10
ನಾಫೋಲ್ಕ್, ವರ್ಜೀನಿಯಾ

ಫ್ರಾನ್ಸ್‌ (ಅಣ್ವಸ್ತ್ರ ಚಾಲಿತ ಸಮರನೌಕೆಗಳು )
ಚಾರ್ಲ್ಸ್ ಡೆ ಗಲೇ
2001ರ ಮೇ 18
ಟೌಲನ್‌
45,500 ಟನ್‌
40 ಯುದ್ಧವಿಮಾನಗಳು
ಚೀನ : ಲಿಯೋನಿಂಗ್‌
2012ರ ಸೆ.25
ಶಾಂಡಾಂಗ್‌ ಪ್ರಾಂತ್ಯದ
ಯೂಚಿ ನೌಕಾ ನೆಲೆ
60,900 ಟನ್‌
40 ಯುದ್ಧ ವಿಮಾನಗಳು
ಶಾಂಡಾಂಗ್‌
2019ರ ಡಿ.17
ಹೈನನ್‌ ಪ್ರಾಂತ್ಯದ ಸಾನ್ಯ
66,000ರಿಂದ 70,000 ಟನ್‌
36 ಯುದ್ಧವಿಮಾನಗಳು

ಇಂಗ್ಲೆಂಡ್‌
ಕ್ವೀನ್‌ ಎಲಿಜಬೆತ್‌
2017ರ ಡಿ.7
ಪೋರ್ಟ್ಸ್ ಮೌತ್‌
65,000 ಟನ್‌
60 ಯುದ್ಧವಿಮಾನಗಳು
ಪ್ರಿನ್ಸ್‌ ಆಫ್ ವೇಲ್ಸ್‌
2019ರ ಡಿ.10
ಪೋರ್ಟ್ಸ್ ಮೌತ್‌
65, 000 ಟನ್‌

60 ಯುದ್ಧ ವಿಮಾನಗಳು
ಇಟಲಿ : ಕಾವೋರ್‌
2008ರ ಮಾ.27
ದಕ್ಷಿಣ ಇಟಲಿಯ ಟೆರೆಂಟೋ
30 ಸಾವಿರ ಟನ್‌
20-30 ಯುದ್ಧ ವಿಮಾನಗಳು
ಜೋಸೆಫ್ ಗರಿಬಾಲ್ಡಿ
1985ರ ಸೆ.30
ದಕ್ಷಿಣ ಇಟಲಿಯ ಟೆರೆಂಟೋ
10,100 ಟನ್‌
18 ಯುದ್ಧ ವಿಮಾನಗಳು
ರಷ್ಯಾ: ಅಡ್ಮಿರಲ್‌ ಕುಜ್ನೆಟೊವ್‌
58,600 ಟನ್‌
40 ಯುದ್ಧ ವಿಮಾನಗಳು
(ಸದ್ಯ ಸೇವೆಯಲ್ಲಿಲ್ಲ, ದುರಸ್ತಿಯಾಗುತ್ತಿದೆ)

ಭಾರತ
ಐಎನ್‌ಎಸ್‌ ವಿಕ್ರಾಂತ್‌
2022ರ ಆ.15
40,000 ಟನ್‌
40 ಯುದ್ಧವಿಮಾನಗಳ ವರೆಗೆ
ಐಎನ್‌ಎಸ್‌ ವಿಕ್ರಮಾದಿತ್ಯ
2013ರ ನ.16
ಕಾರವಾರ, ಕರ್ನಾಟಕ
45,400 ಟನ್‌
40 ಯುದ್ಧ
ವಿಮಾನಗಳ ವರೆಗೆ

ಉಪಯೋಗ ಏನು?
ಯುದ್ಧದ ಸಂದರ್ಭದಲ್ಲಿ ಈ ನೌಕೆಯನ್ನು ಶತ್ರು ರಾಷ್ಟ್ರದ ಹೆಬ್ಟಾಗಿಲಿಗೇ ತೆಗೆದುಕೊಂಡು ಹೋಗಿ, ಅಲ್ಲಿಂದ ಯುದ್ಧವಿಮಾನಗಳ ಮೂಲಕ ದಾಳಿ ನಡೆಸಲು ಬಳಸಲಾಗುತ್ತದೆ. ಈ ಮಾದರಿಯ ನೌಕೆಗಳು ಇಲ್ಲದಿದ್ದರೆ ಕೇಂದ್ರಭಾಗ­ದಿಂದಲೇ ಯುದ್ಧ­ವಿಮಾನಗಳು ಶಸ್ತ್ರಾಸ್ತಗಳನ್ನು ಹೊತ್ತು ಸಾಗಬೇಕಾಗುತ್ತದೆ. ಇದರಿಂದ ಇಂಧನ, ಸಮಯ, ಶ್ರಮ ವ್ಯಯ ಆಗುತ್ತದೆ. ನೌಕೆಯಾದರೆ ನಮ್ಮ ದೇಶದ ಸರಹದ್ದುಗಳಲ್ಲಿ ನಿಲ್ಲಿಸಿ, ಅಲ್ಲಿಂದ ವಿಮಾ­ನಗಳ ಕಾರ್ಯಾಚರಣೆ ಮಾಡಬಹುದಾಗಿದೆ. ಇದರ ಜತೆಗೆ ಸುಮಾರು ನೂರು ಕಿ.ಮೀ.ಗೂ ಅಧಿಕ ದೂರದಲ್ಲಿನ ಚಲನವಲನಗಳ ಮೇಲೆ ಇದರ ಮೂಲಕ ನಿಗಾ ಇಡಬಹುದು.

ಅರ್ಧ ಲಕ್ಷ ಜನರ ಶ್ರಮದ ಫ‌ಲ
“ಐಎನ್‌ಎಸ್‌ ವಿಕ್ರಾಂತ್‌ ನಿರ್ಮಾಣಕ್ಕಾಗಿ ಸಣ್ಣ ಮತ್ತು ಅತೀ ಸಣ್ಣ ಕಂಪೆನಿಗಳು ಸೇರಿದಂತೆ 550 ಕಂಪೆನಿಗಳಿಂದ ಹೆಚ್ಚು-ಕಡಿಮೆ ಅರ್ಧಲಕ್ಷ ಜನ ಇದಕ್ಕಾಗಿ ಶ್ರಮಿಸಿದ್ದಾರೆ! ಯೋಜನೆ ಮೂಲಕ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದೆ. ಉಕ್ಕಿನ ವಿಷಯದಲ್ಲಿ ಸ್ವಾವಲಂಬಿಯಾಗುವಲ್ಲಿ ಅನುವು ಮಾಡಿಕೊಟ್ಟಿದೆ. ಯೋಜನೆಗೆ ರಷ್ಯಾದಿಂದ ಸ್ಟೀಲ್‌ ಪೂರೈಕೆ ಆಗಬೇಕಿತ್ತು. ಆದರೆ, ಇದು ಸಕಾಲದಲ್ಲಿ ಲಭ್ಯವಾಗಲಿಲ್ಲ. ಆಗ ದೇಶದ ವಿವಿಧ ಭಾಗಗಳಿಂದ ಅದಿರು ಪೂರೈಸಲಾಯಿತು. ಇದನ್ನು ಸ್ಟೀಲ್‌ ಅಥಾರಿಟಿ ಆಫ್ ಇಂಡಿಯಾ ಲಿ., ಡಿಆರ್‌ಡಿಎಲ್‌ ಹಾಗೂ ಭಾರತೀಯ ನೌಕಾಪಡೆಯ ಸಹಯೋಗದಲ್ಲಿ ಪೂರೈಸಲಾ­ಯಿತು ಎಂದು ಸಿಎಸ್‌ಎಲ್‌ ಅಧಿಕಾರಿಗಳು ತಿಳಿಸಿದರು. 2007ರಲ್ಲಿ ಯೋಜನೆ ಪರಿಕಲ್ಪನೆ ಮೂಡಿತು. 2009ರ ಫೆಬ್ರವರಿಯಲ್ಲಿ ನೌಕೆಯ ಕೀಲ್‌ ಹಾಕಲಾಯಿತು. 2013ರ ಆಗಸ್ಟ್‌ನಲ್ಲಿ ನೌಕೆಗೆ ಚಾಲನೆ ನೀಡುವ ಮೂಲಕ ನಿರ್ಮಾಣದ ಮೊದಲ ಹಂತದ ಕಾರ್ಯ ಯಶಸ್ವಿಯಾಯಿತು. ಆಗಸ್ಟ್‌ 21ರಿಂದ ಈವರೆಗೆ ಬಹುಹಂತದ ಸಮುದ್ರ ಪ್ರಯೋಗಗಳನ್ನು ಇದು ಯಶಸ್ವಿಯಾಗಿ ಪೂರೈಸಿದೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next