ಪಣಜಿ: ಗೋವಾದಲ್ಲಿ ಕಳೆದ ಹಲವು ದಿನಗಳಿಂದ ಮಾಯವಾಗಿದ್ದ ಮಳೆರಾಯ ಇದೀಗ ಅಲ್ಲಲ್ಲಿ ತನ್ನ ಹಾಜರಾತಿ ನೀಡಲು ಆರಂಭಿಸಿದ್ದಾನೆ.
ಗೋವಾ ರಾಜ್ಯ ಹವಾಮಾನ ಇಲಾಖೆಯು ಗೋವಾ ಮತ್ತು ಪಕ್ಕದ ಕೊಂಕಣದಲ್ಲಿ ಮುಂದಿನ ಕೆಲವು ದಿನಗಳವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಸಕ್ರಿಯ ಮಳೆಯ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಅಂದಾಜಿಸಿದೆ.
ಇಷ್ಟೇ ಅಲ್ಲದೆಯೇ ಗೋವಾ ರಾಜ್ಯದಲ್ಲಿ ಸೆಪ್ಟೆಂಬರ್ 16 ಮತ್ತು 17 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಗೋವಾದಲ್ಲಿ, ಗಣೇಶ ಚತುರ್ಥಿಯ ಸಿದ್ಧತೆಗಳು ವೇಗ ಪಡೆದಿವೆ ಮತ್ತು ಜನರು ಬಣ್ಣಬಣ್ಣದ ಸರಕುಗಳ ಜೊತೆಗೆ ವಿವಿಧ ವಸ್ತುಗಳ ಖರೀದಿಗೆ ಮಾರುಕಟ್ಟೆಗಳಿಗೆ ಬರಲಾರಂಭಿಸಿದ್ದಾರೆ. ಗೋವಾ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಗೋವಾದಲ್ಲಿ ಗಣೇಶ ಚತುರ್ಥಿಗಾಗಿ ಫಲಾವಳಿ ಮಾರುಕಟ್ಟೆ ಆರಂಭವಾಗಿದ್ದು, ತೆಂಗಿನಕಾಯಿ, ಬಾಳೆಹಣ್ಣು, ಪಪ್ಪಾಯಿ, ಸೇಬು, ವೀಳ್ಯದೆಲೆ ಮತ್ತಿತರ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಜನ ಕಿಕ್ಕಿರಿದು ತುಂಬಿರುವುದು ಕಂಡು ಬರುತ್ತಿದೆ. ಆದರೆ ಹಬ್ಬ ಹರಿದಿನಗಳಲ್ಲಿ ಈ ಮಳೆಯಿಂದಾಗಿ ಹಬ್ಬದ ಖರೀದಿಗೆ ಜನತೆಗೆ ತೊಂದರೆಯುಂಟಾಗುವ ಲಕ್ಷಣಗಳು ಕಂಡುಬರುತ್ತಿದೆ.