Advertisement

ಸ್ವಾತಂತ್ರ್ಯ ಹೋರಾಟದ ವೇಳೆ ಬೇರ್ಪಟ್ಟ ದಂಪತಿ 72ವರ್ಷಗಳ ನಂತರ ಭೇಟಿ!

10:27 AM Dec 29, 2018 | Team Udayavani |

ಕಣ್ಣೂರು: 1946ರಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗವಹಿಸಿದ್ದ ಇಕೆ ನಾರಾಯಣನ್ ಜೈಲುಶಿಕ್ಷೆ ಅನುಭವಿಸಿ ಹೊರ ಬಂದು ಇಂದಿಗೆ ಬರೋಬ್ಬರಿ 72 ವರ್ಷಗಳೇ ಕಳೆದಿದೆ.. ಅಂದು ನವವಿವಾಹಿತರಾಗಿ ಬೇರ್ಪಟ್ಟಿದ್ದ ನಾರಾಯಣನ್ ಅವರು ಈಗ ಮೊದಲ ಪತ್ನಿಯನ್ನು ಮತ್ತೆ ಭೇಟಿಯಾದ ಪುನರ್ ಮಿಲನದ ಕಥೆ ಇದು…ಸಿನಿಮಾ ಕಥೆಯಂತೆ ಸಾಗುವ ಈ ವರದಿ ರೋಚಕವಾಗಿದೆ.

Advertisement

ಸರಿಸುಮಾರು 72 ವರ್ಷಗಳ ನಂತರ 93ವರ್ಷದ ನಾರಾಯಣನ್, 89 ವರ್ಷದ ಶಾರದಾ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡಾಗ ಇಬ್ಬರಲ್ಲೂ ಮಾತುಗಳೇ ಇಲ್ಲವಾಗಿತ್ತು.ಇಬ್ಬರ ಕಣ್ಣಾಲಿಗಳಿಂದ ಕಣ್ಣೀರು ಸುರಿಯುತ್ತಿತ್ತು.. ನಂತರ ಮಾತನಾಡತೊಡಗಿದ ಆಕೆ ನನಗೆ ಯಾರ ಮೇಲೂ ಕೋಪವಿಲ್ಲ ಎಂದು ನಾರಾಯಣನ್ ಬಳಿ ಹೇಳಿದಾಗ..ಹಾಗಿದ್ದ ಮೇಲೆ ನಿನ್ಯಾಕೆ ಮೌನವಾಗಿದ್ದೆ? ಯಾಕೆ ಏನನ್ನೂ ಮಾತನಾಡುತ್ತಿಲ್ಲ ಎಂದು ತಲೆತಗ್ಗಿಸಿ ನಿಂತಿದ್ದ ಮೊದಲ ಪತ್ನಿಗೆ ನಾರಾಯಣನ್ ಪ್ರಶ್ನಿಸಿದ್ದರು!

ಸ್ವಾತಂತ್ರ್ಯ ಹೋರಾಟ ನವ ವಧು,ವರರನ್ನು ಬೇರೆ ಮಾಡಿತ್ತು!

17ವರ್ಷದ ನಾರಾಯಣನ್ ನಂಬಿಯಾರ್ ಹಾಗೂ 13 ವರ್ಷದ ಶಾರದಾ ಸತಿಪತಿಗಳಾಗಿ ಕೇವಲ ಹತ್ತು ತಿಂಗಳಷ್ಟೇ ಕಳೆದಿತ್ತು. ಈ ಹೊತ್ತಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿ ಉರಿಯುತ್ತಿತ್ತು. ನಾರಾಯಣನ್ ಹಾಗೂ ತಂದೆ ತಾಲಿಯಾನ್ ರಾಮನ್ ನಂಬಿಯಾರ್ ಕಾವೂಂಬಾಯಿ ಹೋರಾಟದ ಮುಂದಾಳತ್ವ ವಹಿಸಿಕೊಂಡಿದ್ದರು. ಪೊಲೀಸರ ಕೈಗೆ ಸಿಗಬಾರದು ಎಂದು ಇಬ್ಬರು ಭೂಗತರಾಗಿದ್ದರು. ಈ ಸಂದರ್ಭದಲ್ಲಿ ನವ ವಧುವನ್ನು ನಾರಾಯಣನ್ ಮನೆಯವರು ತವರು ಮನೆಗೆ ಕಳುಹಿಸಿಕೊಟ್ಟಿದ್ದರು.

Advertisement

ಸುಮಾರು 2 ತಿಂಗಳ ಬಳಿಕ ಪೊಲೀಸರು ರಾಮನ್ ಮತ್ತು ನಾರಾಯಣನ್ ಅವರನ್ನು ಹುಡುಕಿಕೊಂಡು ಮನೆಗೆ ಬಂದು ಬಿಟ್ಟಿದ್ದರು. ಮನೆಯನ್ನೆಲ್ಲಾ ಜಾಲಾಡಿ ಕೊನೆಗೆ ಮನೆಗೆ ಬೆಂಕಿ ಹಚ್ಚಿ ಬಿಟ್ಟಿದ್ದರು ಎಂದು ನಾರಾಯಣನ್ ಸಂಬಂಧಿ ಮಧು ಕುಮಾರ್ ಅಂದಿನ ಘಟನೆಯನ್ನು ನೆನಪಿಸಿಕೊಂಡರು. ಕೊನೆಗೆ ನಾರಾಯಣನ್ ಕಣ್ಣೂರ್, ವಿಯ್ಯೂರ್ ಹಾಗೂ ಸೇಲಂನಲ್ಲಿ 8 ವರ್ಷ ಜೈಲುಶಿಕ್ಷೆ ಅನುಭವಿಸಿದ್ದರು.

1950ರ ಫೆಬ್ರುವರಿ 11ರಂದು ಸೇಲಂ ಜೈಲಿನಲ್ಲಿ ನಾರಾಯಣನ್ ತಂದೆಯನ್ನು ಗುಂಡಿಟ್ಟು ಕೊಂದಿದ್ದರು. ಹೀಗೆ ಕೆಲವು ವರ್ಷಗಳ ಬಳಿಕ ನಾರಾಯಣನ್ ಎಲ್ಲಿದ್ದಾರೆ ಎಂಬ ಮಾಹಿತಿ ಸಿಗದೆ ಇದ್ದಾಗ ಶಾರದಾ ಮನೆಯವರು ಮಗಳನ್ನು ಮತ್ತೊಬ್ಬ ವರನಿಗೆ ಕೊಟ್ಟು ವಿವಾಹ ಮಾಡಿಬಿಟ್ಟಿದ್ದರು. 1957ರಲ್ಲಿ ನಾರಾಯಣನ್ ಜೈಲಿನಿಂದ ಬಿಡುಗಡೆಯಾದ ಮೇಲೆ ಅವರೂ ಕೂಡಾ ಬೇರೊಂದು ವಿವಾಹವಾಗಿದ್ದರು.

ವರ್ಷದ ಹಿಂದೆ ಶಾರದಾ ಅವರ ಪುತ್ರ ಭಾರ್ಗವನ್ ಅವರಿಗೆ ತಾವು ನಾರಾಯಣನ್ ಅವರ ಸಂಬಂಧಿ ಎಂಬ ವಿಷಯ ತಿಳಿಯುತ್ತದೆ. ಹೀಗೆ ತಮ್ಮ ಕುಟುಂಬದ ಇತಿಹಾಸ ಶೋಧಿಸಿದಾಗ ತಮ್ಮ ಕುಟುಂಬಕ್ಕೂ, ನಾರಾಯಣನ್ ಅವರಿಗೂ ಸಂಬಂಧ ಇದೆ ಎಂಬುದು ತಿಳಿದ ಮೇಲೆ..ಇಬ್ಬರನ್ನೂ ಭೇಟಿ ಮಾಡಿಸುವ ಬಗ್ಗೆ ನಿರ್ಧರಿಸಿದ್ದರಂತೆ. ಬಳಿಕ ಭಾರ್ಗವನ್ ಅವರ ಮನೆಯಲ್ಲಿ ನಾರಾಯಣನ್ ಹಾಗೂ ಅವರ ಮೊದಲ ಪತ್ನಿ ಶಾರದಾ ಅವರ ಭೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next