ಬೆಂಗಳೂರು: ನಗರದಲ್ಲಿ ನಡೆದ ನಾಲ್ಕು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸದಾಶಿವನಗರದಲ್ಲಿ ನಡೆದಿದೆ. ಕೆಂಪಾಪುರ ಅಗ್ರಹಾರದ ಶೇಖ್ (59)ಮೃತರು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶೇಖ್ ಸೋಮವಾರ ತಡರಾತ್ರಿ 1 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಕಾರು ಇವರ ಸೈಕಲ್‌ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಶೇಖ್ ಕಾಲು ಮತ್ತು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸದಾಶಿವನಗರ ಸಂಚಾರ ಠಾಣೆಯಲ್ಲಿ ದಾಖಲಾಗಿದೆ. ಮತ್ತೂಂದು ಪ್ರಕರಣದಲ್ಲಿ ಲಾರಿ ಮತ್ತು ಬೈಕ್ ಮುಖಾಮುಖೀ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಯಲಹಂಕದಲ್ಲಿ ನಡೆದಿದೆ.
ಯಲಹಂಕ ನ್ಯೂಟೌನ್ ನಿವಾಸಿ ಮುನಿರಾಜು (40) ಮೃತರು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಮುನಿರಾಜು ಸ್ನೇಹಿತರನ್ನು ನೋಡಲು ಯಲಹಂಕಕ್ಕೆ ಹೋಗುತ್ತಿದ್ದರು. ಇಲ್ಲಿನ ಅಲ್ಲಾಳಸಂದ್ರದ ತಿರುಮಲ ಡಾಬ ಬಳಿ ಲಾರಿಯೊಂದು ಮುನಿರಾಜು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ಆರ್‌ಟಿ ನಗರದಲ್ಲಿ ಕಾರು ಹರಿದು ಪಾದಚಾರಿ ಮೃತಪಟ್ಟಿದ್ದು, ಗುರುತು ಪತ್ತೆಯಾಗಲಿಲ್ಲ. ಘಟನೆ ಸಂಬಂಧ ಕಾರು ಚಾಲಕ ಸಂದೇಶ್ (42)ನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಆರ್‌ಟಿ ನಗರದ ಬಿ.ಬಿ.ರಸ್ತೆಯ ಸಿಬಿಐ ಬಸ್ ನಿಲ್ದಾಣದ ಬಳಿ ಪಾದಚಾರಿ ರಸ್ತೆ ದಾಟುತ್ತಿದ್ದರು. ಆ ವೇಳೆ ವೇಗವಾಗಿ ಬಂದ ಕಾರು ಪಾದಚಾರಿಗೆ ಡಿಕ್ಕಿ ಹೊಡೆದಿದೆ.
ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರ್‌ಟಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಾಜಿನಗರದಲ್ಲಿ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜಾಜಿನಗರದ ಪವನ್ ಕುಮಾರ್(19) ಮೃತಯುವಕ. ಆರ್‌ಎಂಸಿ ಯಾರ್ಡ್‌ನ ಎಪಿಎಂಸಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಮಂಗಳವಾರ ಬೆಳಗ್ಗೆ 7ರಲ್ಲಿ ಕೆಲಸ ಮುಗಿಸಿಕೊಂಡು ರಾಜಾಜಿನಗರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ.
ಈ ವೇಳೆ ಸ್ಟುಡಿಯೋ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಬಂದಿದ್ದ ಲಾರಿ ಈತನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪವನ್ ಕುಮಾರ್ ರಸ್ತೆ ಮೇಲೆ ಬಿದ್ದಿದ್ದು, ಈತನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.