Advertisement

ಮನೆಯಲ್ಲೇ ಹಸಿ, ಒಣ ಕಸ ಬೇರ್ಪಡಿಸಿ

09:14 PM Aug 02, 2019 | Team Udayavani |

ಮೈಸೂರು: ಮಹಿಳೆಯರು ಸ್ವಾವಲಂಬಿಗಳಾಗುವುದರ ಜೊತೆಗೆ ಸ್ವಚ್ಛತೆಯ ಬಗ್ಗೆ ಅರಿವನ್ನು ಪಡೆದು ನಾವುಗಳು ವಾಸಿಸುವ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಟಿ.ಸಿ. ಪೂರ್ಣಿಮಾ ಹೇಳಿದರು.

Advertisement

ಜೆಎಸ್‌ಎಸ್‌ ಜನ ಶಿಕ್ಷಣ ಸಂಸ್ಥೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ಕೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದಲ್ಲಿ ನಗರದ ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಪಾಕ್ಷಿಕ ಸಮಾರೋಪದಲ್ಲಿ ಮಾತನಾಡಿದರು.

ಸ್ವಚ್ಛತೆ ಅರಿವು: 12ನೇ ಶತಮಾನದಲ್ಲಿ ಶಿವಶರಣರು ಸ್ವಚ್ಛತೆಯ ಬಗ್ಗೆ ತಿಳಿಸಿದ್ದಾರೆ. ಅಂತರಂಗ ಮತ್ತು ಬಹಿರಂಗ ಶುದ್ಧಿಯ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಮೂಲಕ ನಮ್ಮ ಮನಸ್ಸಿನ ಶುದ್ಧಿಯೊಂದಿಗೆ ನಾವು ವಾಸಿಸುವ ಸ್ಥಳ, ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ನಮ್ಮ ಅಕ್ಕಪಕ್ಕದವರಿಗೂ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ನಮ್ಮ ಮನೆಯಿಂದ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಕೊಡಬೇಕು. ಅದು ಮಾಫಿಯಾ ಜಾಲಕ್ಕೆ ಹೋಗದಂತೆ ಗಮನವಹಿಸಿ, ತ್ಯಾಜ್ಯ ನಿರ್ವಹಣ ಘಟಕಕ್ಕೆ ಹೋಗುವಂತೆ ನಿಗಾವಹಿಸಬೇಕು ಎಂದು ಮನವಿ ಮಾಡಿದರು.

ತರಬೇತಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಎರಡು ಮುಖ್ಯ ಕನಸುಗಳಾದ ಸ್ವಚ್ಛ ಭಾರತ ಮತ್ತು ಗುಡಿ ಕೈಗಾರಿಕೆ ಸಬಲೀಕರಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಅವುಗಳಲ್ಲಿ ಉದ್ಯಮ ಶಿಲತೆ ಮತ್ತು ಕೌಶಲಾಭಿವೃದ್ಧಿ ಮೂಲಕ ಯುವಜನರು ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಜೊತೆ ಜೊತೆಗೆ ಸ್ವಚ್ಛತೆಯ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಳೆದ 15 ದಿನಗಳಲ್ಲಿ ಗ್ರಾಮೀಣ ಮಹಿಳೆಯರನ್ನು ಸಂಘಟಿಸಿ, ಸ್ವಯಂ ಉದ್ಯೋಗ ಕೈಗೊಳ್ಳಲು ಉದ್ಯಮ ಶೀಲತೆ ಹಾಗೂ ಕೌಶಲಾಭಿದ್ಧಿ ತರಬೇತಿ ನೀಡಲಾಗಿದೆ. ಇದರ ಜೊತೆಗೆ ನಮ್ಮ ಸುತ್ತಲಿನ ಪರಿಸರವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುವುದು, ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜೊತೆಗೆ ಸ್ವಚ್ಛತೆಯ ಬಗ್ಗೆ ಜಾಥಾ ನಡೆಸಲಾಗಿದೆ ಎಂದು ತಿಳಿಸಿದರು.

Advertisement

ಭಾರತವನ್ನು ಸಂಪೂರ್ಣ ಸ್ವಚ್ಛ ದೇಶವಾಗಿಸುವ ಮೂಲಕ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಆಚರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕೋರಿದರು. ಜಿಪಂ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ಸುಶೀಲಾ ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗ ಮಾಡಿದರೆ, ಅವರು ಇತತರರಿಗೂ ಉದ್ಯೋಗ ನೀಡುವ ಮೂಲಕ ಉದ್ಯೋಗ ದಾತರಾಗಬಹುದು.

ಕೌಟುಂಬಿಕ ಸಮಸ್ಯೆ, ಕಷ್ಟ-ನಷ್ಟಗಳು ಮತ್ತಿತರ ಸಮಸ್ಯೆಗಳಿಗೆ ಎದೆಗುಂದದೆ ನಮ್ಮ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮುಂದುವರಿಸಬೇಕು. ಜೊತೆಗೆ ಯಶಸ್ವಿ ಉದ್ಯಮಿಗಳನ್ನು ಆದರ್ಶವಾಗಿಸಿಕೊಂಡು ಸ್ವಯಂ ಉದ್ಯಮ ಮತ್ತು ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಇಲಾಖೆಯೂ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ಮಾಜಿ ಸಂಸದ ಎ. ಸಿದ್ದರಾಜು, ಸಮಾಜ ಸೇವಕಿ ಅರ್ಪಿತಾ ಸಿಂಹ, ಜೆಎಸ್‌ಎಸ್‌ ಜನ ಶಿಕ್ಷಣ ಸಂಸ್ಥೆಯ ಶೇಷಗಿರಿ ರಾವ್‌, ಎಸ್‌ಬಿಐ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ವೆಂಕಟಚಲಪತಿ, ಜೆಎಸ್‌ಎಸ್‌ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎ.ಪಿ. ರಮೇಶ್‌ ಇತರರಿದ್ದರು.

ಉದ್ಯಮ ಶೀಲತೆ, ಕೌಶಲ್ಯ ತರಬೇತಿ: ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿನ ಕುಟುಂಬಗಳು ಆರ್ಥಿಕವಾಗಿ ಪ್ರಗತಿಯಾಗಬೇಕು. ಇದಕ್ಕೆ ಮಹಿಳಾ ಸಬಲೀಕರಣ ಅಗತ್ಯ. ಇದನ್ನು ಮನಗಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿದೆ.

ಯುವ ಜನತೆ ಹಾಗೂ ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗುವಂತೆ ಉದ್ಯಮ ಶೀಲತೆ ಹಾಗೂ ಕೌಶಲ್ಯ ತರಬೇತಿಯನ್ನು ಜಿಲ್ಲೆ ಮತ್ತು ತಾಲೂಕುಗಳಲ್ಲಿ ನೀಡಲಾಗುತ್ತಿದೆ. ಮಹಿಳೆಯರು ಮತ್ತು ಯುವ ಜನತೆ ಸಮರ್ಪಕವಾಗಿ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ಸುಶೀಲಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next