Advertisement

ಶಾಲೆ ಬಿಟ್ಟ ಮಕ್ಕಳಿಗೆ ಸರ್ಕಾರದಿಂದ ಪ್ರತ್ಯೇಕ ನೀತಿ

10:47 PM Dec 18, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ, ಗೈರು ಹಾಜರಾದ ಮತ್ತು ವಲಸೆ ಮಕ್ಕಳನ್ನು ಗುರುತಿಸಿ ಅವರನ್ನು ಶಾಲಾ ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಪ್ರತ್ಯೇಕ ನೀತಿ ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದೆ.

Advertisement

ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ 2013ರಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ.ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಬುಧವಾರ ಸರ್ಕಾರ ಈ ಮಾಹಿತಿ ನೀಡಿದೆ.

ಈ ವೇಳೆ ಸರ್ಕಾರದ ಪರ ವಕೀಲರಾದ ಪಿ.ಬಿ.ಅಚ್ಚಪ್ಪ ವಾದ ಮಂಡಿಸಿ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಹಾಗೂ “ಕರ್ನಾಟಕ ಮಕ್ಕಳ ಕಡ್ಡಾಯ ಹಾಗೂ ಉಚಿತ ಶಿಕ್ಷಣ ಹಕ್ಕು ನಿಯಮಗಳು-2012’ರ ಪ್ರಕಾರ ಶಾಲೆಯಿಂದ ಹೊರಗುಳಿದ ಹಾಗೂ ಗೈರು ಹಾಜರಾದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣದ ಮುಖ್ಯ ವಾಹಿನಿಗೆ ತರಲು ರಾಜ್ಯದಲ್ಲಿ ವಲಸೆ ಮಕ್ಕಳ ಶಿಕ್ಷಣ ಹಕ್ಕಿಗೆ ಸಂಬಂಧಿಸಿದಂತೆ ನೀತಿ ರೂಪಿಸ ಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಈ ನೀತಿ ಅನು ಷ್ಠಾನ ಗೊಳಿಸಲು ಸರ್ಕಾರ ಹಾಕಿಕೊಂ ಡಿರುವ “ನೀಲನಕ್ಷೆ’ ಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಜ.24ಕ್ಕೆ ಮುಂದೂಡಿತು. ಸತತ 7 ದಿನ ಗೈರು ಹಾಜರಾದ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳೆಂದು ವ್ಯಾಖ್ಯಾನಿಸಿ ಅಂತಹ ಮಕ್ಕಳ ಪೋಷಕರಿಗೆ ನೋಟಿಸ್‌ ನೀಡಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಲಾಗುತ್ತಿದೆ.

ಈ ಕೆಲಸದಲ್ಲಿ ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಗಳ ನೆರವು ಪಡೆದುಕೊಳ್ಳಲಾಗುತ್ತಿದೆ. ಪೋಷಕರಿಗೆ ನೋಟಿಸ್‌ ನೀಡುವುದು ಮಕ್ಕಳ ಮಾನಸಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ ಅತ್ಯಂತ ನಾಜೂಕಿನ ಕೆಲಸ ಆಗಿದ್ದು, ಸೂಕ್ಷ್ಮ ರೀತಿಯಲ್ಲಿ ಅದನ್ನು ನಿಭಾಯಿಸಬೇಕಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲು ಮನೆ-ಮನೆ ಸಮೀಕ್ಷೆ ನಡೆಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

Advertisement

ಚಿಕಿತ್ಸೆಗೆ ನೆರವು ಮುಂದುವರಿಸಲು ಸರ್ಕಾರಕ್ಕೆ ಆದೇಶ
ಬೆಂಗಳೂರು: ಮೆದುಳಿನ ಬೆಳವಣಿಗೆ ಕುಂಠಿತಗೊಳಿಸುವ ಜೊತೆಗೆ ಅಂಗಾಂಗ ವೈಫಲ್ಯಕ್ಕೆ ದಾರಿ ಮಾಡಿಕೊಡುವ ಅಪರೂಪದ “ಲೈಸೋಸ್‌ಮಾಲ್‌ ಸ್ಟೋರೇಜ್‌ ಡಿಸೀಸ್‌’ (ಎಲ್‌ಎಸ್‌ಡಿ)ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ನೀಡಲಾಗುತ್ತಿರುವ ಆರ್ಥಿಕ ನೆರವು ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಕುರಿತಂತೆ “ಲೈಸೋಸ್‌ಮಾಲ್‌ ಸ್ಟೋರೇಜ್‌ ಡಿಸಾರ್ಡರ್ ಸೊಸೈಟಿ ಆಫ್‌ ಇಂಡಿಯಾ’ ಸಂಸ್ಥೆ 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ.ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕೇಂದ್ರ ಸರ್ಕಾರ ತನ್ನ ಪಾಲಿನ 60 ಕೋಟಿ ರೂ. ಹಣ ನೀಡಿರಲಿಲ್ಲ.

ಮುಖ್ಯಮಂತ್ರಿಗಳು 2 ಸಲ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ಒಂದು ಸಲ ಪತ್ರ ಬರೆದ ನಂತರ 30 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ, ರಾಷ್ಟ್ರೀಯ ನೀತಿಯಂತೆ ಕೇಂದ್ರ ಸರ್ಕಾರ ಚಿಕಿತ್ಸಾ ವೆಚ್ಚದ ಪಾಲನ್ನು ನೀಡದಿದ್ದರೆ ಆಗ ನ್ಯಾಯಾಲಯವೇ ಆದೇಶ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಇದೇ ವೇಳೆ ಹೇಳಿತು. ಆದರೆ, ರಾಜ್ಯ ಸರ್ಕಾರ ತಾನು ನೀಡುತ್ತಿರುವ ಆರ್ಥಿಕ ನೆರವು ಮುಂದುವರಿಸಲಿ ಎಂದು ಹೇಳಿ ವಿಚಾರಣೆಯನ್ನು ಜ.10ಕ್ಕೆ ಮುಂದೂಡಿತು.

6 ಬಗೆಯ ಅಂಗವೈಕಲ್ಯ ಹೊರತುಪಡಿಸಿ ಉಳಿದ ವೈಕಲ್ಯಗಳಿರುವ ಈ ಅಪರೂಪದ ಅನುವಂಶಿಕ ಕಾಯಿಲೆಯನ್ನು “ಎನ್‌ಜೈಮ್‌ ರಿಪ್ಲೇಸ್‌ಮೆಂಟ್‌ ಥೆರಪಿ’ಯಿಂದ ಗುಣಪಡಿಸಬಹುದಾಗಿದೆ. ಆದರೆ, ಅದಕ್ಕೆ ಹೆಚ್ಚಿನ ವೆಚ್ಚ ತಗುಲಲಿದೆ. ಆ ಕಾಯಿಲೆಯಿಂದ ನೂರಾರು ಮಕ್ಕಳು ನರಳುತ್ತಿರುವುದರಿಂದ ಅವುಗಳಿಗೆ ಸರ್ಕಾರವೇ ತನ್ನ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ನ್ಯಾಯಪೀಠ ಹಿಂದೆಯೇ ನಿರ್ದೇಶನ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next