Advertisement

ತುಳು ಕೂಟಕ್ಕೆ ಪ್ರತ್ಯೇಕ ಜಮೀನು

12:27 AM Oct 21, 2019 | Lakshmi GovindaRaju |

ಬೆಂಗಳೂರು: ತುಳು ಕೂಟಕ್ಕೆ ರಾಜಧಾನಿಯಲ್ಲಿ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜತೆ ಮಾತುಕತೆ ನಡೆಸುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು.

Advertisement

ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ತುಳುಕೂಟ ಬೆಂಗಳೂರು ಆಯೋಜಿಸಿದ್ದ ಹೊಸ ಅಕ್ಕಿ (ಪುದ್ದಾರ್‌) ಊಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಧಾನಿಯಲ್ಲಿ ಪ್ರತ್ಯೇಕ ಜಾಗಕ್ಕಾಗಿ ತುಳುಕೂಟ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದೆ. ಈ ಪ್ರಸ್ತಾವನೆಯ ಈಡೇರಿಸುವ ಸಂಬಂಧ ಬಿಡಿಎ ಅಧಿಕಾರಿಗಳ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಪ್ರತಿವರ್ಷ ಹೊಸ ಬೆಳೆಯ ಅಕ್ಕಿಯನ್ನು ಸಂಭ್ರಮದಿಂದ ಊಟ ಮಾಡುವ ಸಂಪ್ರದಾಯ ತುಳುನಾಡಿನಲ್ಲಿದೆ. ಸಾಮರಸ್ಯದ ಕೊರತೆಯಿರುವ ಈ ಕಾಲದಲ್ಲಿ, ಸಾಮರಸ್ಯವನ್ನು ಹೆಚ್ಚಿಸುವಂತ ಆಚರಣೆ ಪುದ್ದಾರ್‌ ವಣಸ್‌ ಎಂದು ಬಣ್ಣಿಸಿದರು.

ಚಿಕ್ಕವರಿದ್ದಾಗ ನಮ್ಮೂರಿನಲ್ಲಿ ದಿನಕ್ಕೊಂದು ಮನಗೆ ತೆರಳಿ ಪುದ್ದಾರ್‌ ವಣಸ್‌ ಸಂಭ್ರಮಿಸುತ್ತಿದ್ದೇವು. ಕಾಲ ಕಳೆದಂತೆಲ್ಲ ಈ ಸಂಪ್ರದಾಯ ಮರೆಯಾಗುತ್ತಿದೆ. ಊರಿನಲ್ಲಿ ಬೇರೆ ಬೇರೆ ಜಾತಿಯವರಾಗಿದ್ದರೂ ಬೆಂಗಳೂರಿನಲ್ಲಿ ತುಳುವರು, ಕರಾವಳಿಯವರು ಎಂದು ಒಂದೇ ಭಾವನೆಯಿಂದ ನಮ್ಮ ಸಂಸ್ಕೃತಿಯನ್ನು ಯುವಜನತೆ ಜತೆಗೆ ಬೆಂಗಳೂರಿಗರಿಗೂ ಪರಿಚಯಿಸುತ್ತಿರುವುದು ಸಂತಸ ಎಂದು ಹೇಳಿದರು.

ಭಾರತದ ಮೇಲೆ ವಿದೇಶಿಗರ ದಾಳಿ ಅನೇಕ ಬಾರಿ ನಡೆದಿದ್ದರೂ ಭಾರತ ಇಂದಿಗೂ ವಿಶ್ವದಲ್ಲಿ ತನ್ನ ತನವನ್ನು ಉಳಿಸಿಕೊಂಡಿದೆ. ಇದಕ್ಕೆ ನಮ್ಮಲ್ಲಿರುವ ನೂರಾರು ವಿಭಿನ್ನ ಸಾಂಸ್ಕೃತಿಕ ಆಚರಣೆಗಳು ಕಾರಣ, ಇದುವೇ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಎಂದರು.

Advertisement

ತುಳು ಧಾರ್ಮಿಕ ಚಿಂತಕ ಪಿ.ಕೆ.ಸದಾನಂದ ಮಾತನಾಡಿ, ತುಳುನಾಡ ಸಂಪ್ರದಾಯ, ಆಚರಣೆಗಳನ್ನು ಇಂತಹ ಕಾರ್ಯಕ್ರಮದ ಮೂಲಕ ಯುವ ಜನತೆಗೆ ಪರಿಚಯಿಸಿದಾಗ ಮಾತ್ರ ಪೂರ್ವಿಕರ ಕಷ್ಟಗಳು ಅವರಿಗೆ ಅರಿವಾಗುತ್ತದೆ. ತುಳು ಕೂಟ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದು ಹೇಳಿದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮರಾಜ ಅಜಿಲ ಮಾತನಾಡಿ, ಇದೊಂದು ಭೋಜನದ ಸಮಾರಂಭ ಮಾತ್ರವಲ್ಲ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯಾಗಿದೆ. ಪರ ಊರಿಗೆ ತುಳುನಾಡಿ ಸಂಸ್ಕೃತಿ, ಸಂಪ್ರದಾಯ ಪರಿಚಯಿಸುವ ಕಾರ್ಯ ಕೂಡ ಹೌದು ಎಂದರು.

ಕ್ರೀಡೆಯಲ್ಲಿ ಸಾಧನೆಗೈದ ಮುಕ್ತ ಉದಯರಾಜ್‌ ಶೆಟ್ಟಿ, ಸುಕೇಶ ಅಮೀನ್‌ ಹಾಗೂ ಕವಿ ಶಾಂತರಾಮ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ತುಳುಕೂಟ ಅಧ್ಯಕ್ಷ ಬಿ.ದಿನೇಶ್‌ ಹೆಗ್ಡೆ, ಬಂಟರ ಸಂಘದ ಅಧ್ಯಕ್ಷ ಆರ್‌.ಉಪೇಂದ್ರ ಶೆಟ್ಟಿ, ಗೋಕುಲ್‌ದಾಸ್‌ ಎಕ್ಸ್‌ಪೋರ್ಟ್‌ನ ಮುಖ್ಯಸ್ಥ ಲಕ್ಷ್ಮಣ ಪೂಜಾರಿ, ಬೆಂಗಳೂರು ಹೊಟೇಲ್‌ ಮಾಲಿಕರ ಸಂಘದ ಜಂಟಿ ಕಾರ್ಯದರ್ಶಿ ಚಂದ್ರಹಾಸ್‌ ಎಸ್‌., ತುಳುಕೂಟದ ಗೌರವಾಧ್ಯಕ್ಷ ರಾಜೇಂದ್ರ ಕುಮಾರ್‌ ಮೊದಲಾದವರು ಇದ್ದರು.

ಹೊಸ ಅಕ್ಕಿ ಊಟ: ಈ ಸಾಲಿನ ಹೊಸ ಪೈರಿನಿಂದ ಅನ್ನ ತಯಾರಿಸಿ, ತುಳುನಾಡಿ ಬಗೆ ಬಗೆಯ ಹಸಿ ತರಕಾರಿಗಳನ್ನು ತಂದು ಹತ್ತಾರು ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ, ಕಾರ್ಯಕ್ರಮಕ್ಕೆ ಬಂದವರಿಗೆ ಉಣಬಡಿಸುವ ಸಂಪ್ರಾಯವೇ ಹೊಸ ಅಕ್ಕಿ ಊಟ. ಉಪ್ಪಿನಕಾಯಿ ಸಹಿತವಾಗಿ ನಾಲ್ಕೈದು ಬಗೆಯ ಪಲ್ಯ, ಮೂರ್‍ನಾಲ್ಕು ಬಗೆಯ ಸಾಂಬಾರು, ಸಿಹಿ ಪಾಯಸ, ಕಡಬು, ವಿವಿಧ ಬಗೆಯ ಚೆಟ್ನಿ ಹೊಸ ಅಕ್ಕಿ ಊಟದ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next