ಬೆಂಗಳೂರು: ಸಂವಿಧಾನದಲ್ಲಿ ರಾಜ್ಯವೊಂದು ಪ್ರತ್ಯೇಕ ಧ್ವಜ ಹೊಂದಬಾರದು ಎಂದು ಎಲ್ಲಿಯೂ ಹೇಳಿಲ್ಲ. ಹೀಗಾಗಿ, ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವುದು ತಪ್ಪಲ್ಲ. ಆದರೆ, ಅದು ರಾಷ್ಟ್ರಧ್ವಜಕ್ಕಿಂತ ಚಿಕ್ಕದಿರಬೇಕು ಎಂದು
ಸಂಸದ ಶಶಿತರೂರ್ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಮ್ಮೇಳನದಲ್ಲಿ ವಿಚಾರ ಮಂಡಿಸಿದ ನಂತರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ಬಾವುಟ ಪಡೆಯಬಹುದು.
ಇದರಿಂದಾಗಿ ರಾಷ್ಟ್ರಧ್ವಜಕ್ಕೆ ತೊಂದರೆಯೇನೂ ಆಗುವುದಿಲ್ಲ ಎಂದು ತಿಳಿಸಿದರು. ರಾಷ್ಟ್ರಕ್ಕೆ ಒಂದೇ ಧ್ವಜ. ಆದರೆ ರಾಜ್ಯಗಳು ಪ್ರತ್ಯೇಕ ಬಾವುಟ ಪಡೆದುಕೊಳ್ಳಬಹುದು. ಕಾಶ್ಮೀರ ಈಗಾಗಲೇ ಒಂದು ಧ್ವಜ ಹೊಂದಿದೆ. ಅಮೆರಿಕಾದಲ್ಲಿ 50 ಪ್ರತ್ಯೇಕ ಬಾವುಟಗಳಿವೆ. ಇದರಿಂದ ರಾಷ್ಟ್ರೀಯತೆಗೆ ಧಕ್ಕೆಯಾಗಿಲ್ಲ. ಅಮೆರಿಕಾವೂ ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮದು ಪ್ರಜಾಪ್ರಭುತ್ವ ದೇಶ ಎಂದರು.
ಪುಷ್ಕರ್ ಸಾವಿನ ತನಿಖೆಗೆ ಸಹಕಾರ: ಸುನಂದಾ ಪುಷ್ಕರ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆಗೆ ಸಂಪೂರ್ಣ ಸಹಕಾರ ಕೊಡುವುದು ತನ್ನ ಜವಾಬ್ದಾರಿ. ಇದರ ಕುರಿತಂತೆ ಹೆಚ್ಚಿಗೆ ಮಾತನಾಡುವುದಿಲ್ಲ. ಸತ್ಯ
ಏನು ಎಂಬುದನ್ನು ತಿಳಿದುಕೊಳ್ಳಲು ನಾನೂ ಬಯಸುತ್ತಿದ್ದೇನೆ ಎಂದು ಹೇಳಿದರು.
ಪ್ರಸಕ್ತ ಸಂದರ್ಭದಲ್ಲಿ ಭಾರತೀಯರೆಲ್ಲ ಒಂದಾಗಿರುವ ಅವಶ್ಯಕತೆ ಇದೆ. ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಶಾಂತಿ ನೆಲೆಸಲು ಉಭಯ ರಾಷ್ಟ್ರಗಳು ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.