ಹುಬ್ಬಳ್ಳಿ: ಧಾರವಾಡದಲ್ಲಿ ಗ್ರಾಮಾಂತರ ಸಾರಿಗೆಗಾಗಿ ಪ್ರತ್ಯೇಕ ಡಿಪೋ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ ಹೊಸ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ ಗ್ರಾಮಾಂತರ-3ನೇ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗ್ರಾಮಾಂತರ ಸಾರಿಗೆಗೆ ಅನುಕೂಲ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಗ್ರಾಮಾಂತರ ಭಾಗದಲ್ಲಿ ನೂತನ ಬಸ್ ನಿಲ್ದಾಣಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. 2017-18ನೇ ಸಾಲಿನಲ್ಲಿ 14 ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.
ಅಲ್ಲದೇ ಗೋಕಾಕ, ಶಿರಸಿ ಹಾಗೂ ಕಲಘಟಗಿಯಲ್ಲಿ ಡೀಪೋ ನಿರ್ಮಿಸಲಾಗುವುದು. ಕಳೆದ ವರ್ಷ 6 ಡಿಪೋ ಆರಂಭಿಸಲಾಗಿದ್ದು, 25 ಬಸ್ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಹೊಸ ಆರ್‌ಟಿಒ ಕಚೇರಿಗೆ ಜಾಗ ಲಭಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು.
ಕಟ್ಟಡ ನಿರ್ಮಾಣಗೊಳ್ಳುವವರೆಗೆ ಕಚೇರಿಯನ್ನು ಬಾಡಿಗೆ ಜಾಗದಲ್ಲಿ ನಡೆಸಲಾಗುವುದು. ಸಾರಿಗೆ ನಿಗಮಗಳ ಮಧ್ಯ ಸಿಬ್ಬಂದಿ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್) ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸಂಸತ್ ಅಧಿವೇಶನದ ವೇಳೆ ದೆಹಲಿಗೆ ಹೋಗಿ ಪಿಎಫ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, 15000ಕ್ಕಿಂತ ಹೆಚ್ಚಿಗೆ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಇಲಾಖೆ ವತಿಯಿಂದ ಹೊಸ ಬಸ್ ನಿಲ್ದಾಣ ಮಾಡಿದರೆ ಅನುಕೂಲವಾಗುತ್ತದೆ. ಕೆಲವು ಬಸ್ ನಿಲ್ದಾಣಗಳು 30-40 ವರ್ಷ ಹಳೆಯದಾಗಿದ್ದು, ಅವುಗಳ ನವೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪಿಎಫ್ ಸಮಸ್ಯೆ ಬಗೆಹರಿಸಿ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪಿಎಫ್ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಾಯು ಮಾಲಿನ್ಯ ತಡೆಯುವ ದಿಸೆಯಲ್ಲಿ ಅವಳಿ ನಗರದಲ್ಲಿ ಸಿಎನ್‌ಜಿ ಬಸ್‌ಗಳ ಸೇವೆ ಆರಂಭಿಸಬೇಕು. ಹುಬ್ಬಳ್ಳಿಯಲ್ಲಿ ನೂತನ ಗ್ರಾಮಾಂತರ-3ನೇ ಘಟಕಕ್ಕೆ ಆರಂಭಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿದರು. ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ, ಸಂಸ್ಥೆಯ ನಿರ್ದೇಶಕರಾದ ಆಸೀಫ್ ಬಳ್ಳಾರಿ, ಮನೋಜ ಕರ್ಜಗಿ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಪಾಲಿಕೆ ಸದಸ್ಯರಾದ ಪ್ರಕಾಶ ಕ್ಯಾರಕಟ್ಟಿ, ಮೋಹನ ಹಿರೇಮನಿ ಮೊದಲಾದವರಿದ್ದರು.