Advertisement

ಸೋಂಕಿತ ಮೃತರ ಸಂಸಾರಕ್ಕೆ ಪ್ರತ್ಯೇಕ ಚಿತಾಗಾರ

07:08 AM Jul 22, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಶವ ಸಂಸ್ಕಾರಕ್ಕಾಗಿ ನಾಲ್ಕು ಪ್ರತ್ಯೇಕ ಚಿತಾಗಾರವನ್ನು ಮೀಸಲಿಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

Advertisement

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರು ಹಾಗೂ ಕೋವಿಡೇತರ ಸೋಂಕಿ ನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಒಂದೇ ಚಿತಾಗಾರದಲ್ಲಿ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಕೋವಿಡ್ ಸೋಂಕಿನಿಂದ ಮೃತಪಡುವವರ ಶವ ಸಂಸ್ಕಾರಕ್ಕಾಗಿಯೇ ಪ್ರತ್ಯೇಕ ವಾಗಿ ಚಿತಾಗಾರವನ್ನು ನಿಗದಿ ಮಾಡಲಾಗಿದೆ ಎಂದರು.

ಚಿತಾಗಾರದ ಸಮಸ್ಯೆ ಇಲ್ಲ: ನಗರದಲ್ಲಿ ಒಟ್ಟು 12 ಚಿತಾಗಾರಗಳಿದ್ದು, ಇದರಲ್ಲಿ ಮೈಸೂರು ರಸ್ತೆಯ ಚಿತಾಗಾರ ತಾಂತ್ರಿಕ ಸಮಸ್ಯೆಯಿಂದ ನಿಂತಿದೆ. ಇನ್ನು 10 ದಿನದ ಒಳಗಾಗಿ ಇದೂ ಸೇವೆಗೆ ಮುಕ್ತವಾಗಲಿದೆ. ನಗರದ ಚಿತಾಗಾರಗಳಲ್ಲಿ ನಿತ್ಯ ಕೋವಿಡ್, ಕೋವಿಡೇತರ ಸೇರಿ ಒಟ್ಟು 65 ಶವಗಳನ್ನು ಸಂಸ್ಕಾರ ಮಾಡಲಾಗುತ್ತಿದೆ. ಪ್ರತಿ ಚಿತಾಗಾರದಲ್ಲಿ ದಿನಕ್ಕೆ 16 ಶವ ಸಂಸ್ಕಾರ ಮಾಡಬಹುದು.(ಒಂದು ಚಿತಾಗಾರದಲ್ಲಿ 2 ಯಂತ್ರಗಳಿರುತ್ತವೆ) ನಿತ್ಯ ಚಿತಾಗಾರದಲ್ಲಿ 162 ಶವಗಳನ್ನು ಸಂಸ್ಕಾರ ಮಾಡಬಹುದಾಗಿದೆ ಎಂದರು. ಜೂನ್‌ ತಿಂಗಳಲ್ಲಿ ಕೋವಿಡ್ ಮತ್ತು ಕೋವಿಡೇತರ ಶವ ಸೇರಿ ಒಟ್ಟು 1,948 ಶವಗಳನ್ನು ಸಂಸ್ಕಾರ ಮಾಡಲಾಗಿದೆ. ಚಿತಾಗಾರಗಳ ಕೊರತೆ ಸೃಷ್ಟಿಯಾಗಿಲ್ಲ.

ಕೋವಿಡ್ ಮತ್ತು ಸಾಮಾನ್ಯ ಸಂಸ್ಕಾರ ಒಂದೇ ಜಾಗದಲ್ಲಿ ನಡೆಯುವ ಕಾರಣ ಮೃತರ ಸಂಬಂಧಿಕರು ಒಂದೇ ಜಾಗದಲ್ಲಿ ಸೇರುತ್ತಿದ್ದಾರೆ. ಸ್ಯಾನಿಟೈಸರ್‌, ಶವ ಸಂಸ್ಕಾರ ಎಲ್ಲ ಒಂದೇ ಸಮಯದಲ್ಲಿ ನಡೆಯುವುದು ಕಷ್ಟವಾಗುವ ಕಾರಣ ಪ್ರತ್ಯೇಕ ಚಿತಾಗಾರ ಮೀಸಲಿಡ ಲಾಗಿದೆ. ಸದ್ಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಚಿತಾಗಾರಗಳನ್ನು ತೆಗೆಯಲಾಗುತ್ತಿದೆ. ಅವಶ್ಯಕತೆ ಇದ್ದರೆ, ಬೆಳಗ್ಗೆ 7ಕ್ಕೆ ತೆರೆಯುವಂತೆ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಇನ್ನು ಕೋವಿಡ್ ಸೋಂಕಿತರನ್ನು ಮಣ್ಣು ಮಾಡುವುದಾದರೆ, 10 ಅಡಿ ಆಳ ಮಾಡಿ ಮಣ್ಣು ಮಾಡಬೇಕು. ಇದಕ್ಕೆ ಜೆಸಿಬಿ ಬಳಕೆ ಮಾಡಬೇಕಾಗುತ್ತದೆ. ನಗರದಲ್ಲಿ ಒಟ್ಟು 150 ರುದ್ರಭೂಮಿಗಳಿವೆ. ಆದರೆ, ಇವುಗಳಲ್ಲಿ ಜೆಸಿಬಿ ಬಳಕೆ ಮಾಡುವ ವ್ಯವಸ್ಥೆ ಇಲ್ಲ. ಕಂದಾಯ ಇಲಾಖೆಯಿಂದ ಬಿಬಿಎಂಪಿಗೆ 35 ಎಕರೆ ಜಾಗವನ್ನು ನೀಡಲಾಗಿದ್ದು, 35 ಎಕರೆ ಜಾಗವನ್ನು 38 ಗ್ರಾಮಗಳಲ್ಲಿ ನೀಡಲಾಗಿದೆ. ಇದರಲ್ಲಿ ಸೋಂಕಿತರ ಶವ ಸಂಸ್ಕಾರಕ್ಕೆ ಮೀಸಲಿಡಲಾಗುವುದು ಎಂದು ಮಾಹಿತಿ ನೀಡಿದರು.

Advertisement

ಅಂತ್ಯಕ್ರಿಯೆ ಬುಕ್ಕಿಂಗ್‌ ಹೇಗೆ?  : ಶವ ಸಂಸ್ಕಾರಕ್ಕೆ ಬಿಬಿಎಂಪಿ ವೆಬ್‌ಸೈಟ್‌ ಮೂಲಕ ಹತ್ತಿರದ ಚಿತಾಗಾರಕ್ಕೆ ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಬಿಬಿಎಂಪಿ ಸಹಾಯವಾಣಿ: 080 22660000 ಕರೆ ಮಾಡಿ ಮೃತರ ಮಾಹಿತಿ ನೀಡಿದರೆ ಸಾಕು.

Advertisement

Udayavani is now on Telegram. Click here to join our channel and stay updated with the latest news.

Next