Advertisement

ಹಳ್ಳಿಗಳಲ್ಲಿ ಪರಿಶಿಷ್ಟರಿಗೆ ಪ್ರತ್ಯೇಕ ಸಹಕಾರ ಸಂಘ

06:35 AM Dec 01, 2017 | |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ವಿಸ್ತಾರಗೊಳ್ಳಬೇಕು ಹಾಗೂ ತಳ ಸಮುದಾಯಗಳಿಗೂ ಸಹಕಾರ ಸಂಘಗಳ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗೊಂದು ಸಹಕಾರ ಸಂಘ ಸ್ಥಾಪಿಸಬೆಕು, ಅದರಲ್ಲೂ ವಿಶೇಷವಾಗಿ ಎಸ್ಸಿ, ಎಸ್ಟಿ ಜನಸಂಖ್ಯೆ ಹೆಚ್ಚಿರುವ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಹಕಾರ ಸಂಘಗಳನ್ನು ಸ್ಥಾಪಿಸುವಂತೆ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

Advertisement

ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಹಕಾರ ಸಂಘ ಸ್ಥಾಪಿಸಬೇಕು ಎಂಬ ನಿಯಮವಿದೆ. ಅಲ್ಲದೇ ನಬಾರ್ಡ್‌ ನಿಯಮಗಳ ಪ್ರಕಾರ ಪ್ರತಿ 600 ಕುಟುಂಗಳಿರುವ ಗ್ರಾಮಗಳಲ್ಲಿ ಹೊಸದಾಗಿ ಸಹಕಾರ ಸಂಘ ಸ್ಥಾಪಿಸಬೇಕು. ಆದರೆ, ರಾಜ್ಯದಲ್ಲಿ ಪ್ರಸ್ತುತ 40,652 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಎಸ್ಸಿ, ಎಸ್ಟಿ ಸಹಕಾರ ಸಂಘಗಳು ಕೇವಲ 1 ಸಾವಿರ ಇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮತ್ತು ನಿಯಮದಂತೆ ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರತ್ಯೇಕ ಸಹಕಾರ ಸಂಘ ಇಲ್ಲದೇ ಇರುವುದು° ಗಂಭೀರವಾಗಿ ಪರಿಗಣಿಸಿರುವ ಸಮಿತಿಯು ಪ್ರತ್ಯೇಕವಾಗಿ ಎಸ್ಸಿ, ಎಸ್ಟಿ ಸಹಕಾರ ಸಂಘಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಹದಿನಾಲ್ಕನೇ ವಿಧಾನಸಭೆಯ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ತನ್ನ 2061-17ನೇ ಸಾಲಿನ 8ನೇ ವರದಿಯಲ್ಲಿ ಈ ಶಿಫಾರಸು ಮಾಡಿದ್ದು, ಜೊತೆಗೆ ಹೊಸದಾಗಿ ರಚನೆಯಾಗಿರುವ ಗ್ರಾಮ ಪಂಚಾಯಿತಿಗಳನ್ನು ಸೇರಿದಂತೆ ರಾಜ್ಯದ ಎಲ್ಲ 6,120 ಗ್ರಾಮ ಪಂಚಾಯಿಗಳಲ್ಲಿ ಪ್ರತಿ ಪಂಚಾಯಿತಿಗೊಂದು ಸಹಕಾರ ಸಂಘ ಸ್ಥಾಪಿಸುವಂತೆಯೂ ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿದೆ.

ರಾಜ್ಯದಲ್ಲಿರುವ ಒಟ್ಟು 40,652 ಸಹಕಾರ ಸಂಘಗಳ ಪೈಕಿ ಪರಿಶಿಷ್ಟ ಜಾತಿಗಳ 286 ಪರಿಶಿಷ್ಟ ಪಂಗಡದ 104 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎರಡೂ ಸೇರಿದಂತೆ 644 ಸಹಕಾರ ಸಂಘಗಳು ಸೇರಿ ಒಟ್ಟು 1 ಸಾವಿರವಷ್ಟೇ ಎಸ್ಸಿ, ಎಸ್ಟಿ ಸಹಕಾರ ಸಂಘಗಳಿವೆ. ಎಸ್ಸಿ, ಎಸ್ಟಿಗಳ ಒಟ್ಟು ಜನಸಂಖ್ಯೆಗೆ ಅನುಗುಣವಾಗಿ ಸಹಕಾರ ಸಂಘಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಹೀಗಿದ್ದಾಗ ಸಹಕಾರ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸಮಿತಿ ಎಸ್ಸಿ, ಎಸ್ಟಿಗಳಿಗೆ ಪ್ರತ್ಯೇಕವಾಗಿ ಸಹಕಾರ ಸಂಘಗಳನ್ನು ಸ್ಥಾಪಿಸುಂತೆ ಹೇಳಿದೆ.

ವ್ಯತ್ಯಾಸದ ಷೇರುಹಣ ಸರ್ಕಾರವೇ ಭರಿಸಲಿ
ವಿವಿಧ ಸಹಕಾರ ಸಂಘಗಳಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಸದಸ್ಯರಿಗೆ ವ್ಯತ್ಯಾಸದ ಷೇರುಧನ ಪಾವತಿಸುವ ಯೋಜನೆಯಲ್ಲಿ 500 ರೂ.ಗಿಂತ ಒಳಗಿರುವ ವ್ಯತ್ಯಾಸದ ಷೇರುದಾರ ಶುಲ್ಕವನ್ನು ಸರ್ಕಾರದಿಂದ ಪಾವತಿ ಮಾಡಲಾಗಿದ್ದು, ಆದರೆ, 500ಗಿಂತ ಮೇಲ್ಪಟ್ಟ ಷೇರು ಮೊತ್ತ 1 ಸಾವಿರ ರೂ. ಇದ್ದರೆ ಅಂತಹ ಸಂದರ್ಭಗಳಲ್ಲಿ ವ್ಯತ್ಯಾಸದ ಮೊತ್ತವನ್ನು ಸರ್ಕಾರ ಪಾವತಿಸದೇ ಇರುವುದನ್ನು ಗಮನಿಸಿರುವ ಸಮಿತಿಯು, 500ಕ್ಕಿಂತ ಮೇಲ್ಪಟ್ಟು 1 ಸಾವಿರ ರೂ.ಗಳ ಷೇರುಧನದ ಮೊತ್ತದವರೆಗೂ ವ್ಯತ್ಯಾಸದ ಷೇರುಹಣವನ್ನು ಸರ್ಕಾರವೇ ಭರಿಸಲು ಕ್ರಮ ವಹಿಸಬೇಕು ಎದು ಶಿಫಾರಸು ಮಾಡಿದೆ.

Advertisement

“ಎಸ್ಸಿ, ಎಸ್ಟಿಗಳ ಜನಸಂಖ್ಯೆಗೆ ಅನುಗುಣವಾಗಿ ಸಹಕಾರ ಸಂಘಗಳು ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಮಿತಿಯು ಎಸ್ಸಿ, ಎಸ್ಟಿ ಜನಸಂಖ್ಯೆ ಹೆಚ್ಚಿರುವ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಸಹಕಾರ ಸಂಘಗಳನ್ನು ಸ್ಥಾಪಿಸುವಂತೆ ಶಿಫಾರಸು ಮಾಡಿದೆ. ಈ ಶಿಫಾರಸು ಅನುಷ್ಠಾನಕ್ಕೆ ಬರಬೇಕಾದರೆ, ಸರ್ಕಾರ ಹೊಸ ಕಾಯ್ದೆ ಜಾರಿಗೆ ತರಬೇಕು’.
ಕೆ. ಶಿವಮೂರ್ತಿ
ಶಾಸಕರು ಹಾಗೂ ಅಧ್ಯಕ್ಷರು, ವಿಧಾನಮಂಡಲದ ಎಸ್ಸಿ, ಎಸ್ಟಿ ಕಲ್ಯಾಣ ಸಮಿತಿ

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next