ಹುಣಸೂರು: ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಮತದಾನವನ್ನು ಸಂಭ್ರಮಿಸಲು ಇದೇ ಪ್ರಥಮ ಬಾರಿಗೆ ಸ್ವೀಪ್ ಸಮಿತಿ ಆಯೋಜಿಸಿದ್ದ ಬುಡಕಟ್ಟು ಜನರ ಸಾಂಪ್ರದಾಯಿಕ, ಪಿಂಕ್ ಹಾಗೂ ಮಾದರಿ ಮತಕೇಂದ್ರಗಳು ಮತದಾರರ ಪ್ರಮುಖ ಆಕರ್ಷಣೆಯಾಗಿತ್ತು.
ಹುಣಸೂರು-ನಾಗರಹೊಳೆ ಮುಖ್ಯ ರಸ್ತೆಯ ನಾಗಾಪುರ ಪುನರ್ವಸತಿ ಕೇಂದ್ರದ 3ನೇ ಬ್ಲಾಕ್ ನಲ್ಲಿನ ಗಿರಿಜನ ಆಶ್ರಮ ಕೇಂದ್ರದಲ್ಲಿ ಸ್ಥಾಪಿಸಿದ್ದ ಬುಡಕಟ್ಟು ಜನರ ಸಾಂಪ್ರದಾಯಿಕ ಮತಗಟ್ಟೆಗೆ ಸಂಭ್ರಮದಿಂದ ಆಗಮಿಸಿದ ಆದಿವಾಸಿಗಳು ತಮ್ಮದೇ ಶೈಲಿಯ ಗುಡಿಸಲ ಒಳ ಹೊಕ್ಕಿ ನಂತರ ಕೊಠಡಿಗೆ ತೆರಳಿ ಮತದಾನ ಮಾಡಿ ಸಂತಸಪಟ್ಟರು.
ಇನ್ನೂ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೆಲ್ಲರೂ ಮೈಸೂರು ಪೇಟ ತೊಟ್ಟು, ಶ್ವೇತವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಿದರು. ಮತದಾನ ಮಾಡಿದ ಎಲ್ಲರಿಗೂ ನಿಂಬೆ ಹಣ್ಣಿನ ಶರಬತ್ತು ನೀಡಿ ಧಣಿವಾರಿಸಿದರು. ವಿವಿಧ ಜಾತಿಯ ಸಸಿ ವಿತರಿಸಲಾಯಿತು.
ಗಾವಡಗೆರೆ ಹಾಗೂ ಬನ್ನಿಕುಪ್ಪೆಯ ಮತಗಟ್ಟೆಯನ್ನು ಸಂಪೂರ್ಣ ಪಿಂಕ್ ಬಣ್ಣದಲ್ಲಿ ಇಡೀ ಕೊಠಡಿಯನ್ನು ಕಂಗೊಳಿಸುವಂತೆ ಮಾಡಲಾಗಿತ್ತು, ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೆಲ್ಲರೂ ಪಿಂಕ್ ಬಣ್ಣದ ಸೀರೆ ಧರಿಸಿದ್ದರು. ಹೊರ ಆವರಣವನ್ನು ಪಿಂಕ್ ಬಣ್ಣದ ಬೆಲೂನ್‌ಗಳಿಂದ ಸಿಂಗರಿಸಲಾಗಿತ್ತು. ಪಿಂಕ್ ಸೀರೆ, ಚೂಡಿದಾರ್ ಧರಿಸಿ ಬರುವ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಸಸಿ ಹಾಗೂ ಎಲ್ಲ ಮತದಾರರಿಗೂ ಮಜ್ಜಿಗೆ ವಿತರಿಸಿ ಬಾಯಾರಿಕೆ ನೀಗಿಸಿದರು.
ಕಟ್ಟೆಮಳಲವಾಡಿ, ಮನುಗನಹಳ್ಳಿ, ಬಿಳಿಕೆರೆ, ಚಿಲ್ಕುಂದ ಮತಗಟ್ಟೆಗಳನ್ನು ತಳಿರು ತೋರಣಗಳಿಂದ ಮದುವೆ ಮನೆಯಂತೆ ಸಿಂಗರಿಸಲಾಗಿತ್ತು. ಹೆಂಗಸರು,ಗಂಡಸರಿಗೆ ಪ್ರತ್ಯೇಕವಾಗಿ ಸಾಲು ವ್ಯವಸ್ಥೆ ಮಾಡಲಾಗಿತ್ತು. ಸ್ವಾಗತಕಾರರು ಮತದಾರರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕೆಲ ಹೊತ್ತು ಮಜ್ಜಿಗೆ ವಿತರಿಸಿದರು.
ಕೆಲ ಮತದಾರರು ಮದುವೆ ಮನೆಯಂತೆ ಶ್ರಂಗರಿಸಿದ್ದು, ಮದುವೆ ಪಂಟಪಕ್ಕೆ ಬಂದ ಅನುಭವವಾಯಿತೆಂದು ಪತ್ರಿಕೆ ಜೊತೆ ಸಂತಸ ಹಂಚಿಕೊಂಡರು. ಎಲ್ಲ ಮಾದರಿ ಮತಗಟ್ಟೆಗಳಿಗೆ ಸ್ವೀಪ್ ಸಮಿತಿಯ ಅಧ್ಯಕ್ಷ, ಜಿಪಂ ಕಾರ್ಯ ನಿರ್ವಾಹಕ ಅಕಾರಿ ಶಿವಶಂಕರ್, ಸಂಚಾಲಕ ಕೃಷ್ಣಕುಮಾರ್ ಇನ್ನಿತರೆ ಅಧಿಕಾರಿಗಳು ಭೇಟಿ ನೀಡಿ ಮತದಾರರೊಂದಿಗೆ ಚರ್ಚಿಸಿ ಸಸಿ ವಿತರಿಸಿದರು.