Advertisement

ಸೆಂಟ್ರಿಂಗ್‌ ಕುಸಿದು ಒಬ್ಬ ಕಾರ್ಮಿಕ ಸಾವು?

11:35 AM Jan 10, 2017 | Team Udayavani |

ಬೆಂಗಳೂರು/ಮಹದೇವಪುರ: ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್‌ ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟಿರುವ ವಿಚಾರವನ್ನು ಬಿಲ್ಡರ್‌ ಹಾಗೂ ಗುತ್ತಿಗೆದಾರರು ಮುಚ್ಚಿಹಾಕುವ ಯತ್ನ ಮಾಡಿದ್ದಾರೆಂದು ನಗರ ಯೋಜನಾ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಘಟನೆ ನಡೆದ ಸ್ಥಳಕ್ಕೆ ಹಾಗೂ ವೈದೇಹಿ ಆಸ್ಪತ್ರೆಗೆ ಕಂದಾಯ ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು.ಭಾನುವಾರ ನಡೆದಿದ್ದ ಕಟ್ಟಡ ಅವಘಡದಲ್ಲಿ ಉತ್ತರ ಭಾತರ ಮೂಲದ ಲಂಬೂ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಗಾಯಾಳು ಕಾರ್ಮಿಕ ಪ್ರದೀಪ್‌ ತಿಳಿಸಿದ್ದಾನೆಂದು ತಿಳಿಸಿದರು.

ಸೆಂಟ್ರಿಂಗೆ ಕುಸಿದು ಕಾರ್ಮಿಕ ಮೃತಪಟ್ಟಿರುವ ವಿಚಾರ ಗಾಯಗೊಂಡಿರುವ ಕಾರ್ಮಿಕರೊಂದಿಗೆ ಚರ್ಚಿಸಿದಾಗ ಬೆಳಕಿಗೆ ಬಂದಿದೆ, ದಿವ್ಯಶ್ರೀ ಕನ್ಸ್‌ಟ್ರಕ್ಷನ್‌ರವರು ಕಾರ್ಮಿಕ ಸಾವನ್ನಪ್ಪಿರುವ ವಿಚಾರವನ್ನು ಮುಚ್ಚಿ ಹಾಕಿರುವುದು ಅಕ್ಷಮ್ಯ ಅಪರಾದವಾಗಿದೆ ಎಂದು ಅಧಿಕಾರಿಗಳನ್ನು, ಬಿಲ್ಡರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಕಟ್ಟಡದ ನಕ್ಷೆ ಮಂಜೂರಾತಿಯನ್ನೂ ಸಹ ಪಡೆಯದೆ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ನಡೆಯುತ್ತಿದ್ದರೂ ಈ ಬಗ್ಗೆ ಗಮನಹರಿಸದೆ ಇರುವುದು ಬಿಬಿಎಂಪಿ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ, ಬಿಲ್ಡರ್‌ಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.

ಸೆಂಟ್ರಿಂಗ್‌ ಕುಸಿತಕ್ಕೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸದಿರುವುದೇ ಕಾರಣವಾಗಿದೆ. ಉತ್ತರ ಭಾರತದ ಅಮಾಯಕ ಕಾರ್ಮಿಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ. ಈ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಪುಷ್ಪಾ ಮಂಜುನಾಥ್‌, ಶ್ರೀಕಾಂತ್‌, ಪ್ರಮೀಳಾ ಹಾಗೂ ಅಧಿಕಾರಿಗಳು ಹಾಜರಿದ್ದರು.

Advertisement

ಪತ್ರಕರ್ತರಿಗೆ ಪ್ರವೇಶ ನೀಡಿರಲಿಲ್ಲ
ಭಾನುವಾರ ಬೆಳಗ್ಗೆ ಕಟ್ಟಡದ ಸೆಂಟ್ರಿಂಗ್‌ ಕುಸಿದು ಎಂಟು ಮಂದಿ ಗಾಯಗೊಂಡಿದ್ದರು. ಈ ವೇಳೆ ಘಟನೆ ವರದಿಗೆ ಮುಂದಾಗಿದ್ದ ಪತ್ರಕರ್ತರಿಗೆ ದಿವ್ಯಶ್ರೀ ಕಟ್ಟಡ ಸಂಸ್ಥೆಯ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಈ ವೇಳೆ ಪತ್ರಕರ್ತರು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.

ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಪತ್ರಕರ್ತರನ್ನು ಒಳಗೆ ಕರೆದುಕೊಂಡು ಹೋದರು. ಜತೆಗೆ ಆಸ್ಪತ್ರೆಯಲ್ಲಿನ ಗಾಯಾಳು ಕಾರ್ಮಿಕರ ಭೇಟಿಗೂ ಪತ್ರಕರ್ತರಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಮಂಜುಳಾ ನಾರಾಯಣಸ್ವಾಮಿ ಅವರ ಅನುಮಾನಕ್ಕೆ ಪುಷ್ಠಿ ದೊರೆತಂತಾಗಿದೆ.

ಭಾನುವಾರ ವೈಟ್‌ಫೀಲ್ಡ್‌ ಬಳಿ ಸೆಂಟ್ರಿಂಗ್‌ ಕುಸಿತದ ವೇಳೆ ಆಗಿರುವ ಅನಾಹುತದ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದಿದ್ದೇನೆ. ಆದರೆ, ಪ್ರಕರಣದ ವೇಳೆ ಪ್ರಾಣ ಹಾನಿ ಆಗಿರುವ ಬಗ್ಗೆ ಅವರು ಮಾಹಿತಿ ನೀಡಿಲ್ಲ. ಬದಲಿಗೆ ಪ್ರಕರಣದಿಂದಾಗಿ ಹಲವರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮತ್ತೂಮ್ಮೆ ಪರಿಶೀಲಿಸುತ್ತೇನೆ.
-ಎನ್‌. ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next