ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 289 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿ ಬೀಗಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ವಿಪರ್ಯಾಸವೆಂಬಂತೆ ದಿನಾಂತ್ಯಕ್ಕೆ ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾಗಿ 333 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ 38,312.52 ಅಂಕಗಳ ಮಟ್ಟಕ್ಕೆ ಕುಸಿಯುವ ಮೂಲಕ ನಿರಂತರ ನಾಲ್ಕನೇ ದಿನದ ನಷ್ಟವನ್ನು ದಾಖಲಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 98.15 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,582.35 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಇಂದು ವಹಿವಾಟಿನ ನಡುವೆ 71.10 ರೂ. ಮಟ್ಟಕ್ಕೆ ಕುಸಿದು ಹೊಸ ಸಾರ್ವಕಾಲಿಕ ದಾಖಲೆಯ ತಳಮಟ್ಟವನ್ನು ಕಂಡಿತು.
ಇಂದು ಎಫ್ಎಂಸಿಜಿ, ರಿಯಲ್ಟಿ, ಪವರ್, ಬ್ಯಾಂಕಿಂಗ್, ಆಟೋ, ಆಯಿಲ್ ಮತ್ತು ಗ್ಯಾಸ್, ಪಿಎಸ್‌ಯು, ಐಟಿ, ಟೆಕ್, ಇನ್‌ಫ್ರಾಸ್ಟ್ರಕ್ಚರ್ ಮತ್ತು ಕ್ಯಾಪಿಟಲ್ ಗೂಡ್ಸ್ ಶೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು.
ಎಚ್‌ಯುಎಲ್, ಪವರ್ ಗ್ರಿಡ್, ಐಟಿ, ಮಹೀಂದ್ರ, ಮಾರುತಿ ಸುಜುಕಿ, ಒಎನ್‌ಜಿಸಿ, ಟಿಸಿಎಸ್, ಏಶ್ಯನ್ ಪೇಂಟ್ಸ್, ಆರ್‌ಐಎಲ್, ಹೀರೋ ಮೋಟೋ ಕಾರ್ಪ್, ಇನ್‌ಫೋಸಿಸ್, ಲಾರ್ಸನ್, ಟಾಟಾ ಮೋಟರ್ ಶೇರುಗಳು ಶೇ.4.58ರಷ್ಟು ಕುಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,969 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,353 ಮುನ್ನಡೆ ಕಂಡವು; 1,399 ಹಿನ್ನಡೆಗೆ ಗುರಿಯಾದವು; 217 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.