ಮುಂಬಯಿ : ಮಾರ್ಚ್ ತಿಂಗಳ ವಾಯಿದೆ ವಹಿವಾಟು ಚುಕ್ತಾಗೊಳಿಸುವ ತಿಂಗಳ ಕೊನೆಯ ಗುರುವಾರವಾಗಿರುವ ಇಂದು ವಹಿವಾಟುದಾರರಿಂದ ನಡೆದ ವ್ಯಾಪಕ ಶಾರ್ಟ್ ಕವರಿಂಗ್‌ನಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 412.84 ಅಂಕಗಳ ಭರ್ಜರಿ ಏರಿಕೆಯನ್ನು ಕಂಡು ದಿನದ ವಹಿವಾಟನ್ನು 38,545.72 ಅಂಕಗಳ ಮಟ್ಟದಲ್ಲಿ ವಿಶ್ವಾಸಭರಿತವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 124.95 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 11,570 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಫಿನಾನ್ಸ್, ಟೆಲಿಕಾಂ ಮತ್ತು ಐಟಿ ರಂಗದ ಶೇರುಗಳು ಭರ್ಜರಿ ಖರೀದಿಯನ್ನು ಕಂಡವು.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್‌ಗಳಾಗಿ ಮೂಡಿ ಬಂದ ಎಚ್ ಸಿ ಎಲ್ ಟೆಕ್, ಎಸ್‌ಬಿಐ, ಐಟಿಸಿ, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಎಸ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಟಿಸಿಎಸ್, ಏಶ್ಯನ್ ಪೇಂಟ್, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಬಜಾಜ್ ಫಿನಾನ್ಸ್ ಶೇರುಗಳು ಶೇ.3.84ರಷ್ಟು ಏರಿಕೆಯನ್ನು ಕಂಡವು.
ಹಾಗಿದ್ದರೂ ಡಾಲರ್ ಎದುರು ರೂಪಾಯಿ ಇಂದು 11 ಪೈಸೆಗಳ ಕುಸಿತವನ್ನು ಕಂಡು 68.99 ರೂ. ನಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,819 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,670 ಶೇರುಗಳು ಮುನ್ನಡೆ ಸಾಧಿಸಿದವು; 973 ಶೇರುಗಳು ಹಿನ್ನಡೆಗೆ ಗುರಿಯಾದವು; 176 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.