ಮುಂಬಯಿ : ಮತದಾನೋತ್ತರ ಮತಗಟ್ಟೆ ಸಮೀಕ್ಷಾ ಫಲಿತಾಂಶಗಳು ಆಶಾದಾಯಕವಾಗಿರುತ್ತವೆ ಎಂಬ ಲೆಕ್ಕಾಚಾರದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 537 ಅಂಕಗಳ ಭರ್ಜರಿ ಏರಿಕೆಯೊಂದಿಗೆ ಕೊನೆಗೊಳಿಸಿದೆ.
ಇದೇ ರೀತಿಯ ಆಶಾವಾದದಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,400 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿದೆ.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆಯಲ್ಲಿಂದು ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಮೇರೆ ಮೀರಿದ ಆಶಾವಾದ ವ್ಯಕ್ತವಾದ ಕಾರಣ ಬ್ಯಾಂಕಿಂಗ್, ಆಟೋ ರಂಗದ ಶೇರುಗಳು ಬಹುವಾಗಿ ವಿಜೃಂಭಿಸಿದವು.
ಮೇ 19ರ ಭಾನುವಾರದಂದು ಹಾಲಿ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೇ ಹಂತದ ಮತದಾನ 9 ರಾಜ್ಯಗಳಲ್ಲಿ ನಡೆಯಲಿದ್ದು ಅದರ ಫಲಿತಾಂಶ ನಿರ್ಣಾಯಕವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಸೆನ್ಸೆಕ್ಸ್ ಇಂದಿನ ವಹಿವಾಟನ್ನು 537.29 ಅಂಕಗಳ ಜಿಗಿತದೊಂದಿಗೆ 37,930.77 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದರೆ ನಿಫ್ಟಿ 150.05 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11,407.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಈ ವಾರದಲ್ಲಿ ಸೆನ್ಸೆಕ್ಸ್ 467.78 ಅಂಕಗಳನ್ನೂ ನಿಫ್ಟಿ 128.25 ಅಂಕಗಳನ್ನೂ ಸಂಪಾದಿಸಿವೆ.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,622 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,374 ಶೇರುಗಳು ಮುನ್ನಡೆ ಸಾಧಿಸಿದವು; 1,141 ಶೇರುಗಳು ಹಿನ್ನಡೆಗೆ ಗುರಿಯಾದವು; 147 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.