Advertisement

ಸೆನ್ಸೆಕ್ಸ್‌ ದಾಖಲೆಯ ನಾಗಾಲೋಟ ಮುಂದುವರಿಕೆ

12:27 AM Dec 18, 2020 | mahesh |

ಮುಂಬಯಿ: ಸತತ 5ನೇ ದಿನವೂ ಷೇರು­ಪೇಟೆಯ ನಾಗಾಲೋಟ ಮುಂದುವರಿದಿದ್ದು, ಗುರುವಾರ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿವೆ.

Advertisement

ಮಧ್ಯಾಂತರ ವಹಿವಾಟಿನ ವೇಳೆ ಒಂದು ಹಂತದಲ್ಲಿ 46,992.57 ತಲುಪಿದ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ದಿನಾಂತ್ಯಕ್ಕೆ 223.88 ಅಂಕಗಳ ಏರಿಕೆ ಕಂಡು, 46,890.34­ರಲ್ಲಿ ಕೊನೆಗೊಂಡಿತು. ಅದೇ ರೀತಿ, ನಿಫ್ಟಿ 58 ಅಂಕಗಳ ಏರಿಕೆ ದಾಖಲಿಸಿ, 13,740.70ರಲ್ಲಿ ವಹಿವಾಟು ಅಂತ್ಯಗೊಳಿ­ಸಿತು. ಮಧ್ಯಂತರದಲ್ಲಿ 13,773.25ಕ್ಕೆ ತಲು­ಪುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು.

ಗುರುವಾರ ಸೆನ್ಸೆಕ್ಸ್‌ನಲ್ಲಿ ಲಾಭ ಗಳಿಸಿದ ಕಂಪೆನಿಗಳ ಪಟ್ಟಿಯಲ್ಲಿ ಎಚ್‌ಡಿಎಫ್ಸಿ ಅಗ್ರ ಸ್ಥಾನ ಗಳಿಸಿದೆ. ಎಚ್‌ಡಿಎಫ್ಸಿ ಷೇರುಗಳ ಮೌಲ್ಯ ಶೇ.2.92ರಷ್ಟು ಏರಿಕೆ ಕಂಡಿದೆ. ಇದೇ ರೀತಿ ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್ಸಿ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಪವರ್‌ಗ್ರಿಡ್‌, ಟಿಸಿಎಸ್‌, ಟೆಕ್‌ ಮಹೀಂದ್ರಾ ಮತ್ತು ಎಲ್‌ಆ್ಯಂಡ್‌ಟಿ ಕಂಪೆನಿಗಳು ಕೂಡ ಲಾಭ ಗಳಿಸಿದವು. ಇನ್ನೊಂದೆಡೆ, ಒಎನ್‌ಜಿಸಿ, ಮಾರುತಿ, ಟಾಟಾ ಸ್ಟೀಲ್‌, ಎಚ್‌ಯುಎಲ್‌, ಬಜಾಜಾ ಆಟೋ, ಸನ್‌ ಫಾರ್ಮಾ ಷೇರುಗಳು ಶೇ.1.55ರಷ್ಟು ಇಳಿಕೆ ಕಂಡವು. ಇದೇ ವೇಳೆ, ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 1 ಪೈಸೆ ಕುಸಿದಿದ್ದು, 73.59ಕ್ಕೇರಿಕೆಯಾಗಿದೆ.

4ನೇ ತ್ತೈಮಾಸಿಕದಲ್ಲಿ ಹಿಂಜರಿತದ ಅಂತ್ಯ
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7.8ರಷ್ಟು ಕುಸಿತ ಕಾಣಲಿದ್ದು, 2021ನೇ ವಿತ್ತ ವರ್ಷದ ಮೂರನೇ ತ್ತೈಮಾಸಿಕದಲ್ಲಿ ಕೇವಲ ಶೇ.1ರಷ್ಟು ಮಾತ್ರ ಕುಸಿತ ದಾಖಲಿಸಲಿದೆ ಎಂದು ರೇಟಿಂಗ್‌ ಸಂಸ್ಥೆ ಐಸಿಆರ್‌ಎ ಭವಿಷ್ಯ ನುಡಿದಿದೆ. ಇದೇ ವೇಳೆ, ನಾಲ್ಕನೇ ತ್ತೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಶೇ.1.3ರಷ್ಟು ಏರಿಕೆಯಾಗಲಿದ್ದು, ಆರ್ಥಿಕ ಹಿಂಜರಿತ ಅಂತ್ಯ ಕಾಣಲಿದೆ ಎಂದೂ ಹೇಳಿದೆ. ಆರ್ಥಿಕ ಚಟುವಟಿಕೆಗಳಲ್ಲಿನ ಪ್ರಗತಿ, ಉತ್ತಮ ಹಿಂಗಾರು ಬೆಳೆ, ಕೊರೊನಾ ಲಸಿಕೆಯ ಲಭ್ಯತೆ, ರಫ್ತು ಹೆಚ್ಚಳದ ನಿರೀಕ್ಷೆ ಮತ್ತಿತರ ಬೆಳವಣಿಗೆಗಳು ಇದಕ್ಕೆ ಪೂರಕವಾಗಿರಲಿವೆ ಎಂದೂ ಸಂಸ್ಥೆ ಹೇಳಿದೆ.

ಚಿನ್ನದ ದರ 194 ರೂ. ಏರಿಕೆ
ದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ದರ 194 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 49,455 ರೂ. ಆಗಿದೆ. ಬೆಳ್ಳಿ ದರವೂ ಏರಿಕೆಯ ಹಾದಿಯಲ್ಲಿದ್ದು, 1,184 ರೂ. ಹೆಚ್ಚಳವಾಗಿ, ಕೆಜಿಗೆ 66,969 ರೂ.ಗೆ ತಲುಪಿದೆ. ಅಮೆರಿಕದಲ್ಲಿ ಈ ವಾರ ಉತ್ತೇಜನ ಪ್ಯಾಕೇಜ್‌ ಘೋಷಣೆಯಾಗುವ ನಿರೀಕ್ಷೆಯೇ ದರ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next