ಮುಂಬಯಿ : ಎರಡು ದಿನಗಳ ನಿರಂತರ ಸೋಲಿನ ಬಳಿಕ ಗೆಲುವಿನ ಹಾದಿಗೆ ಹೊರಳಿಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 77 ಅಂಕಗಳ ಜಿಗಿತವನ್ನು ದಾಖಲಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,400 ಅಂಕಗಳ ಸನಿಹಕ್ಕೆ ನುಗ್ಗತೊಡಗಿತು.
ಕಳೆದ ಎರಡು ದಿನಗಳ ಸೋಲಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 575 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಆಯಿಲ್, ಗ್ಯಾಸ್, ಬ್ಯಾಂಕಿಂಗ್, ಮೆಟಲ್ ಕ್ಷೇತ್ರದ ಶೇರುಗಳು ಉತ್ತಮ ಏರಿಕೆಯನ್ನು ಕಂಡವು; ಏಶ್ಯನ್ ಶೇರು ಪೇಟೆಯಲ್ಲಿ ಚುರುಕಿನ ವಹಿವಾಟು ನಡೆಯುತ್ತಿರುವುದು ಮುಂಬಯಿ ಶೇರು ಪೇಟೆಗೆ ಹುರುಪು ನೀಡಿತು.
ಬೆಳಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್ 102.36 ಅಂಕಗಳ ಮುನ್ನಡೆಯೊಂದಿಗೆ 37,911.27 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 29.40 ಅಂಕಗಳ ಮುನ್ನಡೆಯೊಂದಿಗೆ 11,383.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್ , ಮಾರುತಿ ಸುಜುಕಿ, ಇನ್‌ಫೋಸಿಸ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 15 ಪೈಸೆ ಏರಿಕೆಯನ್ನು ಕಂಡು 68.81 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.