ಮುಂಬಯಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಇಂಧನ ಬೆಲೆ ಹೆಚ್ಚಳವಾಗುತ್ತಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ ಪರಿಣಾಮ ಗುರುವಾರ (ಮಾರ್ಚ್ 03) ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದ್ದರೂ ದಿನಾಂತ್ಯದಲ್ಲಿ ಸೆನ್ಸೆಕ್ಸ್ ಇಳಿಕೆಯೊಂದಿಗೆ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಶಿವಮೊಗ್ಗ: ಹತ್ಯೆಗೀಡಾದ ಹರ್ಷ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರಕಾರ
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 527.72 ಅಂಕ ಏರಿಕೆಯಾಗಿದ್ದು, 55,996.62 ಅಂಕಗಳಲ್ಲಿ ವಹಿವಾಟು ನಡೆದಿತ್ತು. ಆದರೆ ಮಧ್ಯಾಹ್ನದ ವಹಿವಾಟಿನಲ್ಲಿ 366.22 ಅಂಕದಷ್ಟು ಕುಸಿತದೊಂದಿಗೆ 55,102.68 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 107.90 ಅಂಕ ಕುಸಿತವಾಗಿದ್ದು, 16,498.05 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶೀಯ ಷೇರು ಮಾರುಕಟ್ಟೆ ವಹಿವಾಟು ನಷ್ಟದಲ್ಲಿ ಅಂತ್ಯಗೊಂಡಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ ಮುಖ್ಯಸ್ಥ ಮಿತುಲ್ ಶಾ ವಿಶ್ಲೇಷಿಸಿದ್ದಾರೆ.
ಆಲ್ಟ್ರಾಟೆಕ್ ಸಿಮೆಂಟ್ ಷೇರು ಮೌಲ್ಯ ಶೇ.6ರಷ್ಟು ನಷ್ಟ ಕಂಡಿದೆ. ಇನ್ನುಳಿದಂತೆ ಏಷಿಯನ್ ಪೇಂಟ್ಸ್, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್, ಮಾರುತಿ ಸುಜುಕಿ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಪವರ್ ಗ್ರಿಡ್, ವಿಪ್ರೋ, ಟೆಕ್ ಮಹೀಂದ್ರ, ಎಚ್ ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಐಟಿಸಿ ಷೇರುಗಳು ಲಾಭಗಳಿಸಿದೆ.