Advertisement

ಮತ್ತೆ ದಾಖಲೆಯ ಓಟಕ್ಕೆ ತೊಡಗಿದ ಮುಂಬಯಿ ಶೇರು; ಸೆನ್ಸೆಕ್ಸ್‌ 330 ಅಂಕ ಜಿಗಿತ

11:04 AM Jun 01, 2019 | Team Udayavani |

ಮುಂಬಯಿ : 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ನಡೆಯುವುದಕ್ಕೆ ಮುನ್ನವೇ ಮುಂಬಯಿ ಶೇರು ಪೇಟೆ ಇಂದು ಗುರುವಾರದ ವಹಿವಾಟನ್ನು 300ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ಮತ್ತೆ ಹೊಸ  ದಾಖಲೆಯ ಎತ್ತರವನ್ನು ಏರಲು ಮುಂದಾಗಿದೆ.

Advertisement

ಮೋದಿ ಅವರ ಹೊಸ ಸಚಿವ ಸಂಪುಟದಲ್ಲಿ ತಮ್ಮ ಒಲವಿನ ಸದಸ್ಯರಿಗೆ ಪ್ರಮುಖ ಸಚಿವ ಪದ ಸಿಗುವುದೆಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳನ್ನು ಸಂಗ್ರಹಿಸಲು ತೊಡಗಿರುವುದೇ ಇಂದಿನ ರಾಲಿಗೆ ಕಾರಣವೆಂದು ತಿಳಿಯಲಾಗಿದೆ.

ಪ್ರಧಾನಿ ಮೋದಿ ಪ್ರಮಾಣ ವಚನ ಕಾರ್ಯಕ್ರಮ 8,000ಕ್ಕೂ ಅಧಿಕ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಇಂದು ಗುರುವಾರ ರಾತ್ರಿ 7 ಗಂಟೆಗೆ ನಡೆಯಲಿದೆ.

ಇಂದು ವಹಿವಾಟನ ನಡುವೆ 400 ಕ್ಕೂ ಅಧಿಕ ಅಂಕಗಳ ಏರಿಕೆ ದಾಖಲಿಸಿದ್ದ ಸೆನ್ಸೆಕ್ಸ್‌ ದಿನದ ವಹಿವಾಟನ್ನು 329.92 ಅಂಕಗಳ ಜಿಗಿತದೊಂದಿಗೆ 39,831.97 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 84.80 ಅಂಕಗಳ ಏರಿಕೆಯೊಂದಿಗೆ 11,945.90 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿತು.

Advertisement

ಇಂದಿನ ಟಾಪ್‌ ಗೇನರ್‌ ಎನ್‌ಟಿಪಿಸಿ ಶೇ.3.44ರ ಏರಿಕೆಯನ್ನು ಪಡೆಯಿತು. ಉಳಿದಂತೆ ಭಾರ್ತಿ ಏರ್‌ಟೆಲ್‌, ಬಜಾಜ್‌ ಫಿನಾನ್ಸ್‌, ಟಿಸಿಎಸ್‌, ಎಚ್‌ ಡಿ ಎಫ್ ಸಿ, ಎಸ್‌ ಬ್ಯಾಂಕ್‌ ಮತ್ತು ಆರ್‌ಐಎಲ್‌ ಶೇರುಗಳು ಶೇ.2.33ರ ಏರಿಕೆ ಕಂಡವು.

ಡಾಲರ್‌ ಎದುರು ರೂಪಾಯಿ ಇಂದು ಐದು ಪೈಸೆಯ ಇಳಿಕೆ ಕಂಡು 69.88 ರೂ. ಮಟ್ಟಕ್ಕೆ ಕುಸಿಯಿತು. ಬ್ರೆಂಟ್‌ ಕಚ್ಚಾ ತೈಲ ಶೇ.0.06ರಷ್ಟು ಕುಸಿದು ಬ್ಯಾರಲ್‌ ಗೆ 67.83 ಡಾಲರ್‌ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next