Advertisement

ದಾಖಲೆ ಮುಂದುವರಿಸಿದ ಸೆನ್ಸೆಕ್ಸ್‌, ನಿಫ್ಟಿ

12:45 AM Dec 17, 2020 | mahesh |

ಮುಂಬಯಿ: ಸತತ ನಾಲ್ಕನೇ ದಿನವೂ ಷೇರುಪೇಟೆಯ ದಾಖಲೆಯ ಓಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗ­ಳಲ್ಲಿನ ಸಕಾರಾತ್ಮಕ ಬೆಳವಣಿಗೆಗಳು ಹಾಗೂ ದೇಶದೊಳಗಿನ ಆರ್ಥಿಕ ಸುಧಾರಣೆಗಳು ಷೇರು­ಪೇಟೆ­ಯಲ್ಲಿ ಹೊಸ ಉತ್ಸಾಹ ಮೂಡಿಸಿದೆ.

Advertisement

ಬುಧವಾರವೂ ಹೂಡಿಕೆದಾ­ರರು ಷೇರುಗಳ ಖರೀದಿಯಲ್ಲಿ ಆಸಕ್ತಿ ವಹಿಸಿದ ಪರಿಣಾಮ, ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 403.29 ಅಂಕಗಳ ಏರಿಕೆ ದಾಖಲಿಸಿ, 46,666.46ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 114.85 ಅಂಕ ಏರಿಕೆಯಾಗಿ 13,682.70ರಲ್ಲಿ ಅಂತ್ಯಗೊಂಡಿದೆ.

ಬಿಎಸ್‌ಇ ಮತ್ತು ನಿಫ್ಟಿ ಎರಡೂ ಕೂಡ ಮಧ್ಯಾಂತರ ವಹಿವಾಟಿನ ಅವಧಿಯಲ್ಲಿ ಕ್ರಮವಾಗಿ 46,704.97 ಮತ್ತು 13,692.35ಕ್ಕೆ ತಲುಪುವ ಮೂಲಕ ಸಾರ್ವಕಾಲಿಕ ಏರಿಕೆ ದಾಖಲಿಸಿದವು.

ಎಚ್‌ಡಿಎಫ್ಸಿ, ಒಎನ್‌ಜಿಸಿ, ಭಾರ್ತಿ ಏರ್‌ಟೆಲ್‌, ಏಷ್ಯನ್‌ ಪೈಂಟ್ಸ್‌, ಟೈಟಾನ್‌, ಟಿಸಿಎಸ್‌ ಮತ್ತು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಗಳ ಷೇರುಗಳು ಲಾಭ ಗಳಿಸಿದವು. ಇನ್ನೊಂದೆಡೆ, ಐಸಿಐಸಿಐ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಎನ್‌ಟಿಪಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ಟೆಕ್‌ ಮಹೀಂದ್ರಾ ಮತ್ತು ಎಚ್‌ಸಿಎಲ್‌ ಟೆಕ್‌ ಭಾರೀ ನಷ್ಟ ಅನುಭವಿಸಿದವು.

ಐರೋಪ್ಯದಲ್ಲೂ ಏರಿಕೆ: ಬ್ರೆಕ್ಸಿಟ್‌ ವ್ಯಾಪಾರ ಒಪ್ಪಂದ, ಕೊರೊನಾ ಲಸಿಕೆಯ ವಿತರಣೆ ನಿರೀಕ್ಷೆಗಳು ಐರೋಪ್ಯ ಷೇರು ಮಾರುಕಟ್ಟೆಯನ್ನು 10 ತಿಂಗಳಲ್ಲೇ ಅತ್ಯಧಿಕ ಏರಿಕೆ ಕಾಣುವಂತೆ ಮಾಡಿದವು.

Advertisement

ರೂಪಾಯಿ ಚೇತರಿಕೆ: ಇದೇ ವೇಳೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಬುಧವಾರ 5 ಪೈಸೆ ಏರಿಕೆಯಾಗಿದ್ದು, 73.58ಕ್ಕೇರಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆಯು ಹೆಚ್ಚುತ್ತಿರುವುದು ಹಾಗೂ ದೇಶೀಯ ಮಾರುಕಟ್ಟೆಯಲ್ಲಿನ ಚೇತರಿಕೆಯು ರೂಪಾಯಿಗೆ ಬಲ ನೀಡಿದೆ.

ನೇರ ತೆರಿಗೆ ಸಂಗ್ರಹ ಶೇ.17.6 ಇಳಿಕೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಮುಂಗಡ ತೆರಿಗೆ ಸೇರಿದಂತೆ ನೇರ ತೆರಿಗೆ ಸಂಗ್ರಹವು ಶೇ.17.6ರಷ್ಟು ಇಳಿಕೆಯಾಗಿದೆ. ಡಿ.15ರವರೆಗೆ 4.95 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 6.01 ಲಕ್ಷ ಕೋಟಿ ರೂ. ಆಗಿತ್ತು. ಇದು ಆರಂಭಿಕ ಮಾಹಿತಿಯಾಗಿದ್ದು, ಬ್ಯಾಂಕುಗಳಿಂದ ದತ್ತಾಂಶಗಳು ಬಂದ ಬಳಿಕ ಈ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಡಿ.15ರವರೆಗೆ 2.26 ಲಕ್ಷ ಕೋಟಿ ರೂ. ಕಾರ್ಪೊರೇಟ್‌ ತೆರಿಗೆ ಸಂಗ್ರಹವಾಗಿದ್ದರೆ, ವೈಯಕ್ತಿಕ ಆದಾಯ ತೆರಿಗೆಯ ರೂಪದಲ್ಲಿ 2.57 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next