ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 553 ಅಂಕಗಳ ಭರ್ಜರಿ ಏರಿಕೆಯೊಂದಿಗೆ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 166 ಅಂಕಗಳ ಉತ್ತಮ ಏರಿಕೆಯೊಂದಿಗೆ ಜೀವಮಾನದ ಎತ್ತರದ ಮಟ್ಟವನ್ನು ಏರಿದ ಸಾಧನೆಗೈದು ಇಂದು ಸೋಮವಾರದ ವಹಿವಾಟನ್ನು ಕೊನೆಗೊಳಿಸಿದವು.
ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಆರ್‌ಬಿಐ ನಿರಂತರ ಮೂರನೇ ಬಾರಿಗೆ ತನ್ನ ಪ್ರಮುಖ ಬಡ್ಡಿ ದರವನ್ನು ಕಡಿತ ಮಾಡುವುದೆಂಬ ಆಶಾವಾದಕ್ಕೆ ಪುಷ್ಟಿಯಾಗಿ ದುರ್ಬಲ ಜಿಡಿಪಿ ಅಂಕಿ ಅಂಶಗಳು ಪ್ರಕಟಗೊಂಡದ್ದೇ ಮುಂಬಯಿ ಶೇರು ಪೇಟೆಯ ಇಂದಿನ ಜಿಗಿತಕ್ಕೆ ಕಾರಣವಾಗಿದೆ.
ಸೆನ್ಸೆಕ್ಸ್ ಇಂದು ಸಾರ್ವಕಾಲಿಕ ಮಟ್ಟದ ಎತ್ತರವಾಗಿ 40,308.90 ಅಂಕಗಳ ಮಟ್ಟವನ್ನೂ, ನಿಫ್ಟಿ ಸೂಚ್ಯಂಕ 12,088.55 ಅಂಕಗಳ ಮಟ್ಟವನ್ನೂ ತಲುಪಿ ದಿನದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸಿದವು.
ಇಂದಿನ ಟಾಪ್ ಗೇನರ್‌ಗಳಾದ ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ, ಏಶ್ಯನ್ ಪೇಂಟ್, ಇಂಡಸ್ ಇಂಡ್ ಬ್ಯಾಂಕ್, ಎಚ್ ಯು ಎಲ್, ಮಾರುತಿ ಶೇರುಗಳು ಶೇ.5.87ರ ಏರಿಕೆಯನ್ನು ದಾಖಲಿಸಿದವು.
ದೇಶದ ಆರ್ಥಿಕ ಪ್ರಗತಿಯ ಮಟ್ಟವು 2018-19ರ ಕೊನೆಯ ತ್ತೈಮಾಸಿಕದಲ್ಲಿ ಐದು ವರ್ಷಗಳ ನಿಕೃಷ್ಟ ಮಟ್ಟವನ್ನು ತಲುಪಿರುವುದರಿಂದ, ಆರ್‌ಬಿಐ ಇದೇ ಗುರುವಾರ ಪ್ರಕಟಿಸಲಿರುವ ತನ್ನ ದ್ವೆ„ಮಾಸಿಕ ಆರ್ಥಿಕ ಪರಾಮರ್ಶೆ ವರದಿಯಲ್ಲಿ ನಿರಂತರ ಮೂರನೇ ಬಾರಿಗೆ ಬಡ್ಡಿ ದರ ಕಡಿತವನ್ನು ಮಾಡೀತೆಂಬ ಆಶಾವಾದ ಶೇರು ಮಾರುಕಟ್ಟೆಯಲ್ಲಿ ಮನೆಮಾಡಿದೆ.
ಡಾಲರ್ ಎದುರು ರೂಪಾಯಿ ಇಂದು 38 ಪೈಸೆಗಳ ಏರಿಕೆಯನ್ನು ಪಡೆದು 69.32 ರೂ. ಮಟ್ಟಕ್ಕೆ ಏರಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,769 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,193 ಶೇರುಗಳು ಮುನ್ನಡೆ ಸಾಧಿಸಿದವು; 1,416 ಶೇರುಗಳು ಹಿನ್ನಡೆಗೆ ಗುರಿಯಾದವು; 160 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.