ಬಾಂಬೆ ಷೇರು ಪೇಟೆಯು ಕಳೆದ ಕೆಲವು ದಿನಗಳಿಂದ ತೇಜಿಯಿಂದ ಕೂಡಿದೆ. ಕಳೆದ ವರ್ಷದ ಕೊನೆಯ ವಾರಗಳಲ್ಲಿ ವಿಶ್ಲೇಷಕರು ವರ್ಷಾಂತ್ಯದಲ್ಲಿ ಬಾಂಬೆ ಷೇರುಪೇಟೆ ಸೂಚ್ಯಂಕ ಇತಿಹಾಸದಲ್ಲೇ ಮೊದಲ ಬಾರಿ 50 ಸಾವಿರ ಅಂಕ ದಾಟಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಆ ಗುರಿ ಶೀಘ್ರವೇ ತಲುಪುವುದು ಖಚಿತವಾಗಿದೆ. ಮಂಗಳವಾರ ಮುಕ್ತಾಯಗೊಂಡ ವಹಿವಾಟಿನಂತೆ ಬಿಎಸ್‌ಇ ಸೂಚ್ಯಂಕ 49, 517.11 ಪಾಯಿಂಟ್ಸ್ ತಲುಪಿದೆ. ಅಂದರೆ ಐತಿಹಾಸಿಕ 50 ಸಾವಿರ ಅಂಕಕ್ಕೆ ಕೇವಲ 482.89 ಪಾಯಿಂಟ್ಸ್ ಮಾತ್ರ ಬಾಕಿ ಉಳಿದಿವೆ. ಸಂಕ್ರಾಂತಿಗೆ ಸೆನ್ಸೆಕ್ಸ್ ಸಿಹಿ ಸಿಗುತ್ತದಾ ನೋಡಬೇಕಿದೆ.
ಬಿಎಸ್‌ಇ ಹಿನ್ನೋಟ :
ಬಾಂಬೆ ಷೇರು ಪೇಟೆ ಸ್ಥಾಪನೆಯಾದದ್ದು 1875ರಲ್ಲಿ, ಅದು ಏಷ್ಯಾದ ಅತ್ಯಂತ ಹಳೆಯ ಸ್ಟಾಕ್‌ಎಕ್ಸ್‌ಚೇಂಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1957 ಆ.31ರಂದು ಕೇಂದ್ರ ಸರಕಾರ ದೇಶದಲ್ಲಿ ಮಾನ್ಯತೆ ಪಡೆದ ಮೊದಲ ಷೇರು ಪೇಟೆ ಎಂಬ ಗೌರವವನ್ನೂ ನೀಡಿತು.
ಸೂಚ್ಯಂಕ ಶುರುವಾದದ್ದು ಯಾವಾಗ? :
ಷೇರು ಪೇಟೆ ವಹಿವಾಟು ಮೊದಲೇ ಶುರುವಾಗಿದ್ದರೂ ಸೂಚ್ಯಂಕ ಎಂಬ ವ್ಯವಸ್ಥೆ ಶುರುವಾದದ್ದು 1990ರಲ್ಲಿ. ಅದು ಕ್ಷಿಪ್ರವಾಗಿ ಏರುಗತಿಯ ಹಾದಿ ಹಿಡಿದದ್ದು 2 ಸಾವಿರನೇ ಇಸವಿಯ ಅನಂತರ. 2002ರಲ್ಲಿ ಸೂಚ್ಯಂಕ 6 ಸಾವಿರಕ್ಕೆ ಕಾಲಿಟ್ಟಿತ್ತು. ಆ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಕಂಪೆನಿಗಳು ಮುಂಚೂಣಿಯಲ್ಲಿದ್ದವು. ಅವುಗಳ ವಹಿವಾಟು ಬಿರುಸಾಗುತ್ತಾ ಸೂಚ್ಯಂಕದಲ್ಲಿ ಏರಿಕೆಯಾಗುತ್ತಾ ಬಂತು. 2019ರ ಎ.2ರಂದು ಸೂಚ್ಯಂಕ ದಾಖಲೆಯ ಅಂತರದಲ್ಲಿ ಮುಕ್ತಾಯದ ವಹಿವಾಟು ದಾಖಲಿಸಿತ್ತು.
ವರ್ಷ : ಘಟನೆ
1990-1999 : 1990 ಜು.25ರಂದು ಸೂಚ್ಯಂಕ 1 ಸಾವಿರಕ್ಕೆ.
1999ರಲ್ಲಿ 5 ಸಾವಿರ ದಾಟಿದ ಸೂಚ್ಯಂಕ.
2000 ದಿಂದ 2005 : ಸೂಚ್ಯಂಕ 7 ಸಾವಿರ ದಾಟಿತು.
ಅದೇ ವರ್ಷ ಜೂನ್, ಡಿಸೆಂಬರ್ ಅವಧಿಯಲ್ಲಿ
ಸೂಚ್ಯಂಕ 9 ಸಾವಿರಕ್ಕೆ ಏರಿಕೆ.
2006-2010 : 2006 ಫೆಬ್ರವರಿಯಲ್ಲಿ ಸೂಚ್ಯಂಕ 10,003ಕ್ಕೆ ಜಿಗಿತ ಅನಂತರದ ವರ್ಷಗಳಲ್ಲಿಯೂ ಉತ್ತಮ ಖರೀದಿ ಪ್ರಕ್ರಿಯೆಗಳಿಂದ ಸೂಚ್ಯಂಕದಲ್ಲಿ ಮತ್ತಷ್ಟು ಏರಿಕೆ. 2008-2010ರ ಅವಧಿ ಷೇರುಪೇಟೆಗೆ ಕರಾಳವಾತಾವರಣ. ಹಲವು ರೀತಿಯ ಹೊಯ್ದಾಟ,ಹಗರಣಗಳು ಬೆಳಕಿಗೆ.
2017-2019 : 2017ರಿಂದ 2018ರ ಅವಧಿಯಲ್ಲಿ 38 ಸಾವಿರ ಪಾಯಿಂಟ್ಸ್‌ಗೆ ಜಂಪ್. 2019 ಮೇ 23ರಂದು 40 ಸಾವಿರಕ್ಕೆ ಬಂದ ಸೂಚ್ಯಂಕ.
ಏರಿಕೆಗೆ ಕಾರಣಗಳೇನು? :
- ಜಗತ್ತಿನ ಹಲವು ದೇಶಗಳಲ್ಲಿ ಇನ್ನೂ ಕೊರೊನಾ ಭೀತಿ ಮುಕ್ತಾಯ ವಾಗಿಲ್ಲ. ಸೋಂಕಿಗೆ ಸೂಕ್ತ ರೀತಿಯ ಲಸಿಕೆ ನೀಡಲು ವಿವಿಧ ದೇಶಗಳ ಸರಕಾರಗಳು ಕ್ರಮ ಕೈಗೊಂಡದ್ದು.
- ಭಾರತದ ಮಟ್ಟಿಗೆ ಹೇಳುವುದಾದರೆ ಕೇಂದ್ರ ಸರಕಾರ ಈಗಾಗಲೇ ಪ್ರಕಟಿಸಿದ ಹಲವು ಆರ್ಥಿಕ ಪ್ಯಾಕೇಜ್‌ಗಳು ಅರ್ಥ ವ್ಯವಸ್ಥೆಯ ಮೇಲೆ ಬೀರಿರುವ ಧನಾತ್ಮಕ ಪರಿಣಾಮ.
- ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಹೆಚ್ಚಿದ ಆರ್ಥಿಕ ಚಟುವಟಿಕೆ. ಕೆಲವೊಂದು ಕ್ಷೇತ್ರಗಳು ಹಿನ್ನಡೆಯಲ್ಲಿ ಇದ್ದರೂ ಒಟ್ಟಾರೆ ಪರಿಸ್ಥಿತಿಯಲ್ಲಿ ಉಂಟಾಗಿರುವ ಸುಧಾರಣೆ.
- ಸೋಂಕು ಸಂಖ್ಯೆ ತಗ್ಗಿ, ದೇಶದಲ್ಲಿ ಜನರು ಮತ್ತೆ ಉದ್ಯೋಗ ಕ್ಷೇತ್ರಕ್ಕೆ ಮರಳಿರುವುದು.
- ಸಾಂಪ್ರದಾಯಿಕ ಹೂಡಿಕೆದಾರರ ಜತೆ ಹೊಸ ತಲೆಮಾರಿನ ಹೂಡಿಕೆದಾರರು ಪೇಟೆ ಪ್ರವೇಶಿಸಿದ್ದು ಮತ್ತು ಹೊಸ ಸ್ಟಾರ್ಟಪ್ ಕಂಪನಿಗಳು ಐಪಿಒ ಪ್ರಕಟಿಸಿದ್ದು.
ಗೂಳಿಯ ಓಟ ಮತ್ತು ಕರಡಿ ಕುಣಿತ :
ಷೇರು ಪೇಟೆಯಲ್ಲಿ ಕರಡಿ ಮತ್ತು ಗೂಳಿಗೆ ಏನು ಕೆಲಸ ಎಂದು ಯೋಚನೆ ಮಾಡಬೇಕಿಲ್ಲ. ಅವೆರಡು ಪಾರಿಭಾಷಿಕ ಶಬ್ದಗಳು. ಆರ್ಥವ್ಯವಸ್ಥೆ ಪೂರಕವಾಗಿ ಇದ್ದಾಗ, ಷೇರುಪೇಟೆಯಲ್ಲಿ ಹೆಚ್ಚಿನ ಷೇರುಗಳ ಖರೀದಿ, ಹೂಡಿಕೆ ಇದ್ದಾಗ ಸೆನ್ಸೆಕ್ಸ್ ಏರಿಕೆಯಾಗುತ್ತದೆ. ಇಂಥ ಬೆಳವಣಿಗೆಯನ್ನು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುವ ವೇಳೆ ಗೂಳಿಯ ಓಟ ಎಂದು ಕರೆಯಲಾಗುತ್ತದೆ. ಇದು ಹೂಡಿಕೆದಾರರಿಗೆ, ಷೇರು ಖರೀದಿ ಮಾಡುವವರಿಗೆ ಇಂಬು ಕೊಡುತ್ತದೆ.
ನಿರಾಶಾದಾಯಕ ವಾತಾವರಣದಿಂದ ಸೂಚ್ಯಂಕ ಇಳಿಮುಖವಾಗುತ್ತದೆ. ಖರೀದಿ ದಾರರು ತಮ್ಮಲ್ಲಿರುವ ಷೇರುಗಳನ್ನು ಮಾರುತ್ತಾರೆ. ಹೂಡಿಕೆದಾರರು ಬಂಡವಾಳ ಹೂಡ ಬೇಕೋ ಬೇಡವೋ ಎಂಬ ಬಗ್ಗೆ ಚಿಂತಿತರಾಗುತ್ತಾರೆ. ಇದರಿಂದಾಗಿ ಸೂಚ್ಯಂಕ ಕುಸಿತಗೊಂಡರೆ ಕರಡಿ ಕುಣಿತ ಎನ್ನಲಾಗುತ್ತದೆ.
ಕೋವಿಡ್ ಸೋಂಕು ಮತ್ತು ಅದನ್ನು ನಿಯಂತ್ರಿಸಲು ಲಾಕ್‌ಡೌನ್ ಹೇರಿದ್ದ ಕಾರಣದಿಂದಾಗಿ ಸಾಮಾನ್ಯ ಜೀವನಕ್ಕೆ ಭಾರೀ ತೊಂದರೆಯಾಗಿದೆ ನಿಜ. ಆದರೆ, ಒಂದು ಹಂತದಲ್ಲಿ ಷೇರು ಪೇಟೆಯಲ್ಲಿ ಕಳೆಗುಂದಿದ್ದ ವಾತಾವರಣ ಉಂಟಾಗಿದ್ದರೂ ಲಾಕ್‌ಡೌನ್ ಅನಂತರದ ದಿನಗಳಲ್ಲಿ ಷೇರುಪೇಟೆಯಲ್ಲಿ ಅತ್ಯುತ್ಸಾಹದ ಹೂಡಿಕೆಯ ವಾತಾವರಣ ಕಂಡುಬರುತ್ತಿದೆ. 2020ರ ಮಾರ್ಚ್ ಬಳಿಕ ಹೂಡಿಕೆದಾರರಿಗೆ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್ ಉತ್ತಮ ಲಾಭವನ್ನೇ ತಂದುಕೊಡುತ್ತಿದೆ. ಹಾಲಿ ವರ್ಷದ ಆರಂಭದಲ್ಲಿ ನಡೆದ ಏಳು ವಹಿವಾಟು ಸೂಚ್ಯಂಕವನ್ನು 1,500 ಪಾಯಿಂಟ್ಸ್‌ಗೆ ಜಿಗಿಯುವಂತೆ ಮಾಡಿದೆ.
ಇತಿಹಾಸದಲ್ಲಿ ಷೇರುಪೇಟೆ ಹಗರಣಗಳು :
ಹರ್ಷದ್ ಮೆಹ್ತಾ ಹಗರಣ- ಮೌಲ್ಯ 5 ಸಾವಿರ ಕೋಟಿ ರೂ. ಎಪ್ರಿಲ್ 1991 ರಿಂದ ಮೇ 1992
ಅಕೇತನ್ ಪಾರೆಖ್ ಹಗರಣ- ಮೌಲ್ಯ 1,200 ಕೋಟಿ ರೂ- 2005
ಸತ್ಯಂ ಪ್ರಕರಣ- ಮೌಲ್ಯ 14, 162 ಕೋಟಿ ರೂ.- 2015
ರೂಪ್ ಬನ್ಸಾಲಿ ಕೇಸು- ಮೌಲ್ಯ 1,200 ಕೋಟಿ ರೂ.- 1995
ಸುಬ್ರತಾ ರಾಯ್- ಮೌಲ್ಯ 24 ಸಾವಿರ ಕೋಟಿ ರೂ.- 2014
ಲಾಕ್‌ಡೌನ್ ಬಳಿಕ (ಫೆ.1, 2020 ರಿಂದ ಜ.11, 2021) :
ಐಟಿ ಮತ್ತು ಫಾರ್ಮಾ ಕಂಪೆನಿಗಳು ಮನೆಯಿಂದಲೇ ಕೆಲಸ ಮತ್ತು ಉದ್ಯೋಗಿಗಳ
ಆರೋಗ್ಯದ ಮೇಲೆ ನಿಗಾ ವಹಿಸಿದ್ದರಿಂದ ಅವುಗಳ ಷೇರುಗಳಿಗೆ ಹೆಚ್ಚಿನ ಬೇಡಿಕೆ ಬಂದವು.
– ಸದಾಶಿವ ಕೆ.