ಮುಂಬಯಿ: ನಿನ್ನೆ ಭಾರೀ ಪತನ ಕಂಡಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮಂಗಳವಾರ (ಏಪ್ರಿಲ್ 19) ಆರಂಭಿಕ ವಹಿವಾಟಿನಲ್ಲಿ 293.15 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಇದನ್ನೂ ಓದಿ:‘ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು’: ಶೃಂಗೇರಿಯಲ್ಲಿ ಸಿಎಂಗೆ ವ್ಯಂಗ್ಯದ ಸ್ವಾಗತ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 293.15 ಅಂಕಗಳಷ್ಟು ಏರಿಕೆಯಾಗಿದ್ದು, 57,459.89 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 102 ಅಂಕ ಏರಿಕೆಯೊಂದಿಗೆ 17,276.65 ಅಂಕಗಳ ಮಟ್ಟ ತಲುಪಿದೆ.
ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಹಣದುಬ್ಬರ ಹೆಚ್ಚಳ ಮತ್ತು ವಿದೇಶಿ ಬಂಡವಾಳದ ಹರಿವಿನ ಆತಂಕದಿಂದ ಹೂಡಿಕೆದಾರರು ಹೆಚ್ಚು ಆಸಕ್ತಿ ವಹಿಸದಿರುವುದು ಷೇರು ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಟಾಟಾ ಸ್ಟೀಲ್, ಮಹೀಂದ್ರ ಆ್ಯಂಡ್ ಮಹೀಂದ್ರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಾರುತಿ, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಲಾಭಗಳಿಸಿದೆ.
ಮತ್ತೊಂದೆಡೆ ಎಚ್ ಡಿಎಫ್ ಸಿ, ಇನ್ಫೋಸಿಸ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಎಚ್ ಸಿಎಲ್ ಟೆಕ್ನಾಲಜೀಸ್ ಷೇರುಗಳು ನಷ್ಟ ಕಂಡಿದೆ. ಸಿಯೋಲ್ , ಶಾಂಘೈ ಮತ್ತು ಟೋಕಿಯೋ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ ಜಿಗಿತ ಕಂಡಿದ್ದು, ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಕುಸಿತ ಕಂಡಿದೆ.