ಮುಂಬಯಿ : ದೇಶೀಯ ಹೂಡಿಕೆದಾರ ಸಂಸ್ಥೆಗಳು ಭರಾಟೆಯ ಶೇರು ಖರೀದಿಗೆ ಮುಂದಾದ ಕಾರಣ ಮುಂಬಯಿ ಶೇರು ಮಾರುಕಟ್ಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 123 ಅಂಕಗಳ ಮುನ್ನಡೆಯನ್ನು ಸಾಧಿಸಿ 35,670.39 ಅಂಕಗಳ ಮಟ್ಟಕ್ಕೆ ಏರಿತು.
ಇದೇ ವೇಳೆ ರಿಲಯನ್ಸ್ ಇಂಡಸ್ಟ್ರೀಸ್ ಶೇರು ಇಂದು ಕೂಡ ತನ್ನ ಏರಿಕೆಯನ್ನು ಮುಂದುವರಿಸಿದ್ದು 1,031 ರೂ.ಗೆ ಜಿಗಿಯುವ ಮೂಲಕ ಶೇ.1.08ರ ಏರಿಕೆಯನ್ನು ದಾಖಲಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 37.55 ಅಂಕಗಳ ಜಿಗಿತವನ್ನು ದಾಖಲಿಸಿ 10,809.60 ಅಂಕಗಳ ಮಟ್ಟಕ್ಕೇರಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 23.17 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,570.50 ಅಂಕಗಳ ಮಟ್ಟದಲ್ಲೂ, ನಿಫ್ಟಿ 3.90 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,775.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು 16 ಪೈಸೆಯ ಕುಸಿತವನ್ನು ಅನುಭವಿಸಿ 68.24 ರೂ. ಮಟ್ಟಕ್ಕೆ ಇಳಿಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಟಾಟಾ ಸ್ಟೀಲ್, ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.