ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಬಿಕ್ಕಟ್ಟು ಮುಂದುವರಿದಿರುವಂತೆಯೇ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಹಿನ್ನಡೆ ಕಂಡು ಬಂದಿದ್ದು ಮುಂಬಯಿ ಶೇರು ಪೇಟೆ ನಿರಂತರ ಏಳನೇ ದಿನವಾಗಿ ಗುರುವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಇದೇ ಮೇ 9-10ರಂದು ವಾಷಿಂಗ್ಟನ್ ನಲ್ಲಿ ಉಭಯ ದೇಶಗಳ ನಡುವಿನ ವಾಣಿಜ್ಯ ಬಿಕ್ಕಟ್ಟು ಶಮನಕ್ಕೆ 11ನೇ ಸುತ್ತಿನ ಮಾತುಕತೆ ನಡೆಯಲಿದ್ದು “ಒಂದೊಮ್ಮೆ ಅಮೆರಿಕ ನಮ್ಮ ಉತ್ಪನ್ನಗಳ ಮೇಲೆ ಶೇ.25 ಆಮದು ಸುಂಕ ಹೇರಿದಲ್ಲಿ ನಾವು ಕೂಡ ಅಮೆರಿಕನ್ ಉತ್ಪನ್ನಗಳಿಗೆ ತಕ್ಕುದಾದ ಆಮದು ಸುಂಕ ಹೇರುವೆವು’ ಎಂದು ಚೀನ ಹೇಳಿರುವುದು ಜಾಗತಿಕ ಶೇರು ಮಾರುಕಟ್ಟೆಗಳಿಗೆ ಅಪಥ್ಯವೆನಿಸಿದೆ.
ಇಂದು ಶಾಂಘೈ, ಹಾಂಕಾಂಗ್, ಟೋಕಿಯೋ ಮತ್ತು ಸೋಲ್ ಶೇರು ಮಾರುಕಟ್ಟೆಗಳು ಕೂಡ ನಷ್ಟದೊಂದಿಗೆ ಆರಂಭಗೊಂಡವು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 79.61 ಅಂಕಗಳ ನಷ್ಟದೊಂದಿಗೆ 37,709.52 ಅಂಕಗಳ ಮಟ್ಟದಲ್ಲೂ ರಾಷ್ಟೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22 ಅಂಕಗಳ ನಷ್ಟದೊಂದಿಗೆ 11,377.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 16 ಪೈಸೆಗಳ ಹಿನ್ನಡೆಗೆ ಗುರಿಯಾಗಿ 69.87 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಕಚ್ಚಾತೈಲ ಬೆಲೆ ಇಂದು ಶೇ.0.75ರ ಇಳಿಕೆಯನ್ನು ಕಂಡು ಬ್ಯಾರಲ್‌ಗೆ 69.87 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.